ಸಾರಾಂಶ
ಮಾಜಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಸಾಲಗಾರರು ದೇವಾಲಯಕ್ಕೆ ಬಂದು ತಾವು, ಬ್ಯಾಂಕಿನವರು ಹೇಳುವಂತೆ 2 ಲಕ್ಷ ರು. ಸಾಲ ಪಡೆದಿಲ್ಲ, ತಮಗೆ ಅನ್ಯಾಯವಾಗಿದೆ. ದೇವರೇ ನ್ಯಾಯ ಒದಗಿಸಬೇಕು ಎಂದು ಪ್ರಾರ್ಥಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಮೇಲೆ ಸಾಲ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಾಲಗಾರರು ಉಡುಪಿ ಸಮೀಪದ ಕರಂಬಳ್ಳಿಯ ವೆಂಕಟರಮಣ ದೇವಾಲಯದಲ್ಲಿ ಆಣೆ ಪ್ರಮಾಣ ಮಾಡಲು ನಿರ್ಧರಿಸಿದ್ದರು.ಆದರೆ ಅಷ್ಟಮಠಗಳ ಸ್ವಾಮೀಜಿಯೊಬ್ಬರ ಸೂಚನೆಯಂತೆ ಆಣೆ ಪ್ರಮಾಣ ಮಾಡದೇ ಕೇವಲ ಪ್ರಾರ್ಥನೆ ಸಲ್ಲಿಸಿ ಹಿಂತೆರಳಿದರು.ಮಾಜಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಸಾಲಗಾರರು ದೇವಾಲಯಕ್ಕೆ ಬಂದು ತಾವು, ಬ್ಯಾಂಕಿನವರು ಹೇಳುವಂತೆ 2 ಲಕ್ಷ ರು. ಸಾಲ ಪಡೆದಿಲ್ಲ, ತಮಗೆ ಅನ್ಯಾಯವಾಗಿದೆ. ದೇವರೇ ನ್ಯಾಯ ಒದಗಿಸಬೇಕು ಎಂದು ಪ್ರಾರ್ಥಿಸಿದರು.ಬ್ಯಾಂಕಿನ ಆಡಳಿತ ನಿರ್ದೇಶಕ ಶರತ್ ಕುಮಾರ್ ಶೆಟ್ಟಿ, ಸಾಲಗಾರರು ಸಾಲ ಪಡೆದ ಬಗ್ಗೆ ತಮ್ಮಲ್ಲಿ ಎಲ್ಲಾ ದಾಖಲೆಗಳಿವೆ. ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ನ್ಯಾಯ ಕೇಳುತ್ತೇವೆ ಎಂದರು.ಅವರನ್ನು ನಂಬುವುದಿಲ್ಲ- ಯಶ್ಪಾಲ್
ದೇವಾಲಯಕ್ಕೆ ಆಣೆ ಪ್ರಮಾಣ ಮಾಡಲು ಬಂದಿದ್ದವರಲ್ಲಿ ಬುರ್ಕಾ ಹಾಕಿಕೊಂಡ ಮಹಿಳೆಯರು ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಬ್ಯಾಂಕ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮೂರ್ತಿ ಪೂಜೆಯನ್ನು ವಿರೋಧಿಸುವವರನ್ನು ತಾನು ನಂಬುವುದಿಲ್ಲ. ರಾತ್ರಿ ದನದ ಮಾಂಸ ತಿಂದು ಬೆಳಗ್ಗೆ ದೇವಾಲಯಕ್ಕೆ ಬಂದು ಆಣೆ ಪ್ರಮಾಣ ಮಾಡಿದರೆ ಅದನ್ನು ನಾನು ಒಪ್ಪುವುದಿಲ್ಲ ಎಂದರು.