ಏಕಾಏಕಿ ಮಾರಕಾಸ್ತ್ರಗಳಿಂದ ಪ್ರಜ್ವಲ್ ತಲೆಗೆ ಹೊಡೆದಿದ್ದಾರೆ. ನಂತರ ತಪ್ಪಿಸಿಕೊಳ್ಳಲು ಕೈನಲ್ಲಿ ಲಾಂಗ್ ಹಿಡಿಯುವ ಪ್ರಯತ್ನ ಮಾಡಿದ ವೇಳೆ ಮೃತನ ಬೆರಳುಗಳು ತುಂಡರಿಸಿವೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಪ್ರಜ್ವಲ್ ಓಡಿಹೋಗುತ್ತಿದ್ದಾಗ ಅಟ್ಟಾಡಿಸಿಕೊಂಡು ಹತ್ಯೆಗೈದಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಹಾಡಹಗಲೇ ದುಷ್ಕರ್ಮಿಗಳು ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ವಕೀಲ ನಾಗೇಂದ್ರರವರ ಪುತ್ರ ಪ್ರಜ್ವಲ್‌ಗೌಡ ಅಲಿಯಸ್ ಪಾಪು (29) ಕೊಲೆಯಾದ ಯುವಕ. ಗ್ರಾಮದ ಹಾಲಿನ ಡೇರಿ ವೃತ್ತದ ಬಳಿಯಿರುವ ಟೀ ಶಾಪ್ ಬಳಿ ಪ್ರಜ್ವಲ್‌ಗೌಡ ನಿಂತಿದ್ದ ವೇಳೆ ಕಾರಿನಲ್ಲಿ ಆಗಮಿಸಿದ ಮೂರ್ನಾಲ್ಕು ಮಂದಿ ದುಷ್ಕರ್ಮಿಗಳ ತಂಡ ಈ ಕೃತ್ಯವೆಸಗಿದೆ.
ಮೂಗಿಗೆ ಮಾಸ್ಕ್ ಹಾಗೂ ಕನ್ನಡಕ ಹಾಕಿದ್ದ ದುಷ್ಕರ್ಮಿಗಳು, ಏಕಾಏಕಿ ಮಾರಕಾಸ್ತ್ರಗಳಿಂದ ಪ್ರಜ್ವಲ್ ತಲೆಗೆ ಹೊಡೆದಿದ್ದಾರೆ. ನಂತರ ತಪ್ಪಿಸಿಕೊಳ್ಳಲು ಕೈನಲ್ಲಿ ಲಾಂಗ್ ಹಿಡಿಯುವ ಪ್ರಯತ್ನ ಮಾಡಿದ ವೇಳೆ ಮೃತನ ಬೆರಳುಗಳು ತುಂಡರಿಸಿವೆ.
ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಪ್ರಜ್ವಲ್ ಓಡಿಹೋಗುತ್ತಿದ್ದಾಗ ಅಟ್ಟಾಡಿಸಿಕೊಂಡು ಹತ್ಯೆಗೈದಿದ್ದಾರೆ. ಹತ್ಯೆ ಬಳಿಕ ದುಷ್ಕರ್ಮಿಗಳು ಕಾರು ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಟೀಶಾಪ್ ಬಳಿ ಇದ್ದ ಗ್ರಾಮದ ಜನರು ಪ್ರಜ್ವಲ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ನಡೆಸುತ್ತಿದ್ದ ಹಲ್ಲೆಯ ದೃಶ್ಯಗಳನ್ನು ನೋಡಿ ಭಯಭೀತರಾಗಿ ಅತ್ತಿತ್ತ ಓಡಲಾರಂಭಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತನು ವಿವಾಹಿತನಾಗಿದ್ದು, ಒಂದು ಮಗು ಇರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಇದೀಗ ಗ್ರಾಮದಲ್ಲಿ ನೀರವ ಮೌನ ಅವರಿಸಿದ್ದು, ಘಟನೆಯಿಂದ ಗ್ರಾಮದ ಜನರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ನಂತರ ಎಸ್ಪಿ ಎನ್.ಯತೀಶ್, ಎಎಸ್ಪಿ ಇ.ತಿಮ್ಮಯ್ಯ, ಡಿವೈಎಸ್‌ಪಿ ಮುರಳಿ ಸೇರಿ ಇತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಕೊಲೆ ಆರೋಪಿಗಳಿಗೆ ಬಲೆಬೀಸಿದ್ದಾರೆ.
