ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ದರೋಡೆ : ಆರೋಪಿಗಳ ಪತ್ತೆಗೆ 8 ತಂಡ ರಚನೆ

| Published : Jan 20 2025, 01:31 AM IST / Updated: Jan 20 2025, 01:42 PM IST

ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ದರೋಡೆ : ಆರೋಪಿಗಳ ಪತ್ತೆಗೆ 8 ತಂಡ ರಚನೆ
Share this Article
  • FB
  • TW
  • Linkdin
  • Email

ಸಾರಾಂಶ

ದರೋಡೆಕೋರರು ಪರಾರಿಯಾಗಿರಬಹುದಾದ ಕೇರಳ, ತಮಿಳುನಾಡು, ಮುಂಬೈ, ಗೋವಾದಲ್ಲೂ ಪೊಲೀಸರ ತನಿಖೆ ಮುಂದುವರಿದಿದೆ. ಸಿಸಿಟಿವಿ ದಾಖಲೆ ಹಾಗೂ ಇತರೆ ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

 ಮಂಗಳೂರು/ಉಳ್ಳಾಲ : ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಕೋಟ್ಯಂತರ ರು. ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ದರೋಡೆ ಆರೋಪಿಗಳ ಬಗ್ಗೆ ಲಭ್ಯವಾದ ಸೂಕ್ಷ್ಮ ಮಾಹಿತಿಗಳ ಹಿನ್ನೆಲೆಯಲ್ಲಿ ಈ ಶಂಕಿತ ವ್ಯಕ್ತಿಗಳ ತೀವ್ರ ವಿಚಾರಣೆ ನಡೆಸಲಾಗಿದೆ.

2017ರಲ್ಲಿ ಇದೇ ಬ್ಯಾಂಕ್‌ ದರೋಡೆ ಪ್ರಕರಣದ ಆರೋಪಿಗಳನ್ನೂ ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಒಟ್ಟು ಎಂಟು ಪೊಲೀಸ್ ತಂಡ ರಚಿಸಿ ಮಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಸಿಸಿಬಿ ಸೇರಿ ಬೇರೆ ಠಾಣೆಗಳ ಪೊಲೀಸರ ಎಂಟು ತಂಡ ರಚಿಸಲಾಗಿದೆ.

ಕಾರಿನ ಅಸಲಿ ನಂಬರ್ ಪ್ಲೇಟ್ ಪತ್ತೆಹಚ್ಚಿರುವ ಪೊಲೀಸರು, ಕಾರಿನ ಮಾಲಕ ತಮಿಳುನಾಡು ಮೂಲದ ವ್ಯಕ್ತಿಯದ್ದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆತನ ಪತ್ತೆಗೆ ಒಂದು ತಂಡ ತಮಿಳುನಾಡಿಗೆ ತೆರಳಿದೆ. ಕಳವು ನಡೆಸಿದ ಚಿನ್ನವನ್ನು ಬೇರೆ ಕಾರಿನಲ್ಲಿ ಕೊಂಡೊಯ್ಯಲಾಗಿರುವುದು ತಲಪಾಡಿ ಟೋಲ್ ಬೂತ್‌ನಲ್ಲಿ ಸಿಕ್ಕ ಕಾರಿನ ಫೋಟೋದಲ್ಲಿ ಇಬ್ಬರಿರುವುದರಿಂದ ಸ್ಪಷ್ಟವಾಗಿದೆ.

ಅದರಂತೆ ಇನ್ನೊಂದು ಕಾರಿನ ಶೋಧ ಮುಂದುವರಿಸಿದಾಗ ಹೊರಜಿಲ್ಲೆಯ ಶವರ್ಲೆಟ್ ಕಾರು ರಸ್ತೆಯಲ್ಲಿ ಸಾಗಿರುವುದು ಕಂಡುಬಂದಿದೆ. ಆ ಕಾರಿನ ವಿಚಾರಣೆ ನಡೆಸಿದಾಗ ಕಿನ್ಯಾದಲ್ಲಿರುವ ಖಾಸಗಿ ಶಾಲೆಗೆ ವಿದ್ಯಾರ್ಥಿಯನ್ನು ಕಾಣಲು ಬಂದ ಹೆತ್ತವರ ಕಾರು ಅದಾಗಿತ್ತು ಎಂಬುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಚಿನ್ನ ಸಾಗಾಟದ ಕಾರಿನ ಪತ್ತೆಗಾಗಿ ಮಂಗಳೂರು ಉಡುಪಿ ಮಾರ್ಗದ ಹಲವು ಸಿಸಿಟಿವಿ ದಾಖಲೆಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ.

ಬೇರೆ ಕಾರಿನಲ್ಲಿ ಚಿನ್ನ ಸಾಗಾಟ?:

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ದರೋಡೆಕೋರರು ಕದ್ದ ಚಿನ್ನವನ್ನು ಸಾಗಿಸಿದ್ದು ಫಿಯೆಟ್ ಕಾರಿನಲ್ಲಿ ಅಲ್ಲ

ಬದಲಿಗೆ ಮತ್ತೊಂದು ಕಾರು ಶವರ್ಲೆಟ್‌ನಲ್ಲಿ ಎಂಬ ಮಾಹಿತಿ ಪೊಲೀಸರಿಗೆ ಗೊತ್ತಾಗಿದೆ.

ಮಂಗಳೂರು ಕಡೆಗೆ ಶವರ್ಲೆಟ್ ಕಾರಿನಲ್ಲಿ ಬಂದ ಮೂವರು ದರೋಡೆಕೋರರು, ಮಂಗಳೂರಿನಲ್ಲಿ ಮೊಬೈಲ್ ಬಿಸಾಕಿ ಬಂಟ್ವಾಳ ಕಡೆ ತೆರಳಿರುವ ಸಾಧ್ಯತೆ ಹೇಳಲಾಗುತ್ತಿದೆ. ಬಿ.ಸಿ‌.ರೋಡ್ ಟೋಲ್ ಹಾಗೂ ಸಿಸಿಟಿವಿ ತಪ್ಪಿಸಲು ಟೋಲ್‌ನ ಪಕ್ಕದ ಸಂಪರ್ಕ ರಸ್ತೆ ಬಳಸಿ ಪರಾರಿಯಾಗಿರಬಹುದು ಎಂದು ಹೇಳಲಾಗುತ್ತಿದೆ. ಬಳಿಕ ವಿಟ್ಲ ಮೂಲಕ ಕೇರಳ ಗಡಿ ತಲುಪಿ ಕೇರಳದ ಗ್ರಾಮೀಣ ಪ್ರದೇಶ ತಲುಪಿರುವ ಸಾಧ್ಯತೆ ಇದೆ.

ದರೋಡೆಕೋರರು ಪರಾರಿಯಾಗಿರಬಹುದಾದ ಕೇರಳ, ತಮಿಳುನಾಡು, ಮುಂಬೈ, ಗೋವಾದಲ್ಲೂ ಪೊಲೀಸರ ತನಿಖೆ ಮುಂದುವರಿದಿದೆ. ಸಿಸಿಟಿವಿ ದಾಖಲೆ ಹಾಗೂ ಇತರೆ ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಉತ್ತರ ಭಾರತಕ್ಕೆ ಪರಾರಿ ಶಂಕೆ: ದರೋಡೆಕೋರರು ಉತ್ತರ ಭಾರತಕ್ಕೆ ಪರಾರಿಯಾಗಿರುವ ಶಂಕೆ ಮೇರೆಗೆ ಪೊಲೀಸರು ಅತ್ತ ಕಡೆಯೂ ತನಿಖೆ ಕೇಂದ್ರೀಕರಿಸಿದ್ದಾರೆ.

ಮೂಲಗಳ ಪ್ರಕಾರ ಉತ್ತರ ಭಾರತದಲ್ಲಿ ದರೋಡೆಕೋರರ ಚಲನವಲನ ಪತ್ತೆಯಾಗಿದೆ. ದರೋಡೆಕೋರರು ರೈಲು ಮೂಲಕ ಉತ್ತರ ಭಾರತಕ್ಕೆ ಪಲಾಯನ ಮಾಡಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರ ತಂಡ ಬೆಂಗಳೂರಿನಿಂದ ವಿಮಾನ ಮೂಲಕ ಉತ್ತರ ಭಾರತಕ್ಕೆ ದೌಡಾಯಿಸಿದೆ.

ಚಿನ್ನದ ಮೇಲೆ ಸಾಲ ನೀಡುವ ಬ್ಯಾಂಕ್‌ಗಳೇ ಟಾರ್ಗೆಟ್‌?: ಒಡಿಶಾದ ಬ್ಯಾಂಕ್ ದರೋಡೆಗೂ ಕೋಟೆಕಾರು ಬ್ಯಾಂಕ್ ದರೋಡೆಗೂ ಸಾಮ್ಯತೆ ಬಗ್ಗೆ ಪೊಲೀಸರು ತರ್ಕಿಸುತ್ತಿದ್ದಾರೆ. ಮುಖ್ಯವಾಗಿ ಚಿನ್ನದ ಮೇಲೆ ಸಾಲ ನೀಡುವ ಬ್ಯಾಂಕ್‌ಗಳೇ ಆಗಂತುಕರ ಟಾರ್ಗೆಟ್ ಆಗಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ.

ಕೋಟೆಕಾರು ಬ್ಯಾಂಕ್ ದರೋಡೆಯ 15 ದಿನಗಳ ಹಿಂದೆ ಒಡಿಶಾದಲ್ಲಿ ಬ್ಯಾಂಕ್‌ ದರೋಡೆ ನಡೆದಿತ್ತು. ಮಣಪ್ಪುರಂ ಫೈನಾನ್ಸ್‌ನಿಂದ ಹಾಡಹಗಲೇ 30 ಕೋಟಿ ರು.ಗಳ ಚಿನ್ನಾಭರಣ ಲೂಟಿ ಮಾಡಲಾಗಿತ್ತು. ಕೆಲವೇ ನಿಮಿಷಗಳಲ್ಲಿ ದರೋಡೆ ಮಾಡಿ ದರೋಡೆಕೋರರು ಎಸ್ಕೇಪ್‌ ಆಗಿದ್ದರು. ಬಳಿಕ ಬಿಹಾರ ಮೂಲದ ಇಬ್ಬರ ಬಂಧನ ಆಗಿತ್ತು. ಬಿಹಾರದ ಹಾಜೀಪುರದ ಹಲವರು ದರೋಡೆ ಕೃತ್ಯಗಳಲ್ಲೇ ಭಾಗಿಯಾಗಿರುವುದು ಪತ್ತೆಯಾಗಿತ್ತು.

ಗೋಲ್ಡ್ ಬ್ಲ್ಯಾಕ್ ಮಾರ್ಕೆಟ್‌ನತ್ತ ಕಣ್ಣು: ಪೊಲೀಸರು ಮುಂಬೈ ಗೋಲ್ಡ್‌ ಬ್ಲ್ಯಾಕ್‌ ಮಾರ್ಕೆಟ್‌ನತ್ತ ತನಿಖೆಯ ದೃಷ್ಟಿ ಹರಿಸಿದ್ದಾರೆ. ಗೋಲ್ಡ್ ಬ್ಲಾಕ್ ಮಾರ್ಕೆರ್ಟ್‌ಗಳ ಮೇಲೆ ನಿಗಾ ಇರಿಸಲು ಪ್ರತ್ಯೇಕ ಮೂರು ತಂಡಗಳನ್ನು ರಚಿಸಲಾಗಿದೆ. ಈ ಮೂರು ತಂಡಗಳು ಮುಂಬೈ, ಕೇರಳ, ತಮಿಳುನಾಡಿಗೆ ತೆರಳಿ ತನಿಖೆಗೆ ಮುಂದಾಗಿದೆ. ದರೋಡೆಕೋರರು ಕದ್ದ ಚಿನ್ನವನ್ನು ಬ್ಲಾಕ್ ಮಾರ್ಕೆರ್ಟ್‌ನಲ್ಲಿ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಕೇರಳ, ತಮಿಳುನಾಡು, ಮುಂಬೈ ಪೊಲೀಸರ ಸಹಾಯ ಪಡೆದು ತನಿಖೆ ತೀವ್ರಗೊಳಿಸಲಾಗಿದೆ.

ಶೀಘ್ರವೇ ಸೊಸೈಟಿ, ಬ್ಯಾಂಕ್‌ ಮುಖ್ಯಸ್ಥರ ಸಭೆ

ಕೋಟೆಕಾರು ಬ್ಯಾಂಕ್ ಕೋಟ್ಯಂತರ ರು.ಗಳ ಚಿನ್ನಾಭರಣ ದರೋಡೆ ಪ್ರಕರಣ ಬಳಿಕ ಮಂಗಳೂರಿನ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಮಂಗಳೂರು ಸೇರಿದಂತೆ ದ‌.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಸಹಕಾರಿ ಸೊಸೈಟಿ ಹಾಗೂ ಬ್ಯಾಂಕ್ ಮುಖ್ಯಸ್ಥರ ಸಭೆಯನ್ನು ಶೀಘ್ರವೇ ಕರೆಯುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿ ಬ್ಯಾಂಕ್‌ಗಳ ಭದ್ರತೆ ಕುರಿತಂತೆ ಸಭೆ ನಡೆಸಬೇಕು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಠಾಣಾ ವ್ಯಾಪ್ತಿಗಳಲ್ಲಿರುವ ಬ್ಯಾಂಕ್ ಹಾಗೂ ಸಹಕಾರಿ ಸೊಸೈಟಿ

ಮುಖ್ಯಸ್ಥರು ಹಾಗೂ ಅಧಿಕಾರಿಗಳೊಂದಿಗೆ ಆಯಾ ಠಾಣಾ ಅಧಿಕಾರಿಗಳ ಸಭೆ ನಡೆಯಲಿದೆ. ಬ್ಯಾಂಕ್/ಸೊಸೈಟಿಗಳ ಭದ್ರತೆಯ ಕುರಿತು ಪೊಲೀಸರು ಸೂಕ್ತ ಕಾನೂನು ತಿಳಿವಳಿಕೆ ನೀಡುತ್ತಿದ್ದಾರೆ. ಎಲ್ಲ ಬ್ಯಾಂಕ್‌ಗಳು ಭದ್ರತೆ ಖಾತ್ರಿಪಡಿಸಲು ಸೂಚನೆ ನೀಡಿವೆ. ಸೆಕ್ಯೂರಿಟಿ ನೇಮಕ, ಸಿಸಿಟಿವಿ ಸೇರಿ ಹಲವು ವಿಚಾರದಲ್ಲಿ ಅಲರ್ಟ್ ಇರುವಂತೆ ಪೊಲೀಸ್‌ ಅಧಿಕಾರಿಗಳು ಸೂಚನೆ ನೀಡಿದ್ದಾರೆ.