ಸಲೂನಿಗೆ ತೆರಳಿದ್ದ ದಲಿತನಿಗೆ ಹೇರ್‌ ಕಟ್‌ ಮಾಡಲು ನಿರಾಕರಿಸಿ ಇರಿದು ಕೊಂದ ಕ್ಷೌರಿಕ!

| Published : Aug 18 2024, 01:54 AM IST / Updated: Aug 18 2024, 12:23 PM IST

ಸಲೂನಿಗೆ ತೆರಳಿದ್ದ ದಲಿತನಿಗೆ ಹೇರ್‌ ಕಟ್‌ ಮಾಡಲು ನಿರಾಕರಿಸಿ ಇರಿದು ಕೊಂದ ಕ್ಷೌರಿಕ!
Share this Article
  • FB
  • TW
  • Linkdin
  • Email

ಸಾರಾಂಶ

ಸಲೂನಿಗೆ ತೆರಳಿದ್ದ ಯುವಕ ದಲಿತ ಎಂಬ ಕಾರಣಕ್ಕಾಗಿ ಕ್ಷೌರ ಮಾಡಲು ನಿರಾಕರಿಸಿದ್ದಲ್ಲದೆ ಆತನನ್ನು ಕತ್ತರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಶನಿವಾರ ನಡೆದಿದೆ.

ಯಲಬುರ್ಗಾ :  ಸಲೂನಿಗೆ ತೆರಳಿದ್ದ ಯುವಕ ದಲಿತ ಎಂಬ ಕಾರಣಕ್ಕಾಗಿ ಕ್ಷೌರ ಮಾಡಲು ನಿರಾಕರಿಸಿದ್ದಲ್ಲದೆ ಆತನನ್ನು ಕತ್ತರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಶನಿವಾರ ನಡೆದಿದೆ.

ಸಂಗನಾಳ ಗ್ರಾಮದ ಯಮನೂರಪ್ಪ ಈರಪ್ಪ ಬಂಡಿಹಾಳ (23) ಮೃತ ಯುವಕ. ಇದೇ ಗ್ರಾಮದ ಮುದುಕಪ್ಪ ಅಂದಪ್ಪ ಹಡಪದ ಹತ್ಯೆ ಮಾಡಿದ ಆರೋಪಿ. ಯಮನೂರಪ್ಪ ಶನಿವಾರ ಬೆಳಗ್ಗೆ ಮುದುಕಪ್ಪನ ಕ್ಷೌರದಂಗಡಿಗೆ ಹೇರ್‌ ಕಟಿಂಗ್‌ ಮಾಡಿಸಿಕೊಳ್ಳಲು ಹೋಗಿದ್ದ. ಈ ವೇಳೆ ‘ನೀನು ಹರಿಜನ (ದಲಿತ) ನಿನಗೆ ಕ್ಷೌರ ಮಾಡುವುದಿಲ್ಲ’ ಎಂದು ಮುದುಕಪ್ಪ ಹೇಳಿದ್ದಾನೆ. ಇದರಿಂದಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಮುದಕಪ್ಪ ಅಂಗಡಿಯಲ್ಲಿರುವ ಕತ್ತರಿಯಿಂದ ಈರಪ್ಪನ ಹೊಟ್ಟೆಗೆ ಇರಿದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವದಿಂದ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಘಟನೆ ಕುರಿತು ಮೃತ ಯುವಕನ ಸಹೋದರ ಹನುಮಂತಪ್ಪ ಯಲುಬುರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಮುದಕಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಪ್ಪಳ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮು ಅರಸಿದ್ದಿ, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಅಸ್ಪ್ರಶ್ಯತೆ ಈಗಲೂ ತಾಂಡವಾಡುತ್ತಿದ್ದು, ಕ್ಷೌರ ನಿರಾಕರಿಸುವ, ದೇಗುಲ, ಹೋಟೆಲ್‌ಗಳಿಂದ ದೂರ ಇಡುವ ಅನೇಕ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇವೆ.

ಆಗಿದ್ದೇನು?- ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಕ್ಷೌರದಂಗಡಿಗೆ ತೆರಳಿದ್ದ ಈರಪ್ಪ ಬಂಡಿಹಾಳ- ದಲಿತ ಎಂಬ ಕಾರಣಕ್ಕೆ ಕ್ಷೌರ ಮಾಡುವುದಿಲ್ಲ ಎಂದು ಹೇಳಿದ ಸಲೂನ್‌ ಮಾಲಿಕ ಮುದುಕಪ್ಪ- ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ. ಕೋಪದಿಂದ ಕತ್ತರಿ ಬಳಸಿ ಇರಿದ ಮುದುಕಪ್ಪ- ರಕ್ತಸ್ರಾವದಿಂದ ಈರಪ್ಪ ಸ್ಥಳದಲ್ಲೇ ಸಾವು