ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಗೋಕಾಕ ನಗರದ ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್ ಬ್ಯಾಂಕಿನಲ್ಲಿ ₹74.87 ಕೋಟಿ ಅವ್ಯವಹಾರ ನಡೆದಿರುವ ಪ್ರಕರಣ ಸಂಬಂಧ ಬ್ಯಾಂಕಿನ ಐವರು ಸೇರಿ 14 ಜನರ ವಿರುದ್ಧ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಾಗರ ಹನಮಂತ ಸಬಕಾಳೆ, ವಿಶ್ವನಾಥ ಅಶೋಕ ಬಾಗಡೆ, ಸಂಭಾಜಿ ಮಲ್ಲಪ್ಪ ಘೋರ್ಪಡೆ, ಸಿದ್ದಪ್ಪ ಸದಾಶಿವ ಪವಾರ (ವ್ಯವಸ್ಥಾಪಕ), ದಯಾನಂದ ಶಿವಾಜಿ ಉಪ್ಪಿನ, ಸಂಜನಾ ಸಾಗರ ಸಬಕಾಳೆ, ಮಾಲವ್ವ ಹಣಮಂತ ಸಬಕಾಲೆ, ಗೌರವ್ವ ಬಾಳಪ್ಪ ಹವಾಲ್ದಾರ, ಚಂದ್ರವ್ವ ಹವಾಲ್ದಾರ, ಮಾಯವ್ವ ಮಾಯಪ್ಪ ಜಾಧವ, ಪರಸಪ್ಪ ಯಲ್ಲಪ್ಪ ಮಾಲೋಜಿ, ರಾಧಾ ಪರಸಪ್ಪ ಮಾಲೋಜಿ, ಸಂದೀಪ ಬಸವರಾಜ ಮರಾಠೆ ಮತ್ತು ಕಿರಣ ಸಕಾರಾಮ ಸುಪಲಿ ವಿರುದ್ಧ ದೂರು ದಾಖಲಾಗಿದೆ.
ಬ್ಯಾಂಕಿನ ಅಧ್ಯಕ್ಷ ಜಿತೇಂದ್ರ ಬಾಳಾಸಾಹೇಬ ಮಾಂಗಳೇಕರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಬ್ಯಾಂಕಿನ ಸಿಬ್ಬಂದಿ ಸಂಬಂಧಿಕರು, ಸ್ನೇಹಿತರ ಜೊತೆಗೂಡಿ ಬ್ಯಾಂಕಿನ ಕೋಟ್ಯಂತರ ರುಪಾಯಿ ಸಾಲ ಪಡೆದು, ಮರಳಿಸದೇ ವಂಚನೆ ಮಾಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದಾರೆ. ಇದರಿಂದಾಗಿ ಠೇವಣಿ ಇಟ್ಟ ಗ್ರಾಹಕರು, ಪಿಗ್ಮಿ ತುಂಬಿದ ವ್ಯಾಪಾರಿಗಳಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಸಾಲ ಪಡೆದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿರುವ ಆರೋಪಿಗಳು ಇತರೆಡೆ ಆಸ್ತಿ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.ಏನಿದು ಘಟನೆ?:ಜುಲೈ 2021ರಿಂದ ಏಪ್ರಿಲ್ 2023ರವರೆಗಿನ ಅವಧಿಯಲ್ಲಿ ಬ್ಯಾಂಕಿಗೆ ವಂಚನೆ ಮಾಡಲಾಗಿದೆ. ಈ ಮೊದಲು ಹಂತ ಹಂತವಾಗಿ ₹6.97 ಕೋಟಿ ಹಣ ಡಿಪಾಸಿಟ್ ಮಾಡಿದ್ದ ಆರೋಪಿಗಳು ಬಳಿಕ ಹಂತಹಂತವಾಗಿ ಡಿಪಾಸಿಟ್ ಹಣಕ್ಕಿಂತ ಅಧಿಕ ವ್ಯವಹಾರಿಕ ಸಾಲ, ಪಿಗ್ಮಿ ಲೋನ್ ಪಡೆದಿದ್ದಾರೆ. ಅಲ್ಲದೆ, ಸಂಬಂಧಿಕರು, ಸ್ನೇಹಿತರಿಗೂ ಸಾಲ ಮಂಜೂರು ಮಾಡಿಸಿದ್ದಾರೆ. ಮೂರು ವರ್ಷದ ಅವಧಿಯಲ್ಲಿ ಒಟ್ಟು ₹81.83 ಕೋಟಿ ಸಾಲ ಪಡೆದಿದ್ದು, ಇದರಲ್ಲಿ ₹74.86 ಕೋಟಿ ಸಾಲ ಮರುಪಾವತಿಸದೇ ವಂಚನೆ ಮಾಡಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗೋಕಾಕ ನಗರದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ₹74.86 ಕೋಟಿ ಅವ್ಯವಹಾರ ಪ್ರಕರಣದ ಕುರಿತು ಬ್ಯಾಂಕಿನ ಅಧ್ಯಕ್ಷರು ನೀಡಿದ ದೂರಿನ ಮೇರೆಗೆ ಐವರು ಸಿಬ್ಬಂದಿ ಸೇರಿ 14 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯಕ್ಕೆ ಮೂರು ತಂಡ ರಚಿಸಲಾಗಿದೆ. ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.-ಭೀಮಾಶಂಕರ ಗುಳೇದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಳಗಾವಿ