ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಹೆಣ್ಣು ಸಂಸಾರದ ಕಣ್ಣು. ಹೆಣ್ಣು ಮಕ್ಕಳಿಗೆ ಅನುಕಂಪ ಬೇಡ ಪ್ರೋತ್ಸಾಹ ಬೇಕು. ಅವರ ಸಾಧನೆಗಳಿಗೆ ಸ್ಫೂರ್ತಿದಾಯಕ ಪರಿಸರ ನಿರ್ಮಿಸಬೇಕು, ಆಗ ಹೆಣ್ಣು ಮಕ್ಕಳ ಬದುಕು ಸುಖಮಯವಾಗುತ್ತದೆ ಎಂದು ಕೊಳ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಅಸ್ಮಾ ಹಸೈನಾರ್ ಅಭಿಪ್ರಾಯಪಟ್ಟರು.ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ಗ್ರಾಮ ಪಂಚಾಯಿತಿ ಕೊಳ್ನಾಡು, ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ಹಾಗೂ ಸರ್ಕಾರಿ ಪ್ರೌಢಶಾಲೆ ನಾರ್ಶ ಮೈದಾನ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಬೇಟಿ ಪಡಾವೋ- ಬೇಟಿ ಬಚಾವೋ ಹಾಗೂ ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದರು.ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಲಕ್ಷಣ್, ಹೆಣ್ಣುಮಕ್ಕಳ ಬಾಲ್ಯ ವಿವಾಹದಿಂದಾಗುವ ಆಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರು.ಸಖಿ ಕೇಂದ್ರ ಮಂಗಳೂರು ಆಡಳಿತಾಧಿಕಾರಿ ಪ್ರಿಯಾ ಕೆ.ಸಿ., ಶಿಶು ಅಭಿವೃದ್ಧಿ ಯೋಜನೆ ವಿಟ್ಲದ ಅಭಿವೃದ್ಧಿ ಯೋಜನಾಧಿಕಾರಿ ಉಷಾ ವಿವಿಧ ಮಾಹಿತಿ ನೀಡಿದರು.
ಕೊಳ್ನಾಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನೆಬಿಸಾ ಖಾದರ್ ನಾರ್ಶ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಸುಲೈಮಾನ್ ನಾರ್ಶ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ನಾರ್ಶ ಮೈದಾನ ಪ್ರೌಢಶಾಲೆಯ ಅಸ್ಮಾ ನಾರ್ಶ, ಸುರಿಬೈಲ್ ಪ್ರೌಢಶಾಲೆಯ ಆಯಿಷಾ ಸಝ್ನ, ಮಂಚಿಕೊಳ್ನಾಡು ಪ್ರೌಢಶಾಲೆಯ ಯಶ್ಮಿತಾ ಅವರನ್ನು ಸನ್ಮಾನಿಸಲಾಯಿತು.
ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ಗಣ್ಯರು-ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರ ಸಹಯೋಗದಲ್ಲಿ ‘ಹೆಣ್ಣುಮಕ್ಕಳ ಜಾಗೃತಿ-ಬೇಟಿ ಪಡಾವೋ ಬೇಟಿ ಬಚಾವೋ’ ಜಾಥಾವನ್ನು ಶಾಲಾ ಸುತ್ತಲ ಪರಿಸರದದಲ್ಲಿ ನಡೆಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ಕಾರ್ಯಕ್ರಮದ ವಿವಿಧ ಚಟುವಟಿಕೆಗಳ ಸಂಯೋಜನೆಯಲ್ಲಿ ಕೊಳ್ನಾಡು ಪಂಚಾಯಿತಿ ವಲಯ ಮೇಲ್ವಿಚಾರಕರಾದ ಲೋಲಾಕ್ಷಿ , ವಿಟ್ಲ ವಲಯ ಪೋಷಣ್ ಅಭಿಯಾನ ಸಂಯೋಜಕರಾದ ವಿನುತಾ ಹಾಗೂ ಅಂಗನವಾಡಿ ಶಿಕ್ಷಕಿಯರಾದ ಸುಮನಾ, ಜಯಂತಿ ಮತ್ತು ಶಶಿಕಲಾರವರು ಸಹಕರಿಸಿದರು.
ಶಿಕ್ಷಕರಾದ ತಾರಾನಾಥ ಕೈರಂಗಳ, ಅಬ್ದುಲ್ ರಫೀಕ್, ಶರತ್ ಕುಮಾರ್ ಚೌಟ, ಸರೋಜಮ್ಮ, ಭಾರತಿ, ಶಿವರಾಜ್, ಸುದರ್ಶನ, ಗಿರೀಶ್ ಟೇರಿ ರೋಸಲಿನ್, ಜಯಶ್ರೀ, ಮಾಲತಿ, ವೇದಾವತಿ ಹಾಗೂ ವಿವಿಧ ಶಾಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಲತಾ ಕಾವೂರು ವಂದಿಸಿದರು. ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.