ಉತ್ತಮ ವ್ಯಕ್ತಿತ್ವ ಬೆಳೆಸಿ ಸಮಾಜದ ಮುಖ್ಯವಾಹಿನಿಗೆ ಮರಳಿ ಕರೆತರುವುದಾಗಿದೆ.

ಬಳ್ಳಾರಿ: ಕೈದಿಗಳ ಮನಃಪರಿವರ್ತನೆಗೆ ಸಂಗೀತ ಪೂರಕ ಸಾಧನವಾಗಲಿ; ನೊಂದ ಜೀವಗಳಿಗೆ ನೆಮ್ಮದಿ ಸಿಗುವಂತಾಗಲಿ ಎಂದು ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕ ವಿ.ಕೃಷ್ಣಮೂರ್ತಿ ಆಶಿಸಿದರು.ನಗರದ ಕೇಂದ್ರ ಕಾರಾಗೃಹದಲ್ಲಿ ಸನ್ಮಾರ್ಗ ಗೆಳೆಯರ ಬಳಗದಿಂದ ಆಯೋಜಿಸಿದ್ದ ಕೊಳಲು ಮಾಂತ್ರಿಕ ಬಾಪು ಪದ್ಮನಾಭ ಅವರ ಕೊಳಲು ವಾದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜೈಲು ಶಿಕ್ಷೆಯ ಉದ್ದೇಶ ಕೇವಲ ಅಪರಾಧಿಗಳಿಗೆ ದಂಡನೆ ನೀಡುವುದಷ್ಟೇ ಅಲ್ಲ, ಅವರಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸಿ ಸಮಾಜದ ಮುಖ್ಯವಾಹಿನಿಗೆ ಮರಳಿ ಕರೆತರುವುದಾಗಿದೆ. ಈ ನಿಟ್ಟಿನಲ್ಲಿ ಕೈದಿಗಳ ಮನಃಪರಿವರ್ತನೆಗೆ ಸಂಗೀತವು ಪರಿಣಾಮಕಾರಿ ಸಾಧನವಾಗಬಲ್ಲದು. ಸಂಗೀತವು ಮಾನವನ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುವ ಶಕ್ತಿಯನ್ನು ಹೊಂದಿದೆ. ಜೈಲುಗಳಲ್ಲಿ ವಿವಿಧ ಕಾರಣಗಳಿಂದ ಮಾನಸಿಕವಾಗಿ ನೊಂದಿರುವ ಕೈದಿಗಳಿಗೆ ಸಂಗೀತದ ಮೂಲಕ ನೆಮ್ಮದಿ, ಆತ್ಮಸಾಂತ್ವನ ಹಾಗೂ ಹೊಸ ಬದುಕಿನ ಭರವಸೆ ನೀಡಬಹುದು ಎಂದು ಹೇಳಿದರು.

ಜೈಲುಗಳಲ್ಲಿ ಈಗಾಗಲೇ ಯೋಗ, ಧ್ಯಾನ, ಕೌಶಲಾಭಿವೃದ್ಧಿ ತರಬೇತಿ, ಶಿಕ್ಷಣ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದರೊಂದಿಗೆ ಸಂಗೀತ ಕಾರ್ಯಕ್ರಮಗಳು, ಗಾಯನ ತರಬೇತಿ, ವಾದ್ಯ ಕಲಿಕೆ ಮತ್ತು ಭಕ್ತಿಗೀತೆ, ಸುಗಮ ಸಂಗೀತದಂತಹ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸಿದರೆ ಕೈದಿಗಳ ಮಾನಸಿಕ ಆರೋಗ್ಯ ಸುಧಾರಿಸುವುದರ ಜೊತೆಗೆ ಅವರ ವರ್ತನೆಯಲ್ಲೂ ಸಕಾರಾತ್ಮಕ ಬದಲಾವಣೆ ಕಾಣಬಹುದು ಎಂಬ ಆಶಯ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ಮಾತನಾಡಿದ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್,

ಸಂಗೀತವು ಕೋಪ, ಆತಂಕ ಹಾಗೂ ಖಿನ್ನತೆಯನ್ನು ಕಡಿಮೆ ಮಾಡಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮಾಧ್ಯಮವಾಗಿದೆ. ಹಲವು ರಾಜ್ಯಗಳ ಜೈಲುಗಳಲ್ಲಿ ಸಂಗೀತ ಚಿಕಿತ್ಸೆಯಂತಹ ಕಾರ್ಯಕ್ರಮಗಳು ಉತ್ತಮ ಫಲಿತಾಂಶ ನೀಡಿರುವ ಉದಾಹರಣೆಗಳಿವೆ. ಕೈದಿಗಳು ಶಿಕ್ಷೆಯ ಅವಧಿ ಮುಗಿಸಿ ಸಮಾಜಕ್ಕೆ ಮರಳಿದ ಬಳಿಕ ಉತ್ತಮ ನಾಗರಿಕರಾಗಿ ಬದುಕಲು ಮಾನಸಿಕವಾಗಿ ಸದೃಢರಾಗಿರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಗೀತವು ಅವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿ, ನೊಂದ ಜೀವಗಳಿಗೆ ನೆಮ್ಮದಿ ನೀಡುವ ಸೇತುವೆಯಾಗಲಿದೆ ಎಂದು ತಿಳಿಸಿದರು. ಕಾರಾಗೃಹದ ಉಪ ಅಧೀಕ್ಷಕ ಭಜಂತ್ರಿ ಹಾಗೂ ಜೈಲಿನ ಸಿಬ್ಬಂದಿ ಉಪಸ್ಥಿತರಿದ್ದರು.

ಬಳಿಕ ಅಂತರಾಷ್ಟ್ರೀಯ ಕೊಳಲುವಾದಕ ಬಾಪು ಪದ್ಮನಾಭ ಅವರು ತಮ್ಮ ಕೊಳಲು ನಿನಾದದ ಮೂಲಕ ಮಂತ್ರಮುಗ್ಧಗೊಳಿಸಿದರು. ಖ್ಯಾತ ತಬಲಾವಾದಕ ರಮಾಕಾಂತ್ ಪುಣೆ ಅವರು ತಬಲಾ ಸಾಥ್ ನೀಡಿದರು.