ಬ್ಯಾಂಕಿನಲ್ಲಿ ದರೋಡೆಗೆ ವಿಫಲ ಯತ್ನ; ಬೆಂಕಿ ಹಾಕಿ ಪರಾರಿ

| Published : Nov 13 2025, 01:15 AM IST

ಬ್ಯಾಂಕಿನಲ್ಲಿ ದರೋಡೆಗೆ ವಿಫಲ ಯತ್ನ; ಬೆಂಕಿ ಹಾಕಿ ಪರಾರಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಉಮ್ಮಚಗಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ದುಷ್ಕರ್ಮಿಗಳಿಂದ ದರೋಡೆಗೆ ವಿಫಲ ಯತ್ನ ಬುಧವಾರ ಬೆಳಗಿನ ಜಾವ ನಡೆದಿದೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ತಾಲೂಕಿನ ಉಮ್ಮಚಗಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ದುಷ್ಕರ್ಮಿಗಳಿಂದ ದರೋಡೆಗೆ ವಿಫಲ ಯತ್ನ ಬುಧವಾರ ಬೆಳಗಿನ ಜಾವ ನಡೆದಿದೆ.

ಸೇಫ್ ಲಾಕರ್, ಕ್ಯಾಶ್ ಕೌಂಟರ್ ಬಳಿ ಕಿಟಕಿ ಕೊರೆದು ಹೋಗುವ ಪ್ರಯತ್ನದಲ್ಲಿದ್ದಾಗ ಸೈರನ್ ಶಬ್ದದಿಂದ ಹೆದರಿ ಅಲ್ಲಿ ಬೆಂಕಿ ಹಾಕಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಕ್ಷಣ ಸ್ಥಳೀಯ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಶೇರೂಗಾರ ನೇತೃತ್ವದಲ್ಲಿ ಅಲ್ಲಿನ ಸಾರ್ವಜನಿಕರು ಬೆಂಕಿಯನ್ನು ನಂದಿಸಿ ಪೋಲೀಸರಿಗೆ ಮಾಹಿತಿ ನೀಡಿದರು. ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಯಲ್ಲಾಪುರ ಪಿಐ ರಮೇಶ್ ಹಾನಾಪುರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಹಿಡಿಯಲು ತಂಡ ರಚಿಸಲಾಗಿದೆ.

ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ:

ಬೆಳಗ್ಗೆ ಎಂದಿನಂತೆ ಸ್ನೇಹಿತರೊಂದಿಗೆ ವಾಕಿಂಗ್‌ಗೆ ಹೊರಟ ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಬ್ಯಾಂಕ್ ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಹತ್ತಿರ ಬಂದು ನೋಡುವ ಹೊತ್ತಿಗೆ ಬ್ಯಾಂಕಿನೊಳಗೆ ಬೆಂಕಿ ಧಗಧಗನೆ ಉರಿಯುತ್ತಿತ್ತು.

ಅದನ್ನು ಕಂಡ ತಕ್ಷಣ ಸ್ಥಳೀಯ ಕೆಲವು ಯುವಕರನ್ನು ಒಟ್ಟಾಗಿಸಿ ಬ್ಯಾಂಕಿನ ಕಿಟಕಿಯೊಂದರ ಗಾಜನ್ನು ಒಡೆದು ನೀರನ್ನು ಹಾಯಿಸುವ ಮೂಲಕ ಬೆಂಕಿಯನ್ನು ನಂತರ ಶಮನಿಸುವ ಕಾರ್ಯ ಯಶಸ್ವಿಯಾಯಿತು. ಅಷ್ಟರಲ್ಲಾಗಲೇ ಬ್ಯಾಂಕಿನ ಪೀಠೋಪಕರಣ, ಕಂಪ್ಯೂಟರ್‌ಗಳು ಬೆಂಕಿಗಾಹುತಿಯಾಗಿದ್ದು, ಬ್ಯಾಂಕಿನ ಸೇಪ್ ರೂಂ ಸೇರಿ ಇಡೀ ಬ್ಯಾಂಕೇ ಹೊತ್ತಿ ಉರಿದು ಆಗಬಹುದಾಗಿದ್ದ ದೊಡ್ಡ ಅನಾಹುತವೊಂದು ಸ್ವಲ್ಪದರಲ್ಲಿಯೇ ತಪ್ಪಿದಂತಾಯಿತು.

ಕುಪ್ಪಯ್ಯ ಪೂಜಾರಿ, ಗೋವಿಂದ ಬಸಾಪುರ, ಬಾಬು ಬಿಲ್ಲವ, ರಾಮ ಪೂಜಾರಿ, ಹೂವಿನಂಗಡಿ ಚಂದ್ರು, ಪುಟ್ತಮ್ಮ, ಲಕ್ಷ್ಮೀಕಾಂತ ಪೂಜಾರಿ, ನಾರಾಯಣ ನಾಯ್ಕ, ಸಂತೋಷ ನಾಟೇಕರ್ ಮೊದಲಾದವರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.