ಸಾರಾಂಶ
ಅರಕಲಗೂಡು: ಬ್ಯಾಂಕ್‌ಗಳು ಮುಂಜಾಗ್ರತೆ ದೃಷ್ಟಿಯಿಂದ ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಿಪಿಐ ವಸಂತ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಶನಿವಾರ ತಾಲೂಕಿನ ಎಸ್‌ಬಿಐ, ಕೆನರಾ, ಬ್ಯಾಂಕ್ ಆಫ್ ಬರೋಡ, ಸೊಸೈಟಿಗಳು ಹಾಗೂ ವಿವಿಧ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮಂಗಳೂರಿನ ಉಳ್ಳಾಲದಲ್ಲಿ ಮುಸುಕುದಾರಿ ವೇಷದಲ್ಲಿ ಬಂದು ಕಳ್ಳರು ಬ್ಯಾಂಕ್‌ನಲ್ಲಿ ನಗದು ದೋಚಿ ದರೋಡೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಬ್ಯಾಂಕ್‌ಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು. ಎಟಿಎಂ ಹಾಗೂ ಬ್ಯಾಂಕ್‌ಗಳಲ್ಲಿ ಹಗಲು, ರಾತ್ರಿ ಕರ್ತವ್ಯ ನಿರ್ವಹಿಸುವ ಸೆಕ್ಯೂರಿಟಿ ಗಾರ್ಡ್ಗಳಿಗೆ ಉತ್ತಮ ತರಬೇತಿ ನೀಡಬೇಕು. ಐರನ್ ಡೋರ್ ಲಾಕ್ ಅಳವಡಿಸಬೇಕು. ನಗದು ಸಾಗಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಹೊಳೆನರಸೀಪುರ ಉಪ ವಿಭಾಗದ ಎಎಸ್‌ಪಿ ಶಾಲು ಮಾತನಾಡಿ, ಬ್ಯಾಂಕ್‌ಗಳಲ್ಲಿ ದರೋಡೆ ನಡೆಸಲು ಇತ್ತೀಚಿನ ದಿನಗಳಲ್ಲಿ ಕಳ್ಳರು ಹಲವು ಕೈಚಳಕ ನಡೆಸುತ್ತಿದ್ದಾರೆ. ಇದಕ್ಕೆ ತಕ್ಕಂತೆ ಅಧಿಕಾರಿಗಳು ಕೂಡ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸದಾ ಜಾಗೃತರಾಗಿರಬೇಕು ಎಂದರು. ಅರಕಲಗೂಡು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಕಾವ್ಯ, ಕೊಣನೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಪ್ರಹ್ಲಾದ್ ಇದ್ದರು.