ವಾರಕ್ಕೆ 5 ದಿನಗಳ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್‌ ಯೂನಿಯನ್‌ಗಳು ಶುಕ್ರವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದವು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಾರಕ್ಕೆ 5 ದಿನಗಳ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್‌ ಯೂನಿಯನ್‌ಗಳು ಶುಕ್ರವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದವು.

ಯುನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್ಸ್‌ (ಯುಎಫ್‌ಬಿಯು) ನೇತೃತ್ವದಲ್ಲಿ ಸುಮಾರು ಏಳು ಬ್ಯಾಂಕ್‌ ಯೂನಿಯನ್‌ಗಳ ಕಾರ್ಯಕರ್ತರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಶನಿವಾರ ಮತ್ತು ಭಾನುವಾರ ಬ್ಯಾಂಕ್‌ಗಳಿಗೆ ರಜೆ ನೀಡಿ ವಾರದಲ್ಲಿ 5 ದಿನ ಮಾತ್ರ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಜೊತೆಗೆ ಪಿಂಚಣಿ ಸಂಬಂಧಿತ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕು. ಕೆಲಸದ ಸಾಮರ್ಥ್ಯದ ಆಧಾರದ ಮೇಲೆ ಪ್ರೋತ್ಸಾಹ ಯೋಜನೆಯನ್ನು ಜಾರಿಗೆ ತರಬೇಕು. ಎಂದು ಪ್ರತಿಭಟನಾನಿರತ ಬ್ಯಾಂಕ್‌ ನೌಕರರು ಒತ್ತಾಯಿಸಿದರು.

ಮುಷ್ಕರಕ್ಕೆ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಸೆ.28ರಿಂದ 30ರವರೆಗೆ ಮತ್ತೆ ಸತತ 3 ದಿನ ಬ್ಯಾಂಕ್‌ ಮುಷ್ಕರ ನಡೆಸಲಾಗುವುದು. ಅ.26ರಿಂದ ಅನಿರ್ದಿಷ್ಟಾವಧಿ ಬ್ಯಾಂಕ್‌ ಬಂದ್‌ ಮಾಡಲಾಗುವುದು. ಬೇಡಿಕೆಗಳು ಈಡೇರದಿದ್ದರೆ ಬ್ಯಾಂಕಿಂಗ್‌ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಪ್ರತಿಭಟನಾಕಾರರ ಎಚ್ಚರಿಸಿದರು.

ಎಸ್‌ಬಿಐ ಆವರಣದಲ್ಲಿ ಪ್ರತಿಭಟನೆ:

ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿರುವ ಎಸ್‌ಬಿಐ ಬ್ಯಾಂಕ್‌ ಆವರಣದಲ್ಲಿ ಬ್ಯಾಂಕ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮುಖಂಡರು 12 ದ್ವಿಪಕ್ಷೀಯ ಒಪ್ಪಂದದ ಪ್ರಕಾರ 5 ದಿನಗಳ ಬ್ಯಾಂಕ್‌ ಸೇವೆ ಜಾರಿ ತರಬೇಕು. ಕೆಲಸದ ಸಾಮರ್ಥ್ಯದ ಆಧಾರದ ಮೇಲೆ ಪ್ರೋತ್ಸಾಹಧನ ನೀಡುವ ಯೋಜನೆ ಸಮಾನಂತರವಾಗಿ ಇರಬೇಕು. ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ಆದಷ್ಟು ಬೇಗ ಜಾರಿಗೊಳಿಸುವ ಮೂಲಕ ಜನರಿಗೆ ಒಳ್ಳೆಯ ಸೇವೆ ನೀಡಲು ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.

ಸೇವೆಯಲ್ಲಿ ವ್ಯತ್ಯಯ

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಮುಷ್ಕರದಿಂದ ಗ್ರಾಹಕರ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಚೆಕ್‌ ನಗದೀಕರಣ, ಸಾಲ ಸೌಲಭ್ಯ ಪಡೆಯುವ ಸಂಬಂಧ ದಾಖಲಾತಿ ಸಲ್ಲಿಕೆ ಇತ್ಯಾದಿ ಸೇವೆ ಪಡೆಯಲು ಗ್ರಾಹಕರಿಗೆ ಆಗಲಿಲ್ಲ. ಆದರೆ ಪ್ರಮುಖ ಖಾಸಗಿ ಬ್ಯಾಂಕುಗಳ ಸೇವೆ ಎಂದಿನಂತೆ ಇರುವುದು ಕಂಡು ಬಂದಿತು.