ಸಾರಾಂಶ
ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ.
ಬಳ್ಳಾರಿ: ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ಹಾಗೂ ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಇಲ್ಲಿನ ಬಿಮ್ಸ್ ಆಸ್ಪತ್ರೆಯ ಎದುರು ಸ್ಥಾನಿಕ ವೈದ್ಯರು ನಡೆಸುತ್ತಿರುವ ಹೋರಾಟ ಮುಂದುವರಿದಿದೆ.
ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪ್ರಕರಣದಲ್ಲಿ ಯಾವುದೇ ಪಕ್ಷಗಳು ರಾಜಕೀಯ ಮಾಡದೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಸ್ಥಾನಿಕ ವೈದ್ಯರ ಶಿಷ್ಯ ವೇತನ ಪರಿಷ್ಕರಣೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ವಹಿಸುತ್ತಿಲ್ಲ. ಕಳೆದ ಆರು ತಿಂಗಳಿನಿಂದಲೂ ಈ ಕುರಿತು ಹೋರಾಟಗಳನ್ನು ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಕ್ರಮವಹಿಸದೆ ನಿರ್ಲಕ್ಷಿಸಲಾಗಿದೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸ್ಥಾನಿಕ ವೈದ್ಯರ ಶಿಷ್ಯವೇತನ ಶೇ.50ರಷ್ಟೂ ಸಹ ಇಲ್ಲ. ಇದರಿಂದ ವೈದ್ಯರ ಕುಟುಂಬ ನಿರ್ವಹಣೆ ಸಹ ಕಷ್ಟವಾಗುತ್ತಿದೆ. ಸ್ಥಾನಿಕ ವೈದ್ಯರಿಗೆ ನೀಡಬೇಕಾಗಿರುವ ಶಿಷ್ಯವೇತನದಲ್ಲಿ ತಾರತಮ್ಯ ನೀತಿಯನ್ನು ಬಿಡಬೇಕು. ಹೊರ ರಾಜ್ಯಗಳಂತೆಯೇ ಇಲ್ಲಿಯೂ ಶಿಷ್ಯವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎನ್.ಸಿ.ಮಂಜುನಾಥ್, ಡಾ.ಕಾರ್ತೀಕ್ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಶಿಷ್ಯವೇತನಕ್ಕಾಗಿ ಆಗ್ರಹಿಸಿ ಸ್ಥಾನಿಕ ವೈದ್ಯರು ಕಳೆದ ದಿನಗಳಿಂದ ಬಿಮ್ಸ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ಪ್ರತಿಭಟನೆಯಿಂದಾಗಿ ಬಿಮ್ಸ್ ಆಸ್ಪತ್ರೆಯ ಆರೋಗ್ಯ ಸೇವೆಯಲ್ಲಿ ಒಂದಷ್ಟು ವ್ಯತ್ಯಯವಾಗಿದೆ. ಪ್ರತಿಭಟನೆಯಿಂದ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಿದ್ದೇವೆ ಎಂದು ಬಿಮ್ಸ್ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.