ನಾಡಹಬ್ಬವಾದ್ದರಿಂದ ಬಾನು ಮುಷ್ತಾಕ್‌ ಅವರೇ ದಸರಾ ಉದ್ಘಾಟಿಸುತ್ತಾರೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟೋಕ್ತಿ

| Published : Sep 01 2025, 01:03 AM IST

ನಾಡಹಬ್ಬವಾದ್ದರಿಂದ ಬಾನು ಮುಷ್ತಾಕ್‌ ಅವರೇ ದಸರಾ ಉದ್ಘಾಟಿಸುತ್ತಾರೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟೋಕ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಉನ್ನತ ಮಟ್ಟದ ಸಭೆಯಲ್ಲಿ ನನಗೆ ಉದ್ಘಾಟಕರನ್ನು ಆಯ್ಕೆ ಮಾಡುವ ಅಧಿಕಾರ ಕೊಟ್ಟಿದ್ದರು. ಕನ್ನಡಕ್ಕೆ ಮೊದಲ ಬುಕರ್‌ ಪ್ರಶಸ್ತಿ ಬಂದಿದೆ. ಆದ್ದರಿಂದ ಬಾನು ಮುಷ್ತಾಕ್‌ ಅವರಿಗೆ ದಸರಾ ಉದ್ಘಾಟನೆಗೆ ಅವಕಾಶ ಕೊಡಬೇಕು ಎಂದು ಹೇಳಿದ್ದೆ. ನಿಸಾರ್‌ ಅಹಮದ್‌ ಅವರಿಗೆ ಈ ಹಿಂದೆ ಅವಕಾಶ ನೀಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಟಿಪ್ಪು ಸುಲ್ತಾನ್‌ ಆಡಳಿತ ಅವಧಿಯಲ್ಲಿಯೂ ದಸರಾ ಆಚರಿಸಲಾಗಿದೆ. ಇದೊಂದು ನಾಡಹಬ್ಬವಾದ್ದರಿಂದ ಎಲ್ಲಾ ಧರ್ಮದವರು ಪಾಲ್ಗೊಳ್ಳಬಹುದು. ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟಿಸುತ್ತಿದ್ದಾರೆ. ಈ ವಿಷಯದಲ್ಲಿ ಬೇರೆ ನಿಲುವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉನ್ನತ ಮಟ್ಟದ ಸಭೆಯಲ್ಲಿ ನನಗೆ ಉದ್ಘಾಟಕರನ್ನು ಆಯ್ಕೆ ಮಾಡುವ ಅಧಿಕಾರ ಕೊಟ್ಟಿದ್ದರು. ಕನ್ನಡಕ್ಕೆ ಮೊದಲ ಬುಕರ್‌ ಪ್ರಶಸ್ತಿ ಬಂದಿದೆ. ಆದ್ದರಿಂದ ಬಾನು ಮುಷ್ತಾಕ್‌ ಅವರಿಗೆ ದಸರಾ ಉದ್ಘಾಟನೆಗೆ ಅವಕಾಶ ಕೊಡಬೇಕು ಎಂದು ಹೇಳಿದ್ದೆ. ನಿಸಾರ್‌ ಅಹಮದ್‌ ಅವರಿಗೆ ಈ ಹಿಂದೆ ಅವಕಾಶ ನೀಡಲಾಗಿತ್ತು. ಇದೊಂದು ಸಾಂಸ್ಕೃತಿಕ ಹಬ್ಬ. ನಾಡಹಬ್ಬದಲ್ಲಿ ಇಂತದ್ದೆ ಧರ್ಮದವರು ಉದ್ಘಾಟಿಸಬೇಕು ಎಂಬುದಿಲ್ಲ. ನಾಡಹಬ್ಬ ಎಂದರೆ ಎಲ್ಲರಿಗೂ ಹಬ್ಬ, ಹಿಂದು, ಮುಸ್ಲಿಂ, ಕ್ರೈಸ್ತ, ಬೌದ್ಧರಿಗೆ ಎಲ್ಲರಿಗೂ ಸೇರಿ ಆಚರಿಸುವಂತದ್ದು ಎಂದರು.

ಮಹಾರಾಜರು ಇಲ್ಲದಿರುವಾಗ ಟಿಪ್ಪು ಆಚರಿಸಿದ್ದ ಉದಾಹರಣೆ ಇದೆ. ಬಳಿಕ ಮಿರ್ಜಾ ಇಸ್ಮಾಯಿಲ್‌ ಅವರು ದಿವಾನರಾಗಿರಲಿಲ್ಲವೇ, ಅವರು ಪಾಲ್ಗೊಂಡಿರಲಿಲ್ಲವೇ?, ಆದ್ದರಿಂದ ಇದೊಂದು ಧರ್ಮಾತೀತ, ಜಾತ್ಯತೀತ ಹಬ್ಬ. ಈ ಹಬ್ಬಕ್ಕೆ ಬುಕರ್‌ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಯಾರೋ ಧರ್ಮಾಂಧರು ಮಾತನಾಡುತ್ತಾರೆ. ಅವರಿಗೆ ಇತಿಹಾಸ ಗೊತ್ತಿಲ್ಲ ಬಿಡಿ ಎಂದರು.

ಬಿಜೆಪಿಯವರು ರಾಜಕೀಯವಾಗಿ ಮಾತನಾಡುತ್ತಾರೆ. ಜನ ಸಾಹಿತ್ಯವನ್ನು ಅವರು ಕನ್ನಡ ಭಾಷೆಯಲ್ಲಿ ಬರೆದಿಲ್ಲವೇ? ಕನ್ನಡದ ಬಗ್ಗೆ ಪ್ರೀತಿ ಗೌರವ ಇಲ್ಲದಿದ್ದರೆ ಬರೆಯಲು ಸಾಧ್ಯವೇ?, ಬಿಜೆಪಿಯವರು ಏನೋ ಕುಂಟು ನೆಪ ಹುಡುಕುತ್ತಿದ್ದಾರೆ. ಇದು ನಾಡಹಬ್ಬ ಈ ವಿಷಯದಲ್ಲಿ ನಾನು ಸ್ಪಷ್ಟವಾಗಿದ್ದೇನೆ. ಎಲ್ಲಾ ಧರ್ಮದವರೂ ಕೂಡ ಸೇರಿ ಆಚರಿಸುತ್ತಾರೆ. ಆದ್ದರಿಂದ ಈ ಆಯ್ಕೆ ಕೂಡ ಸೂಕ್ತವಾಗಿದೆ. ದನದ ಮಾಂಸ, ಹಂದಿ ಮಾಂಸ ಎಂದೆಲ್ಲಾ ಮಾತನಾಡುವವರು ಡೋಂಗಿಗಳು. ಅದಕ್ಕೆಲ್ಲ ತಲೆ ಕೆಡಸಿಕೊಳ್ಳಬೇಕಿಲ್ಲ ಎಂದರು.

ದೀಪಾ ಭಾಸ್ತಿ ಅವರಿಗೂ ಸರ್ಕಾರದಿಂದ 10 ಲಕ್ಷ ಕೊಟ್ಟು, ಗೌರವ ಸಲ್ಲಿಸಲಾಗಿದೆ. ಬಿಜೆಪಿಯವರು ಎಲ್ಲರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಎಸ್‌.ಐ.ಟಿ ತನಿಖೆಯನ್ನು ಹೆಗಡೆ ಅವರೇ ಸ್ವಾಗತಿಸಿದ್ದಾರೆ. ಸತ್ಯ ಗೊತ್ತಾಗಬೇಕು ಅಲ್ಲವೆ?, ಇಲ್ಲ ಅಂದರೆ ಧರ್ಮಸ್ಥಳದ ಬಗ್ಗೆ ತೂಗುಗತ್ತಿ ಯಾವಾಗಲೂ ಇರುತ್ತದೆ. ಈ ಸಂದೇಶ ಹೋಗಲಾಡಿಸಲು ಎಸ್‌.ಐ.ಟಿ ತನಿಖೆಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಜಿಎಸ್‌ಟಿ ವಿಂಗಡಣೆಯಿಂದ ನಷ್ಟ:

ಜಿಎಸ್‌.ಟಿ ವಿಂಗಡಿಸುವುದರಿಂದ 15 ಸಾವಿರ ಕೋಟಿ ಲಾಸ್‌ ಆಗುತ್ತದೆ ಎಂದು ಅಂದಾಜಿಸಲಾಗಿದೆ. 8 ರಾಜ್ಯಗಳು ಸೇರಿ ಚರ್ಚಿಸಲಾಗಿದೆ. 2.5 ಲಕ್ಷ ಕೋಟಿ ನಷ್ಟವಾಗುತ್ತದೆ ಎಂದು ಹೇಳಿದ್ದಾರೆ. 2017ರಲ್ಲಿ ಜಿ.ಎಸ್‌.ಟಿ ಮಾಡಿದಾಗ 5 ವರ್ಷ ಮಾತ್ರ ಪರಿಹಾರ ಕೊಡಲಾಯಿತು. ಈಗ 12 ರಿಂದ 13ರಷ್ಟು ತೆರಿಗೆ ಹೆಚ್ಚುತ್ತದೆ. ಅದನ್ನು ಕೊಡಲಿ ಎಂದು ಹೇಳುತ್ತಿದ್ದೇವೆ. ಸಿಗರೇಟ್‌, ಗುಟ್ಕಾ, ಪಾನ್‌ಸಮಾಲ ಮುಂತಾದ ಲಗ್ಸುರಿ ಮತ್ತು ಸಿಮ್‌ ಗೂಡ್ಸ್‌ ನ ಮೇಲೆ ಹೆಚ್ಚು ಸೆಸ್‌ ವಿಧಿಸಿ ಕೊಡಿ ಎಂದು ಕೇಳುತ್ತಿದ್ದೇವೆ. ಆ ಸಭೆಗೆ ನಾನು ಹೋಗುತ್ತಿಲ್ಲ. ಸಚಿವ ಕೃಷ್ಣ ಬೈರೇಗೌಡ ಅವರು ಹೋಗುತ್ತಿದ್ದಾರೆ. ಜಿ.ಎಸ್‌.ಟಿ ವಿಷಯವನ್ನು ಗಂಭೀರವಾಗಿ ಚರ್ಚಿಸಲಾಗುತ್ತದೆ.

ಆಸ್ತಿ ನೋಂದಣಿ ಶುಲ್ಕವನ್ನು ಒಂದು ಪರ್ಸೆಂಟ್‌ ಹೆಚ್ಚಿಸಲಾಗಿದೆ. ಬಿಜೆಪಿಯವರು ಎಂದಾದರೂ ಕರ್ನಾಟಕದ ಪರ ಮಾತನಾಡುತ್ತಿಲ್ಲ. 11950 ಕೋಟಿ ನಷ್ಟವಾಗಿದೆ. ಯಾವತ್ತಾದರೂ ಮಾತನಾಡಿದ್ದಾರಾ?, ಬಿಜೆಪಿಯವರು ಧರ್ಮಸ್ಥಳಕ್ಕೆ ಧರ್ಮಯಾತ್ರೆ ಮಾಡುತ್ತಿದ್ದಾರೆ. ರಾಜ್ಯಕ್ಕೆ ಅನ್ಯಾಯ ಆಗಿದೆಯಲ್ಲ ಯಾವತ್ತಾದರೂ ಮಾತನಾಡಿದ್ದಾರಾ? ಧರ್ಮಸ್ಥಳದ ವಿಷಯವನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆಯೇ ಹೊರತು ಬೇರೆ ವಿಷಯವಿಲ್ಲ ಎಂದರು.

ಏರ್‌ ಶೋ: ಏರ್‌ ಶೋಗೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ವಿಜಯದಶಮಿಯ ಹಿಂದಿನ ದಿನ ಏರ್‌ ಶೋ ನಡೆಯಲಿದೆ ಎಂದು ತಿಳಿಸಿದರು.