ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶ್ರಾವಣ ಮಾಸದ ಹಬ್ಬಗಳಲ್ಲಿ ಒಂದಾದ ವರಮಹಾಲಕ್ಷ್ಮೀ ಹಬ್ಬವನ್ನು ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿ ಹಾಗೂ ಸಂಭ್ರಮದೊಂದಿಗೆ ಆಚರಿಸಲಾಯಿತು.ಮನೆ ಹಾಗೂ ಮಂದಿರಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ಮನೆಯ ಅಂಗಳಕ್ಕೆ ಮೆರುಗು ನೀಡಿದ್ದ ಬಣ್ಣಬಣ್ಣದ ರಂಗೋಲಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು. ಮನೆಗಳಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಸೀರೆ ಉಡಿಸಿ, ಬಗೆ ಬಗೆಯ ಹೂ ಹಾಗೂ ಆಭರಣಗಳಿಂದ ಅಲಂಕರಿಸಿ, ಬಗೆ ಬಗೆಯ ಹಣ್ಣುಗಳೊಂದಿಗೆ ಹೋಳಿಗೆ ಸೇರಿದಂತೆ ನಾನಾ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಸಮರ್ಪಿಸಿದರು.
ಹೂ ಹಣ್ಣುಗಳ ದರ ಗಗನಕ್ಕೇರಿದ್ದರೂ ಹಬ್ಬದ ಸಂಭ್ರಮಕ್ಕೆ ಯಾವುದೇ ತೊಡಕಾಗಲಿಲ್ಲ. ಬುಧವಾರದಿಂದಲೇ ಹೂ,ಹಣ್ಣು,ಕಾಯಿ,ಬಾಳೆ ಕಂಬ ಸೇರಿದಂತೆ ಅಗತ್ಯ ವಸ್ತುಗಳನ್ನು ಜನರು ಖರೀದಿಸಿದ್ದರು.ಆದಾಗಿಯೂ ಶುಕ್ರವಾರವೂ ಮಾರುಕಟ್ಟೆಯಲ್ಲಿ ವ್ಯಾಪಾರ ಬಿರುಸಾಗಿತ್ತು.ದೇವಾಲಯಗಳಲ್ಲಿ ವಿಶೇಷ ಪೂಜೆಹಬ್ಬದ ಅಂಗವಾಗಿ ಶುಕ್ರವಾರ ನಗರದ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿ ನಗರದ ಸೇರಿದಂತೆ ಎಲ್ಲಾ ದೇವಾಲಯಗಳು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ವಿಶೇಷ ಅಲಂಕಾರಗಳೊಂದಿಗೆ ವಿಶೇಷ ಪೂಜೆ ನಡೆಯಿತು.ನಗರದ ಲಕ್ಷ್ಮೀ ವೆಂಕಟೇಶ್ವರ ದೇವಾಲಯ,ಹೆಚ್ ಎಸ್ ಗಾರ್ಡನ್ ನ ತ್ರಿಬಲ್ ಎಸ್ ದೇವಾಲಯ,ಗಂಗಮ್ಮ ಗುಡಿ ರಸ್ತೆಯ ಗಂಗಮ್ಮ ದೇವಾಲಯ, ಪೇಟೆ ಆಂಜನೇಯ ದೇವಾಲಯದಲ್ಲಿರುವ ಕನ್ಯಕಾ ಪರಮೇಶ್ವರಿ, ವೆಂಕಟರಮಣ ,ಲಕ್ಷ್ಮೀ,ಆಂಜನೇಯರ ದೇವಾಲಯದಲ್ಲಿ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು. ಹೂ, ಹಣ್ಣುಗಳ ದರ ದುಬಾರಿಶುಕ್ರವಾರದ ವರಮಹಾಲಕ್ಷ್ಮಿ ಹಬ್ಬಕ್ಕೆ ನಗರ ಸಜ್ಜು ಗೊಂಡಿದ್ದು, ಹೂವು-ಹಣ್ಣುಗಳ ಬೆಲೆ ದುಪ್ಪಟ್ಟಾಗಿದ್ದರೂ ಜನತೆ ಮುಗಿಬಿದ್ದು ಖರೀದಿ ಮಾಡಿದ್ದಾರೆ. ಹಬ್ಬಕ್ಕೆ ಅಗತ್ಯವಾದ ಲಕ್ಷ್ಮಿ ಮೂರ್ತಿಗಳನ್ನು ಜನರು ಈಗಾಗಲೇ ಖರೀದಿ ಮಾಡಿದ್ದು, ಮಂಟಪಕ್ಕಾಗಿ ಬಾಳೆ ಕಂದು, ಮಾವಿನಸೊಪ್ಪು, ಅಲಂಕಾರ ಸಾಮಗ್ರಿಗಳು, ಹೂವು ಹಣ್ಣುಗಳನ್ನು ಜನತೆ ಖರೀದಿ ಮಾಡಿದರು.ಹೂವುಗಳ ಬೆಲೆ ಕಳೆದ ಬುಧವಾರಕ್ಕೆ ಹೋಲಿಸಿದರೆ ಹೆಚ್ಚಾಗಿದ್ದು, ಕನಕಾಂಬರ ಕೇಜಿಗೆರೂ4,000,ಕಾಕಡ ರೂ1000-3000 ಮಲ್ಲಿಗೆ ರೂ2500, ಗುಲಾಬಿ ರೂ300, ಸೇವಂತಿಗೆ ರೂ250-400, ಸುಗಂಧರಾಜ ರೂ 600 ಬೆಲೆಯಿತ್ತು. ಇನ್ನು, ಹಣ್ಣುಗಳು ಸೇಬು ಕೆಜಿಗೆ ರೂ250-300, ದಾಳಿಂಬೆ 150-200, ಏಲಕ್ಕಿ ಬಾಳೆರೂ 120-150, ಮರಸೇಬು ರೂ150, ಸೀತಾಫಲ ಹಾಗೂ ಸಪೋಟಾ ರೂ120, ಅನಾನಸ್ ರೂ 80-150 ಕ್ಕೆ ಎರಡು ಮಾರಾಟವಾಯಿತು. ಬಾಳೆಕಂದು ಜೋಡಿಗೆ ರೂ80, ಮಾವಿನ ತೋರಣಕ್ಕೆ ರೂ20, ವಿಳ್ಯದೆಲೆ ಕಟ್ಟಿಗೆರೂ150 ಬೆಲೆಯಿತ್ತು.