ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಆರ್ಯ ಈಡಿಗ ಸಮಾಜ ಹಾಗೂ ಹಿಂದುಳಿದ ವರ್ಗದವರಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಅವರ ಜಯಂತಿ ಕಾರ್ಯಕ್ರಮ ಸರಳ ರೀತಿಯಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾ ಆರ್ಯ ಈಡಿಗ ಸಮಾಜ ಹಾಗೂ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಡಾ. ರಾಜಶೇಖರ್ ಸೇಡಂಕರ್ ಹೇಳಿದರು.ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರನಲ್ಲಿ ಭೂಕುಸಿತದಿಂದ 7 ಜನ ಕುಲಬಾಂಧವರು ಪ್ರಾಣ ಕಳೆದುಕೊಂಡಿದ್ದು ಈ ಪ್ರಯುಕ್ತ ಆ.20ರಂದು ಬೆಳಗ್ಗೆ 11ಕ್ಕೆ ಯಾವುದೇ ರಥಯಾತ್ರೆ, ಮೆರವಣಿಗೆ ನಡೆಸದೆ, ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ ಖಂಡ್ರೆ, ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಇತರೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಬೂಡಾ ಅಧ್ಯಕ್ಷರು, ನಗರ ಸಭೆ ಅಧ್ಯಕ್ಷರು ಸೇರಿದಂತೆ ಇತರರು ಪಾಲ್ಗೊಳ್ಳುವರು. ಎರಡು ಸಮಾಜಗಳ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.ಹಿಂದುಳಿದ ವರ್ಗಗಳ ಮುಖಂಡರಾದ ಬಸವರಾಜ ಮಾಳಗೆ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ದೇವರಾಜ ಅರಸ್ ಅವರ ವಿಚಾರ ಧಾರೆ ಒಂದೇ ಆಗಿರುವುದರಿಂದ ಇಬ್ಬರ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಹಿಂದುಳಿದ ವರ್ಗದವರ ಏಳಿಗೆಗೆ ರೂಪರೇಷ ಸಿದ್ದಪಡಿಸಿದ್ದ ಅರಸು ಅವರ ಜಯಂತಿ ಮತ್ತು ಎಲ್ಲ ಧರ್ಮದವರನ್ನು ಒಂದೇ ಎಂದು ಸಾರಿದ ಸಂತ ನಾರಾಯಣ ಗುರುಗಳ ಜಯಂತಿಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮನ್ನಾನ್ ಸೇಠ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದು, ಮುಸಲ್ಮಾನ್, ಸಿಖ್, ಬೌದ್ಧ ಹಾಗೂ ಜೈನ ಎನ್ನದೆ ಎಲ್ಲರನ್ನು ಪ್ರೀತಿಸಿದ ಮಹಾನ ದಾರ್ಶನಿಕರಾಗಿದ್ದರು. ಅವರ ಜಯಂತಿಯನ್ನು ಅರಸರ ಜಯಂತಿಯೊಂದಿಗೆ ಸೇರಿ ಆಚರಿಸಿದರೆ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗಲಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಆರ್ಯ ಈಡಿಗ ಸಮಾಜದ ಮುಖಂಡರಾದ ಸುಭಾಷ ಚೌದ್ರಿ, ಸಂಗಯ್ಯ ಸುಲ್ತಾನಪೂರ, ಅಶೋಕ ತೇಲಂಗ, ಚಂದ್ರಶೇಖರ ಗೌಡ, ಆನಂದ ಗೌಡ, ಅನೀಲ ಗೌಡ, ಶಂಕರರಾವ್ ನೇಳಗಿ ಹಾಗೂ ಇತರರು ಇದ್ದರು.