ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಕೊಪ್ಪಳ ತಾಲೂಕಿನ ಬಸಾಪುರ ಕೆರೆ ಬಲ್ಡೋಟ ಕಂಪನಿಗೆ ಸೇರಿದೆ ಎಂದು ಎಲ್ಲೂ ಹೇಳಿಲ್ಲ ಎಂದು ವಕೀಲ ರಾಜು ಬಾಕಳೆ ಹೇಳಿದರು.
ಕೊಪ್ಪಳ: ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಾಲೂಕಿನ ಬಸಾಪುರ ಕೆರೆ ಬಲ್ಡೋಟ ಕಂಪನಿಗೆ ಸೇರಿದೆ ಎಂದು ಎಲ್ಲೂ ಹೇಳಿಲ್ಲ ಎಂದು ವಕೀಲ ರಾಜು ಬಾಕಳೆ ಹೇಳಿದರು.
ನಗರದ ನಗರಸಭೆ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಬಲ್ಡೋಟ ವಿರೋಧಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 193ನೇ ಧರಣಿ ದಿನವಾದ ಸೋಮವಾರ ಹೋರಾಟದಲ್ಲಿ ಪಾಲ್ಗೊಂಡು ಭೂ-ಬಾಧಿತರಾಗಿ 16 ವರ್ಷ ನ್ಯಾಯಾಲಯದಲ್ಲಿ ಹೋರಾಡಿದ ಅನುಭವ ಹಂಚಿಕೊಂಡು ಬಸಾಪುರ ಕೆರೆ ಮತ್ತು ಕಾನೂನು ನಡೆ ಸಂವಾದ ವಿಷಯ ಮಂಡನೆ ಮಾಡಿ ಮಾತನಾಡಿದರು. ಕೆರೆಯನ್ನು 30 ವರ್ಷ ಅವಧಿಗೆ ಷರತ್ತು ವಿಧಿಸಿ ಜಿಲ್ಲಾಧಿಕಾರಿ ₹33 ಲಕ್ಷಕ್ಕೆ ಮಂಜೂರಿ ಮಾಡುವಾಗ ಇದು ಕೆರೆಯಲ್ಲ ಪಂಜರಪೋಳ ಜಮೀನು ಎನ್ನುವ ಕತೆ ಕಟ್ಟಲು ಪ್ರಯತ್ನಪಟ್ಟಿದ್ದು ಮೇಲ್ನೋಟದಲ್ಲೆ ಗೊತ್ತಾಗುತ್ತದೆ. 2003ರಲ್ಲಿ ಬಸಾಪುರ ಕೆರೆಯಲ್ಲಿ ಆಗಿನ ಜಿಲ್ಲಾಧಿಕಾರಿ ನಾಗಲಾಂಬಿಕಾದೇವಿ 3 ಕಂತಿನಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಯೋಜನೆಯಡಿ ಬರಗಾಲ ಕಾಮಗಾರಿ ಮಾಡಿಸಿ ಹೂಳೆತ್ತಿದ್ದಾರೆ. ಅಂದೇ ₹10 ಲಕ್ಷ ವೆಚ್ಚ ಮಾಡಲಾಗಿದೆ. 2006ರಲ್ಲಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಇದು ಕೆರೆಯಾದ ಕಾರಣದಿಂದ ಡಿನೋಟಿಫೈ ಮಾಡಲು ಬರುವುದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ 30 ವರ್ಷ ಲೀಸ್ ಕಂ ಸೇಲ್ ಮಾಡಿ, ದುರ್ಬಲ ಷರತ್ತು ವಿಧಿಸಿ ಕಾಲವಧಿ ಮೀರಿದ ಮೇಲೆ ಸರ್ಕಾರದ ಗಮನಕ್ಕೆ ತಂದು ಪರಭಾರೆ ಮಾಡಬಹುದು ಎಂದು ಹೇಳಿದ್ದು, ಕೆರೆ ಸಂರಕ್ಷಣೆ ಮಾಡುವ ಎಲ್ಲ ಕಾನೂನು ನಿಯಮಾವಳಿಗಳನ್ನು ಉಲ್ಲಂಘಿಸಿದಂತಾಗಿದೆ. ಕೆಳಹಂತದ ಕಂದಾಯ, ಸರ್ವೆ, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿ ಎಲ್ಲರೂ ಸೇರಿ ಕಂಪನಿಗೆ ಕೆರೆ ಮಾರಾಟ ಮಾಡಲು ಅನುವು ಮಾಡಿದ್ದಾರೆ. ಇದರ ಮೇಲೆ ಉನ್ನತ ಮಟ್ಟದ ತನಿಖೆ ನಡೆಸಿ ನಿವೃತ್ತಿಯಾದವರನ್ನೂ ಬಿಡದೆ ತಪ್ಪಿತಸ್ಥರಾಗುವವರ ಮೇಲೆ ಕ್ರಮವಾಗಬೇಕು ಎಂದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಮಾತನಾಡಿ, ನಾನು ಸುಪ್ರೀಂ ಕೋರ್ಟ್ ಆದೇಶ ಓದಿದ್ದೇನೆ. ಅದರಲ್ಲಿ ಬಸಾಪುರ ಕೆರೆಗೆ ಸಂಬಂಧಿಸಿದ ಯಾವುದೇ ಉಲ್ಲೇಖಗಳಿಲ್ಲ. ನಾನು ವಕೀಲನಾಗಿ ಕಾನೂನು ಅಭಿಪ್ರಾಯವನ್ನು ಜಿಲ್ಲಾಧಿಕಾರಿಯವರಿಗೆ ಕೊಡಲು ಸಿದ್ಧನಿದ್ದೇನೆ. ರೈತರ ಮತ್ತು ಕೊಪ್ಪಳ ಜನರ ಪರವಾಗಿ ಹೋರಾಟಕ್ಕೆ ವಕೀಲರ ಸಂಘದ ಮೂಲಕ ಬೆಂಬಲಿಸಿ ಜಿಲ್ಲಾಧಿಕಾರಿಗೆ ಪತ್ರ ಕೊಡುತ್ತೇನೆ. ಅಲ್ಲದೇ ಒಂದು ವಾರದಲ್ಲಿ ಇಡಿಯಾಗಿ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ಸಾರಾಂಶವನ್ನು ಲಿಖಿತವಾಗಿ ಜಿಲ್ಲಾಡಳಿತಕ್ಕೆ ಕೊಡುವುದಾಗಿ ಹೇಳಿದರು.
ಹಿರಿಯ ವಕೀಲ ಪೀರಾಹುಸೇನ್ ಹೊಸಳ್ಳಿ ಮಾತನಾಡಿ, ಸುಪ್ರೀಂ ಕೋರ್ಟ್ ಮತ್ತು ಕೆರೆ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ನಿಯಮಾವಳಿಗಳು ಬಲಿಷ್ಠವಾಗಿವೆ. ಜ. ಮಾರ್ಕಾಂಡೇಯ ಕಟ್ಜೂ ತೀರ್ಪು ಉಲ್ಲೇಖ ಮಾಡಿದ ಅವರು, ಇಂತಹ ಪ್ರಬಲ ಆದೇಶಗಳು ಕೆರೆಕಟ್ಟೆ ರಕ್ಷಣೆಗಾಗಿ ಬಂದಿವೆ. ನೈಸರ್ಗಿಕ ಸಮುದಾಯದ ಸ್ವತ್ತಾದ ಕೆರೆ, ಸರೋವರಗಳನ್ನು ಯಾವುದೇ ಸರ್ಕಾರಕ್ಕೆ ಮಾರುವ ಹಕ್ಕು ಇಲ್ಲ. ಸರ್ವೋಚ್ಚ ನ್ಯಾಯಾಲಯದ ಅನೇಕ ಆದೇಶಗಳು ನಮ್ಮಲ್ಲಿದ್ದು, ಅವುಗಳನ್ನು ಕೊಡಲು ಸಿದ್ಧ ಎಂದು ಪ್ರತಿಪಾದಿಸಿದರು.ಸಂವಾದದಲ್ಲಿ ಸಂಗಪ್ಪ ವಕ್ಕಳದ, ಜಂಟಿ ಕ್ರಿಯಾ ವೇದಿಕೆ ಸಂಚಾಲಕರಾದ ಮಂಜುನಾಥ ಜಿ. ಗೊಂಡಬಾಳ, ಡಾ. ಮಂಜುನಾಥ ಸಜ್ಜನ್, ಸಾವಿತ್ರಿ ಮುಜುಮದಾರ, ಶಿವಾನಂದಯ್ಯ ಬೀಳಗಿಮಠ, ಶರಣು ಶೆಟ್ಟರ್, ಕಾಶಪ್ಪ ಚಲವಾದಿ ಪ್ರಶ್ನೋತ್ತರದಲ್ಲಿ ಪಾಲ್ಗೊಂಡು ಚರ್ಚಿಸಿದರು. ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಮಹಾಂತೇಶ ಕೊತಬಾಳ, ಸರೋಜಾ ಬಾಕಳೆ, ಮಾಲಾ ಬಡಿಗೇರ, ಎಂಜಿನಿಯರ್ ಅನುರಾಧಾ, ವಿದ್ಯಾ ನಾಲ್ವಾಡ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಡಾ. ಬಸವರಾಜ ಪೂಜಾರ, ಶಾಂತಯ್ಯ ಅಂಗಡಿ, ಹನುಮಂತಪ್ಪ ಗೊಂದಿ, ಯಲ್ಲಪ್ಪ ಬಂಡಿ, ಎಂ.ಕೆ. ಸಾಹೇಬ, ವಕೀಲ ಬಿ.ಎಸ್. ವೀರಾಪುರ, ವಿನಯ ಸಜ್ಜನ್, ಶಂಭುಲಿಂಗಪ್ಪ ಹರಗೇರಿ, ನಾಗಪ್ಪ ಕಿನ್ನಾಳ, ರವಿ ಕಾಂತನವರ, ಸುಭಾನ್ ಸಾಬ್ ನೀರಲಗಿ, ಬಸವರಾಜ ಪೂಜಾರ ಕಾಸನಕಂಡಿ, ಪಂಪಣ್ಣ ಚಿಂತಪಲ್ಲಿ, ನಾಗರಾಜ ಕುಷ್ಟಗಿ, ಮಹಾದೇವಪ್ಪ ಮಾವಿನಮಡು, ನಾಗರಾಜ ಯಲಿಗಾರ, ಗೋಪಾಲ ಕುಂಬಾರ, ವಿಜಯ ಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ಮಲ್ಲಪ್ಪ ಎಸ್.ಎಚ್., ವೈ. ಸತ್ಯನಾರಾಯಣ, ವಿನೋದ, ಶಿವರಾಜ ಚಲವಾದಿ ಪಾಲ್ಗೊಂಡಿದ್ದರು.