ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕಾರವಾರದಲ್ಲಿ ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರವಾರ

ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕಾರವಾರದಲ್ಲಿ ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಕರೆಯ ಮೇರೆಗೆ ಮಂಗಳವಾರ ಸಂಜೆ ನಗರದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಜಮಾಯಿಸಿದ 80ಕ್ಕೂ ಹೆಚ್ಚು ನೌಕರರು, ಕೇಂದ್ರ ಸರ್ಕಾರದ ವಿಳಂಬ ಧೋರಣೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕ್‌ಗಳ ವಿಲೀನ, ಸಿಬ್ಬಂದಿ ಕೊರತೆ ಮತ್ತು ಹೊಸ ತಂತ್ರಜ್ಞಾನದ ಬಳಕೆಯ ಗೊಂದಲಗಳಿಂದಾಗಿ ಉದ್ಯೋಗಿಗಳ ಮೇಲೆ ಕೆಲಸದ ಒತ್ತಡ ವಿಪರೀತವಾಗಿದೆ. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತಿದ್ದು, ವಾರಕ್ಕೆ ಎರಡು ದಿನಗಳ ರಜೆ ಅತ್ಯಗತ್ಯ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಬಗ್ಗೆ ಮಾತನಾಡಿದ ಒಕ್ಕೂಟದ ಜಿಲ್ಲಾ ಸಂಘಟಕ ವಾಸುದೇವ ಶೇಟ್, 2023ರಲ್ಲಿಯೇ ಐದು ದಿನಗಳ ಬ್ಯಾಂಕಿಂಗ್ ಪದ್ಧತಿಗೆ ಐಬಿಎ ಒಪ್ಪಿಗೆ ಸೂಚಿಸಿದೆ. 2024ರ ವೇತನ ಪರಿಷ್ಕರಣೆ ಒಪ್ಪಂದದ ಭಾಗವಾಗಿಯೂ ಇದನ್ನು ಸೇರಿಸಲಾಗಿದೆ. ಆದರೆ, ಪ್ರಸ್ತಾವನೆ ಕೇಂದ್ರ ಹಣಕಾಸು ಇಲಾಖೆಯ ಮುಂದಿದ್ದು, ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ ಮಾರ್ಚ್ 2025ರಲ್ಲಿ ಇದೇ ವಿಚಾರವಾಗಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಅಂದು ಕಾರ್ಮಿಕ ಆಯುಕ್ತರ ಸಂಧಾನದ ಮೇರೆಗೆ ಮುಷ್ಕರ ಮುಂದೂಡಲಾಗಿತ್ತು. ಆದರೆ ಇಷ್ಟು ದಿನ ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ಮುಷ್ಕರ ನಡೆಸಲಾಗುವುದು ಮತ್ತು ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ನೌಕರರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾ ಬ್ಯಾಂಕ್ ಉದ್ಯೋಗಿಗಳ ಸಂಘದ ಪದಾಧಿಕಾರಿಗಳಾದ ಸನ್ನಿ ನಾಯಕ್, ಸಂದೀಪ ಹುಳಗೆಕರ್, ಸಮೀರ್ ಶೇಕ್, ಗಜಾನನ್ ನಾಯ್ಕ, ದಿಲೀಪ ಗುನಗಿ ಹಾಗೂ ಎಸ್‌ಬಿಐನ ಮಹೇಶ್, ಬೀನಾ ಜಿ. ಸೇರಿದಂತೆ ಪ್ರಮುಖರು ನೇತೃತ್ವ ವಹಿಸಿದ್ದರು.