ಬಾರ್ ಬೆಂಡರ್ ರಾಮೇಗೌಡರ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

| Published : May 03 2024, 01:04 AM IST

ಬಾರ್ ಬೆಂಡರ್ ರಾಮೇಗೌಡರ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಸುರವರ್ಧಕ ಬಾರ್ ನಿಯಮಾವಳಿಗಳನ್ನು ಮೀರಿ ನಡೆಯುತ್ತಿದೆ. ಬಾರ್ ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿದ್ದು ಎದುರಿನಲ್ಲಿ ದೀಪದ ವ್ಯವಸ್ಥೆಯೂ ಇಲ್ಲ. ಬಾರ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ರಾಮೇಗೌಡರ ಕೊಲೆ ಪ್ರಕರಣದ ನ್ಯಾಯಯುತ ತನಿಖೆಯಾಗಬೇಕು. ಇಲ್ಲದಿದ್ದರೆ ಆರ್ಯ ಈಡಿಗ ಸಮುದಾಯ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ನಾರಾಯಣಸ್ವಾಮಿ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬಾರ್ ಬೆಂಡರ್ ರಾಮೇಗೌಡರ(48) ಶವ ಕೊಲೆಯಾದ ಸ್ಥಿತಿಯಲ್ಲಿ ತಾಲೂಕಿನ ಕೃಷ್ಣಾಪುರ ಗ್ರಾಮದ ಬಳಿಯ ಸುರವರ್ಧಕ ಬಾರ್ ಬಾಗಿಲಿನಲ್ಲಿ ದೊರಕಿದ್ದು, ಈ ಪ್ರಕರಣ ಕುರಿತು ನ್ಯಾಯಯುತ ತನಿಖೆ ನಡೆಸುವಂತೆ ತಾಲೂಕು ಆರ್ಯ ಈಡಿಗರ ಸಂಘ ಒತ್ತಾಯಿಸಿದೆ.

ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ನಂಜುಂಡಪ್ಪ ನೇತೃತ್ವದಲ್ಲಿ ತಾಲೂಕಿನ ಚೌಡೇನಹಳ್ಳಿ ಗ್ರಾಮಸ್ಥರು ಸುದ್ಧಿಗಾರರೊಂದಿಗೆ ಮಾತನಾಡಿ, ರಾಮೇಗೌಡರ ಕೊಲೆ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಿದರು.

ಈಡಿಗ ಸಮುದಾಯದ ಮುಖಂಡ ಚೌಡೇನಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ಕಳೆದ ಏ.29 ರ ಸಂಜೆ 5 ಗಂಟೆ ವೇಳೆಯಲ್ಲಿ ರಾಮೇಗೌಡರ ಶವ ಸುರವರ್ಧಕ ಬಾರ್ ನ ಬಾಗಿಲಿನಲ್ಲಿಯೇ ಕಂಡುಬಂದಿದೆ. ಶವದ ಮೈಮೇಲೆ ತೀವ್ರ ಸ್ವರೂಪದ ಗಾಯಗಳು ಕಂಡು ಬಂದಿವೆ. ತಲೆಯ ಹಿಂಭಾಗದಲ್ಲಿಯೂ ಗಾಯವಾಗಿತ್ತು ಎಂದರು.

ಮೇಲ್ನೋಟಕ್ಕೆ ಇದೊಂದು ಕೊಲೆಯಂತೆ ಕಂಡು ಬಂದಿದ್ದು, ಪ್ರಕರಣದ ಬಗ್ಗೆ ಗಂಭೀರ ತನಿಖೆಯಾಗಬೇಕು. ಆದರೆ, ರಾಮೇಗೌಡರ ಶವವನ್ನು ಪೊಲೀಸರು ಮೃತರ ಪತ್ನಿ ನಾಗರತ್ನಮ್ಮ ಹಾಗೂ ನೆರೆದಿದ್ದ ಜನ ಸಮೂಹವನ್ನು ಬೆದರಿಸಿ ದಬ್ಬಾಳಿಕೆಯಿಂದ ಸ್ಥಳದಿಂದ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿದರು.

ಸುರವರ್ಧನ ಬಾರ್ ಮಾಲೀಕ ಪ್ರಭಾವಿಯಾಗಿದ್ದು, ಬಾರ್ ಮಾಲೀಕನ ಒತ್ತಡಕ್ಕೆ ಪೊಲೀಸರು ಒಳಗಾಗಿರುವ ಶಂಕೆ ನಮ್ಮನ್ನು ಕಾಡುತ್ತಿದೆ. ಬಾರ್ ಮಾಲೀಕನಿಂದಲೇ ಕೃತ್ಯ ನಡೆದಿರಬಹುದು. ಈ ಬಗ್ಗೆ ಮೃತ ರಾಮೇಗೌಡರ ಪತ್ನಿ ನಾಗರತ್ನಮ್ಮ ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೂ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದರು.

ಬಾರ್ ನಲ್ಲಿ ಕಲಬೆರಕೆ ಮದ್ಯ ಕುಡಿದು ರಾಮೇಗೌಡ ಮೃತಪಟ್ಟಿದ್ದರೆ ಅದರ ಬಗ್ಗೆಯಾದರೂ ತನಿಖೆಯಾಗಬೇಕು. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತದೆ. ಆದರೆ, ಬಡವರು ಕೊಲೆಯಾದಾಗ ಮಾತ್ರ ಯಾವುದೇ ಸಾಮಾಜಿಕ ನ್ಯಾಯ ದೊರಕುತ್ತಿಲ್ಲ ಎಂದು ಆರೋಪಿಸಿದರು.

ಬಾರ್ ಬಾಗಿಲಿನಲ್ಲಿಯೇ ರಾಮೇಗೌಡರ ಶವ ತೀವ್ರ ಗಾಯಗಳಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಬಾರ್ ಮಾಲೀಕನನ್ನು ಬಂಧಿಸಿ ವಿಚಾರಣೆ ನಡೆಸಬೇಕು. ಒಂದು ವೇಳೆ ಕಲಬೆರಕೆ ಮದ್ಯ ಸೇವನೆಯಿಂದ ವ್ಯಕ್ತಿ ಮೃತಪಟ್ಟಿದ್ದರೆ ಕಲಬೆರಕೆ ಮದ್ಯ ಪೂರೈಕೆ ಮಾಡಿದ ಬಾರ್ ಲೈಸೆನ್ಸ್ ರದ್ದುಪಡಿಸಿ ಮಾಲೀಕನ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸುರವರ್ಧಕ ಬಾರ್ ನಿಯಮಾವಳಿಗಳನ್ನು ಮೀರಿ ನಡೆಯುತ್ತಿದೆ. ಬಾರ್ ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿದ್ದು ಎದುರಿನಲ್ಲಿ ದೀಪದ ವ್ಯವಸ್ಥೆಯೂ ಇಲ್ಲ. ಬಾರ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ರಾಮೇಗೌಡರ ಕೊಲೆ ಪ್ರಕರಣದ ನ್ಯಾಯಯುತ ತನಿಖೆಯಾಗಬೇಕು. ಇಲ್ಲದಿದ್ದರೆ ಆರ್ಯ ಈಡಿಗ ಸಮುದಾಯ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ನಾರಾಯಣಸ್ವಾಮಿ ಎಚ್ಚರಿಸಿದರು.

ಸುದ್ಧಿಗೋಷ್ಠಿಯಲ್ಲಿ ರಾಮೇಗೌಡರ ಪತ್ನಿ ನಾಗರತ್ನಮ್ಮ, ರೇಣುಕಾಂಬ ಟ್ರಸ್ಟ್ ಅಧ್ಯಕ್ಷ ವೆಂಕಟಾಚಲ, ಮುಖಂಡರಾದ ಚೌಡೇನಹಳ್ಳಿ ಮೂರ್ತಿ, ಶಂಕರ, ಸಿ.ಕೆ.ರವಿ, ಪ್ರಕಾಶ್, ನಾಗಣ್ಣ ಸೇರಿ ಹಲವರು ಇದ್ದರು.