ನೀರಿನ ಮೋಟಾರ್ ಕೆಟ್ಟಿರುವುದರಿಂದ ಬನ್ನಿಕೊಪ್ಪ ಗ್ರಾಮಕ್ಕೆ ನೀರು ಸರಬರಾಜಾಗುತ್ತಿಲ್ಲ
ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು
ತಾಲೂಕಿನ ಬನ್ನಿಕೊಪ್ಪ ಗ್ರಾಮ ಕಳೆದ ಐದಾರು ದಿನಗಳಿಂದ ನೀರಿನ ಅಭಾವದಿಂದ ತತ್ತರಿಸಿದೆ.ನೀರಿಗಾಗಿ ಮಕ್ಕಳು, ವಯೋವೃದ್ಧರು ಪರದಾಡುವಂತ್ತಾಗಿದೆ. ಕೊಡ ಹಿಡಿದು ಮಹಿಳೆಯರು ಅಲೆದಾಡುತ್ತಿದ್ದಾರೆ. ಗ್ರಾಮದ ಕೆರೆಗಳಿಗೆ ಹೋಗಿ ನೀರು ತರುತ್ತಿದ್ದಾರೆ. ನಿತ್ಯ ಬಳಕೆಗೆ ನೀರು ಇಲ್ಲದೆ ಜನರು ಹೈರಾಣಾಗಿದ್ದಾರೆ.
ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ 38 ಗ್ರಾಮದ ಕುಡಿವ ನೀರಿನ ಪಂಪಹೌಸಿಗೆ ನಿಲೋಗಿಪುರದಿಂದ ನೀರು ಸರಬರಾಜಾಗುತ್ತಿದೆ. ನಿಲೋಗಿಪುರದಿಂದ ಕವಲೂರು ಗ್ರಾಮದ ಪಂಪಹೌಸಿಗೆ ನೀರು ಬರುತ್ತದೆ. ಕವಲೂರು ಗ್ರಾಮದಿಂದ ಬನ್ನಿಕೊಪ್ಪಕ್ಕೆ ನೀರು ಸರಬರಾಜಾಗುತ್ತದೆ. ಕವಲೂರು ಗ್ರಾಮದಲ್ಲಿರುವ ಪಂಪಹೌಸಿನ ಮೋಟಾರ್ ಕೆಟ್ಟು ಹೋಗಿವೆ. ಇದರಿಂದ ಐದಾರು ದಿನಗಳಿಂದ ಬನ್ನಿಕೊಪ್ಪ ಗ್ರಾಮಕ್ಕೆ ನೀರು ಬಂದಿಲ್ಲ.ಮೋಟಾರ್ ರಿಪೇರಿ: ನೀರಿನ ಮೋಟಾರ್ ಕೆಟ್ಟಿರುವುದರಿಂದ ಬನ್ನಿಕೊಪ್ಪ ಗ್ರಾಮಕ್ಕೆ ನೀರು ಸರಬರಾಜಾಗುತ್ತಿಲ್ಲ. ಮೋಟಾರ್ ತೊಂದರೆ ಆದ ತಕ್ಷಣ ರಿಪೇರಿ ಕಾರ್ಯ ಆದರೆ ನೀರಿನ ಅಭಾವ ಬನ್ನಿಕೊಪ್ಪ ಗ್ರಾಮಕ್ಕೆ ಆಗುವುದಿಲ್ಲ. ಆದರೆ ಮೋಟಾರ್ ರಿಪೇರಿಗೆ ದಿನಗಳೇ ಕಳೆಯುತ್ತಿರುವುದು ನೀರಿನ ಸಮಸ್ಯೆ ಗ್ರಾಮದಲ್ಲಿ ಬಿಗಡಾಯಿಸುವಂತಾಗಿದೆ.
ಗ್ರಾಮದಲ್ಲಿ ಕಳೆದ ಎಂಟು ದಿನಗಳಿಂದ ನೀರು ಬಂದಿಲ್ಲ. ಮೋಟಾರ್ ರಿಪೇರಿ ಇದೆ ಎಂದು ಹೇಳುತ್ತಿದ್ದಾರೆ. ಆದರೆ ಅದನ್ನು ಬೇಗ ರಿಪೇರಿ ಮಾಡಿಸಿ ಗ್ರಾಮಕ್ಕೆ ನೀರು ಒದಗಿಸುವ ಕಾರ್ಯ ಮಾಡಬೇಕು. ಆದರೆ ಗ್ರಾಪಂಗೆ ಹೋದರೆ ಅಲ್ಲಿ ಸಹ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಬನ್ನಿಕೊಪ್ಪ ಗ್ರಾಮಕ್ಕೆ ನೀರು ಒದಗಿಸುವ ಕಾರ್ಯ ಆಗಬೇಕು ಎಂದು ಬನ್ನಿಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ವೆಂಕಟಾಪುರ ತಿಳಿಸಿದ್ದಾರೆ.ಬನ್ನಿಕೊಪ್ಪ ಗ್ರಾಮಕ್ಕೆ ನೀರು ಸರಬರಾಜು ಆಗದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಗ್ರಾಪಂ ಪಿಡಿಒಗೆ ಪೋನ್ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಅಲ್ಲದೆ ಗ್ರಾಪಂಗೆ ಸಹ ಬಂದಿಲ್ಲ. ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಸಹ ಕೆಟ್ಟು ನಿಂತಿದೆ. ಇದರಿಂದ ಜನರಿಗೆ ನೀರಿನ ತೊಂದರೆ ಸಾಕಷ್ಟು ಆಗುತ್ತಿದೆ ಎಂದು ಬನ್ನಿಕೊಪ್ಪ ಗ್ರಾಮಸ್ಥ ರಾಜು ಮಾಳೆಕೊಪ್ಪ ತಿಳಿಸಿದ್ದಾರೆ.
ಬನ್ನಿಕೊಪ್ಪ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಮೋಟಾರ್ ರಿಪೇರಿ ಇದೆ.ಅದನ್ನು ಸರಿಪಡಿಸುವ ಕಾರ್ಯ ಜರುಗುತ್ತಿದೆ. ಈಗಾಗಲೇ ಮೋಟಾರ್ ರಿಪೇರಿ ಕಾರ್ಯ ಪ್ರಗತಿಯಲ್ಲಿದ್ದು ನೀರು ನೀಡಲು ಆದ್ಯತೆ ನೀಡಲಾಗುತ್ತಿದೆ ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯಕರಣ ಇಲಾಖೆ ತಾಲೂಕಾಧಿಕಾರಿ ಸಾಹೇಬಣ್ಣ ಗುಲಬರ್ಗಾ ತಿಳಿಸಿದ್ದಾರೆ.