ಸಾರಾಂಶ
ಶ್ರೀರಂಗಪಟ್ಟಣ: ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಪಟ್ಟಣದ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷವಾಗಿ ನೋಟಿನಿಂದ ಅಲಂಕಾರ ಮಾಡಿ ಪೂಜಿಸಲಾಯಿತು. ದೇವಾಲಯದ ಮುಖ್ಯ ಅರ್ಚಕ ಲಕ್ಷ್ಮೀಶ್ ನೇತೃತ್ವದ ತಂಡ ಚಾಮುಂಡೇಶ್ವರಿ ದೇವಿ ಸೇರಿದಂತೆ ಗರ್ಭಗುಡಿಯನ್ನು ವಿಶೇಷವಾಗಿ 10 ರು. 20, 50, 100,200, 500 ರು. ಮುಖ ಬೆಲೆಯ ನೋಟುಗಳಿಂದ ಸುಮಾರು 4.5 ಲಕ್ಷ ರು. ಮೌಲ್ಯದ ಹಣದಿಂದ ಅಲಂಕಾರ ಮಾಡಿರುವುದು ಭಕ್ತರ ಕಣ್ಮನ ಸೆಳೆಯಿತು. ವಿಶೇಷವಾಗಿ ನೋಟಿನಿಂದ ಅಲಂಕಾರಗೊಂಡು ಧನಲಕ್ಷ್ಮೀ ರೂಪದಲ್ಲಿ ಕಂಗೊಳಿಸುತ್ತಿರುವ ಶ್ರೀ ಚಾಮುಂಡೇಶ್ವರಿ ದೇವಿ ನೋಡಲು ಭಕ್ತರು ಪಟ್ಟಣ ಮಾತ್ರವಲ್ಲದೆ, ಗ್ರಾಮಾಂತರ ಪ್ರದೇಶದಿಂದಲೂ ಆಗಮಿಸಿ ದೇವಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಬಂದ ಭಕ್ತರಿಗೆ ತೀರ್ಥ ಪ್ರಸಾದವನ್ನು ಅರ್ಚಕರು ನೀಡುತ್ತಿದ್ದರು. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಪ್ರತಿವರ್ಷದಂತೆ ಈ ಬಾರಿಯೂ ಸಹ ವಿವಿಧ ಬಗೆಯ ನೋಟುಗಳಿಂದ ಧನಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಭಕ್ತರು ಬೆಳಗ್ಗಿನಿಂದ ಸಂಜೆವರೆಗೂ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ ಭಕ್ತಭಾವ ಮೆರೆದರು.