ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್ ಪಟ್ಟಣದ ಕೆನರಾ ಬ್ಯಾಂಕ್‌ನ ನಕಲಿ ಸೀಲ್ ಮತ್ತು ಸಹಿ ಮಾಡಿ ಪುರಸಭೆಗೆ ಲಕ್ಷಾಂತರ ರುಪಾಯಿಗಳನ್ನು ವಂಚಿಸಿದ್ದ ಆರೋಪಿ ಜೈಲು ಸೇರಿದ್ದಾನೆ. ಆದರೆ ಹಲವಾರು ವರ್ಷಗಳಿಂದ ಈ ದಂಧೆ ನಡೆಯುತ್ತಿದ್ದು ಇದಕ್ಕೆ ಪುರಸಭೆ ಸದಸ್ಯರು , ಸಿಬ್ಬಂದಿ ಹಾಗೂ ಬ್ಯಾಂಕ್ ಅಧಿಕಾರಿಗಳು ಕಾರಣರಾಗಿದ್ದಾರೆ. ಈ ಸಂಬಂಧ ಕುಣಿಗಲ್ ಶಾಸಕರು ಮೌನವಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಬಿ. ಎನ್. ಜಗದೀಶ್ ಆರೋಪಿಸಿದ್ದಾರೆ. ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯಲ್ಲಿ ಖಾತೆ ಕಂದಾಯ ಟ್ರೇಡಿಂಗ್ ಲೈಸೆನ್ಸ್ ಶುಲ್ಕ ಬಾಡಿಗೆ ಲೆಸೆನ್ಸ್ ಪರವಾನಿಗೆ ಹೀಗೆ ಹಲವಾರು ರೂಪದಲ್ಲಿ ಆದಾಯ ಬರುತ್ತದೆ. ಇದನ್ನ ಗುರಿಯಾಗಿಸಿದ ದಂಧೆಕೋರರು ಲಕ್ಷಾಂತರ ರುಪಾಯಿಗಳನ್ನು ಪುರಸಭೆಗೆ ಮೋಸ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಉದಾಹರಣೆಗೆ ಪಟ್ಟಣದ ಉಪ್ಪಾರ ಬೀದಿಯಲ್ಲಿ 12 ಲಕ್ಷಕ್ಕಿಂತ ಹೆಚ್ಚು ನಷ್ಟ ಆಗಿದೆ ಎಂದರು. ಪುರಸಭೆ ಅಧಿಕಾರಿಗಳು ಕೇವಲ 25 ಲಕ್ಷ ಆಗಿರಬಹುದು ಅಂದಾಜು ಮಾಡುತ್ತಿದ್ದಾರೆ. ಆದರೆ ಹಲವಾರು ವರ್ಷಗಳಿಂದ ಈ ಮೋಸ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕೆಲವು ಪುರಸಭೆ ಸದಸ್ಯರ ಕುಮ್ಮಕ್ಕು ಇದೆ. ಬ್ಯಾಂಕ್ ಅಧಿಕಾರಿಗಳು ಸಾಮಿಲಾಗಿರುವುದಕ್ಕೆ ಇದುವರೆಗೂ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂಬುದು ಸಾಕ್ಷಿಯಾಗಿದೆ. ಪುರಸಭೆಯಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದರೂ ಶಾಸಕರು ಇದುವರೆಗೂ ಯಾವುದೇ ಸಭೆಯಲ್ಲಿ ಭಾಗವಹಿಸಿಲ್ಲ. ಹಲವರು ಸಮಸ್ಯೆಗಳಿದ್ದರೂ ಕೂಡ ಸ್ಪಂದಿಸುತ್ತಿಲ್ಲ. ಬಜೆಟ್ ಮೀಟಿಂಗ್ ಸೇರಿದಂತೆ ಯಾವುದೇ ಸಭೆ ಸಮಾರಂಭದಲ್ಲಿ ಭಾಗವಹಿಸದೆ ಇರುವುದು ಪುರಸಭೆ ಮೇಲೆ ಅವರಿಗಿರುವ ಉದಾಸಿನತೆ ತೋರಿಸುತ್ತದೆ. ಇಂತಹ ಭ್ರಷ್ಟಾಚಾರ , ಹಗರಣಗಳು ನಡೆಯಲು ಅವರೂ ಸಹ ಕಾರಣರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಿ ಅವರನ್ನು ಅಮಾನತು ಮಾಡಬೇಕೆಂದರು. ಪುರಸಭಾ ಸದಸ್ಯ ಶ್ರೀನಿವಾಸು, ಪ್ರಕಾಶ್ ಗುರುಪ್ರಸಾದ್, ಸೇರಿದಂತೆ ಇತರ ಜೆಡಿಎಸ್ ಕಾರ್ಯಕರ್ತರು ಇದ್ದರು