ಸರ್ಕಾರದ ‘ಗ್ಯಾರಂಟಿ’ಗೆ ಬಸವತತ್ವ ಪರಿಕಲ್ಪನೆಯೇ ಬುನಾದಿ: ಹೆಚ್.ಆಂಜನೇಯ

| Published : May 11 2024, 12:33 AM IST / Updated: May 11 2024, 12:34 AM IST

ಸರ್ಕಾರದ ‘ಗ್ಯಾರಂಟಿ’ಗೆ ಬಸವತತ್ವ ಪರಿಕಲ್ಪನೆಯೇ ಬುನಾದಿ: ಹೆಚ್.ಆಂಜನೇಯ
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದಲ್ಲಿಯೇ ಮುಂದಿನ ದಿನಗಳಲ್ಲಿ ನಾಡು ಎದುರಿಸುವ ಸಮಸ್ಯೆಗಳಿಗೆ ವಚನಗಳ ಮೂಲಕ ಸಂದೇಶ ನೀಡಿದ ಬಸವಣ್ಣ, ಸಂಸತ್ತು ಸ್ಥಾಪನೆಗೆ ಅನುಭವ ಮಂಟಪದ ಮೂಲಕ ದಿಕ್ಸೂಚಿಯಾಗಿದ್ದರು ಎಂದು ಮಾಜಿ ಸಚಿವ ಹೆಚ್.ಆಂಜನೇಯ ಪ್ರತಿಪಾದಿಸದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಗೆ ಬಸವತತ್ವ ಪರಿಕಲ್ಪನೆಗಳೇ ಬುನಾದಿ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.

ಸೀಬಾರ ಸಮೀಪದ ತಮ್ಮ ಗೃಹ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು 12ನೇ ಶತಮಾನದಲ್ಲಿಯೇ ಮುಂದಿನ ದಿನಗಳಲ್ಲಿ ನಾಡು ಎದುರಿಸುವ ಸಮಸ್ಯೆಗಳಿಗೆ ವಚನಗಳ ಮೂಲಕ ಸಂದೇಶ ನೀಡಿದ ಬಸವಣ್ಣ, ಸಂಸತ್ತು ಸ್ಥಾಪನೆಗೆ ಅನುಭವ ಮಂಟಪದ ಮೂಲಕ ದಿಕ್ಸೂಚಿಯಾಗಿದ್ದರೆಂದರು.

ಪ್ರಸ್ತುತ ರಾಜಕೀಯ ಕಾರಣಕ್ಕಾಗಿ ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ, ದ್ವೇಷದ, ಸುಳ್ಳು ಭಾಷಣಗಳ ಪ್ರಭಾವಕ್ಕೆ ಸಂಪೂರ್ಣ ಕಡಿವಾಣ ಹಾಕಲು ಬಸವತತ್ವವೇ ಬ್ರಹ್ಮಾಸ್ತ್ರವಾಗಿದೆ. ನೊಂದ ಜನರ ಕಣ್ಣೀರು ಒರೆಸಿದ ಬಸವಣ್ಣ, ಅಸ್ಪೃಶ್ಯತೆ, ಮೌಢ್ಯಾಚರಣೆ, ಅಸಮಾನತೆ ವಿರುದ್ಧ ಹೋರಾಟ ನಡೆಸಿದ ಫಲ ಇಂದು ಎಲ್ಲ ವರ್ಗದ ಜನ ವಿವಿಧ ಕ್ಷೇತ್ರದಲ್ಲಿ ಸ್ಥಾನಮಾನ ಪಡೆದು, ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಬಸವ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ತುರ್ತು ಚಿಕಿತ್ಸೆ ರೀತಿ ಅಗತ್ಯವಿದ್ದು, ಅದರ ಪಾಲನೆ ನಮ್ಮೆಲ್ಲರ ಹೊಣೆ ಆಗಿದೆ ಎಂದರು.

ಬಸವ ಅನುಯಾಯಿಗಳು ಎಂದು ಹೇಳಿಕೊಂಡು ವರ್ಷಕ್ಕೊಮ್ಮೆ ಜಯಂತಿ ಆಚರಣೆ ಮಾಡುವ ನಾವುಗಳು ಕಾಯಕ ತತ್ವ ಮರೆತಿದ್ದೇವೆ. ಜನಸೇವೆ, ನೊಂದ ಜನರಿಗೆ ಸ್ಪಂದಿ ಸುವ ಮೂಲಕ ದೇವರನ್ನು ಕಾಣುವುದನ್ನೇ ಮರೆತಿದ್ದೇವೆ. ದ್ವೇಷದ ಮಾತುಗಳಿಗೆ ಕಿವಿಕೊಟ್ಟು ಮನಸ್ಸನ್ನು ಕಲುಷಿತಗೊಳಿಸಿಕೊಳ್ಳುತ್ತಿದ್ದೇವೆ.ಹಳ್ಳಿಗಳಲ್ಲಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಮಸೀದಿ, ಮಂದಿರ, ಚರ್ಚ್ ನಿರ್ಮಿಸುವ ನಾವು, ನಮ್ಮದೇ ಊರಿನ, ನಮ್ಮ ಮನೆಯ ಮುಗ್ಧ ಮಕ್ಕಳ ಶಿಕ್ಷಣಕ್ಕೆ ಶಾಲೆ, ನೊಂದ ಜನರಿಗೆ ಆಶ್ರಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದೇವೆ. ಈ ನಿಟ್ಟಿನಲ್ಲಿ ಬಸವ ಅನುಯಾಯಿಗಳಾದ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಮಹಿಳೆ, ಯುವ ಪೀಳಿಗೆ, ಬಡ ಜನರನ್ನು ಮುಖ್ಯವಾಹಿನಿಗೆ ತರುವ ಗುರಿ ಹೊಂದಲಾಗಿದೆ. ಈ ಯೋಜನೆಗಳನ್ನು ಟೀಕಿಸುವವರು ಬಸವಣ್ಣನ ಚಿಂತನೆಯ ವಿರೋಧಿಗಳು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಸವಣ್ಣನ ಆಶಯದಂತೆ ಆಡಳಿತ ನಡೆಸುತ್ತಿದೆ. ಬಸವಣ್ಣನನ್ನು ‘ಸಾಂಸ್ಕೃತಿಕ ನಾಯಕ’ನೆಂದು ಘೋಷಿಸುವ ಮೂಲಕ ತನ್ನ ಬದ್ಧತೆ ಪ್ರದರ್ಶಿಸಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಅನಿಲ್ ಕೋಟಿ, ಮುಖಂಡರಾದ ಎಲ್.ಐ.ಸಿ ಈರಣ್ಣಯ್ಯ, ರವಿ ಬಿ.ಜಿ ಹಳ್ಳಿ, ಲೋಕೇಶ್, ಉಪಸ್ಥಿತರಿದ್ದರು.ಇಷ್ಟಲಿಂಗದಿಂದ ದೈವತ್ವ ತೋರಿದ ಬಸವಣ್ಣ

ಸಿರಿಗೆರೆ: ಇಷ್ಟಲಿಂಗದ ಮೂಲಕ ದೈವತ್ವವನ್ನು ಹನ್ನೆರಡನೆಯ ಶತಮಾನದಲ್ಲಿಯೇ ಬಸವಣ್ಣನವರು ತೋರಿದರು ಎಂದು ದಾವಣಗೆರೆ ಅನುಭವ ಮಂಟಪದ ಅಧ್ಯಾಪಕ ಆರ್.ಶರತ್‌ ತಿಳಿಸಿದರು.

ಇಲ್ಲಿಯ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಬಸವಣ್ಣನವರ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೈವತ್ವವನ್ನು ಕರ್ಮ ಮತ್ತು ಕಾಯಕ ಮಾರ್ಗಗಳ ಮೂಲಕ ಅತ್ಯಂತ ಸರಳವಾಗಿ ಸಾಧಿಸಬಹುದು ಎಂಬುದು ಬಸವಣ್ಣನವರ ಆಶಯವಾಗಿತ್ತು ಎಂದರು.ಈಗಲೂ ರಾಜ್ಯದ ಕೆಲವು ಕಡೆಗಳಲ್ಲಿ ಬಸವಣ್ಣನವರ ಜಯಂತಿಯನ್ನು ಎತ್ತುಗಳ ಹಬ್ಬವೆಂದೇ ಭಾವಿಸಿದ್ದಾರೆ. ಎತ್ತುಗಳಿಗೆ ಶೃಂಗಾರ ಮಾಡಿ, ಬಸವಣ್ಣನ ಜಯಂತಿ ಮಾಡುವುದನ್ನು ನೋಡಿದ್ದೇವೆ. ಬಸವಣ್ಣ ಎತ್ತಲ್ಲ. ಬಸವಣ್ಣನವರು ನಮ್ಮೆಲ್ಲರಂತೆಯೇ ಸಹಜ ಮಾನವರಾಗಿದ್ದರು ಎಂದರು.

ವ್ಯಕ್ತಿಯ ನಡೆ – ನುಡಿ ಪರಿಶುದ್ಧವಾಗಿರಬೇಕು. ನಾವು ಆಡುವ ಮಾತ ದೇವನಿಗೆ ಮೆಚ್ಚುಗೆಯಾಗುವಂತಿರಬೇಕು ಎಂಬುದು ಬಸವಣ್ಣನವರ ನಿಲುವಾಗಿತ್ತು ಎಂದರು.ಅಧ್ಯಕ್ಷತೆ ವಹಿಸಿದ್ದ ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್‌ ಮರುಳಸಿದ್ದಯ್ಯ ಬಸವಣ್ಣನವರ ವಚನಗಳನ್ನು ಯುವಕರು ಓದಿ ಮನನ ಮಾಡಿಕೊಂಡು ತಮ್ಮ ನಡೆ-ನುಡಿಗಳಲ್ಲಿ ಅಳವಡಿಸಿಕೊಳ್ಳಬೇಕು. ಅವು ಬದುಕಿನ ಅನುಭವಾಮೃತಗಳು ಇದ್ದಂತೆ ಎಂದರು.

ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಬಸವಣ್ಣನವರ ಉಸಿರೇ ಆಗಿದ್ದರು. ಬಸವಣ್ಣನವರ ವಚನಗಳನ್ನು ಭಾರತದಲ್ಲಿ ಮೊಟ್ಟ ಮೊದಲಿಗೆ ಪ್ರಚುರಪಡಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದರು.ಅಣ್ಣನ ಬಳಗದ ಉಪಾಧ್ಯಕ್ಷ ಯು. ಚಂದ್ರಪ್ಪ, ಸಹ ಕಾರ್ಯದರ್ಶಿ ಪ್ರಕಾಶ್ ಬಣಕಾರ, ಶಿಕ್ಷಕ ಎ.ಆರ್. ತಿಪ್ಪೇಸ್ವಾಮಿ ವಸತಿ ನಿಲಯದ ಶಿಕ್ಷಕರಾದ ಸಿ.ಎಸ್. ಗಿರೀಶ್, ಶಿವಕುಮಾರ್, ಆಶಾ, ನಿರ್ಮಲಾ, ನೇತ್ರಾವತಿ, ಉಷಾ ಮತ್ತಿತರರು ಇದ್ದರು. ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು, ವಿಜ್ಞಾನ ವಿಭಾಗದ ಕುಮಾರಿ ಮನುಪ್ರಿಯಾ, ಸ್ನೇಹಾ, ಅನುಷಾ ವಚನಗೀತೆ ಕಾರ್ಯಕ್ರಮ ನಡೆಸಿಕೊಟ್ಟರು.ಡಿ.ಎಸ್.ಚೈತ್ರಾ ಸ್ವಾಗತಿಸಿದರು. ವೈ.ಎಂ. ಸೃಷ್ಠಿತಾ ವಂದಿಸಿದರು. ದಾನೇಶ್ವರ ನಿರೂಪಿಸಿದರು.

ಬಸವಣ್ಣ ಸಂನ್ಯಾಸಿ ಅಲ್ಲ, ಗೃಹಸ್ಥ ಜಗದ್ಗುರು: ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀ

ಹೊಸದುರ್ಗ: ಬಸವಣ್ಣ ವಿಶ್ವಗುರು ಮತ್ತು ಸಾಂಸ್ಕೃತಿಕ ನಾಯಕ, ಅವರು ಸಂನ್ಯಾಸಿ ಅಲ್ಲ, ಗೃಹಸ್ಥ ಜಗದ್ಗುರು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಗೃಹಸ್ಥ ಜೀವನ ಸಂನ್ಯಾಸಿ ಜೀವನಕ್ಕಿಂತ ಕಷ್ಟ. ಬಸವಣ್ಣ ಈ ಜಗತ್ತಿಗೆ ಬೆಳಕನ್ನು ಕೊಡುವ ಕಾರ್ಯ ಮಾಡಿದರು. ಬಸವಣ್ಣ ಅಹಂಕಾರ ತೊರೆದ ಪ್ರತಿಯೊಬ್ಬರನ್ನೂ ಅಪ್ಪಿಕೊಂಡರು. ತಳ ಸಮುದಾಯದ ಜನರನ್ನು, ಅಸ್ಪೃಶ್ಯರನ್ನು ಹತ್ತಿರಕ್ಕೆ ಕರೆದುಕೊಂಡು ಮೇಲೆತ್ತಿದರು. ಇವರನ್ನು ಅನುಭವ ಮಂಟಪಕ್ಕೆ ಕರೆಸಿ ಹಲವು ಆಲೋಚನೆಗಳನ್ನು ಕೊಟ್ಟು ವಚನಗಳನ್ನು ಬರೆಸುವ ಕೆಲಸ ಮಾಡಿದರು ಎಂದರು

ಸ್ತ್ರೀಯರಿಗೆ ಸ್ವಾತಂತ್ರ್ಯವನ್ನು ಕೊಡಲು ಮೊದಲ ಪ್ರಯತ್ನ ಮಾಡಿದವರು ಬಸವಣ್ಣ. ಬಿಜ್ಜಳನ ಆಸ್ಥಾನದಲ್ಲಿ ಅರ್ಥಮಂತ್ರಿಯಾಗಿ ಸ್ವಾರ್ಥಕ್ಕಾಗಿ ಅಧಿಕಾರ ನಡೆಸಲಿಲ್ಲ. ಸಮಾಜೋದ್ಧಾರಕ ಕೆಲಸ ಮಾಡಿದರು. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ವಿನೀತ ಭಾವನೆಯನ್ನು ಹೊಂದಿದ್ದರು . ತಮ್ಮ ಹುಟ್ಟನ್ನು ಅಪವರ್ಗೀಕರಣ ಮಾಡಿಕೊಂಡು ಸಮಾನತೆಯನ್ನು ಸಾರಿದರು. ಹುಟ್ಟಿನಿಂದ ಒಬ್ಬ ವ್ಯಕ್ತಿಯ ಯೋಗ್ಯತೆಯನ್ನು ಅಳೆಯದೇ ಸಾಧನೆಯಿಂದ ಅಳೆಯಬೇಕು. ಬಸವಣ್ಣ ಪೂಜೆಗೆ ಸೀಮಿತವಾಗದೇ ಅವರ ತತ್ವ ಸಿದ್ಧಾಂತಗಳು ಆಚರಣೆಗೆ ತಂದಾಗ ಮಾತ್ರ ಬಸವ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು.

ಬಸವಣ್ಣನವರ ಬಗ್ಗೆ ವೀಣಾ ಮಾತನಾಡಿ, ಸಮಾಜವನ್ನು ಅಭ್ಯುದಯಕ್ಕಾಗಿ ಅನುಭವ ಮಂಟಪ ಸ್ಥಾಪಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದರು. ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ಅವಕಾಶ ಮತ್ತು ಗೌರವವನ್ನು ಕೊಟ್ಟರು‌. ಇಷ್ಟಲಿಂಗದ ಪರಿಕಲ್ಪನೆಯನ್ನು ಜಾರಿಗೆ ತಂದರು. ಸಮಾಜವಾದ ಮತ್ತು ಸಮತಾವಾದ ತತ್ವಗಳನ್ನು ಜಾರಿಗೆ ತರುವ ಅಂತರ್ ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದರು. ವಚನಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದರು ಎಂದರು.ಅಕ್ಕನ ಬಳಗದವರು ವಚನಗಳನ್ನು ಹಾಡಿದರು. ಸಾಣೇಹಳ್ಳಿಯ ಶಾಲಾ ಮಕ್ಕಳು ವಚನ ನೃತ್ಯ ಪ್ರದರ್ಶಿಸಿದರು. ಶಾಲಾ ಮಕ್ಕಳು ವಚನಗಳನ್ನು ಹಾಡಿದರು. ಶಿಕ್ಷಕಿ ಸುಧಾ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪ್ರಾಂಶುಪಾಲ ನಟರಾಜ್ ಹೊನ್ನವಳ್ಳಿ ಸ್ಥಳೀಯರಾದ ಕೃಷ್ಣಪ್ಪ, ಹೊನ್ನೇಶಪ್ಪ, ಶಿವಕುಮಾರ್ ಮತ್ತಿತರಿದ್ದರು.

ಅಂಧಕಾರ ತೊರೆದ ಜಗಜ್ಯೋತಿ: ಬಸವಲಿಂಗಮೂರ್ತಿ ಮಹಾಸ್ವಾಮಿ

ಕನ್ನಡಪ್ರಭ ವಾರ್ತೆ ಚಳ್ಳಕೆರೆವೀರಶೈವ ಲಿಂಗಾಯತ ಧರ್ಮ ಇಂದು ಸಮಾಜದ ಎಲ್ಲಾ ವರ್ಗದ ಜನರನ್ನು ಹೆಚ್ಚು ಆಕರ್ಷಿಸಿದೆ. ಬೇರೆ ಎಲ್ಲಾ ಸಮುದಾಯ ಗಳಿಗಿಂತ ಧಾರ್ಮಿಕ ವಿಚಾರದಲ್ಲಿ ಅತಿ ಹೆಚ್ಚು ಮೌಲ್ಯವನ್ನು ಸಂಪಾದಿಸಿರುವುದು ವೀರಶೈವ ಧರ್ಮ, ಹೀಗೆ ಜಗಜ್ಯೋತಿ ಬಸವೇಶ್ವರರ ಮಹಾನ್ ಕಾರ್ಯ ಎಂದಿಗೂ ಶಾಶ್ವತವೆಂದು ಮೈಸೂರಿನ ರಾಮನಹಳ್ಳಿ ಬಸವ ಧ್ಯಾನ ಮಂದಿರದ ಬಸವಲಿಂಗಮೂರ್ತಿ ಮಹಾಸ್ವಾಮಿ ತಿಳಿಸಿದರು.

ಅವರು, ಶುಕ್ರವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಚಳ್ಳಕೆರೆ ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟ, ಗ್ರಾಮಾಂತರ ವೀರಶೈವ ಲಿಂಗಾಯತ ಸಂಘ, ಮಹಿಳಾ ಸಂಘ ಹಾಗೂ ನೌಕರರ ಸಂಘ ಹಮ್ಮಿಕೊಂಡಿದ್ದ ನಾಡಿನ ಸಾಂಸ್ಕೃತಿಕ ನಾಯಕ ಶ್ರೀಬಸವೇಶ್ವರರ ಜಯಂತೋತ್ಸವ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಸಮಾಜದ ಅಂಧಕಾರ ತೊರೆದ ಜಗಜ್ಯೋತಿ ಬಸವಣ್ಣ ಎಂದು ಅಭಿಪ್ರಾಯಪಟ್ಟರು.ಜಗಜ್ಯೋತಿ ಬಸವೇಶ್ವರರ ಚಿಂತನೆಗಳು ಮತ್ತು ಹಲವಾರು ಸಮಸ್ಯೆಗಳನ್ನು ಎದುರಿಸಿ ಅವರು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಯನ್ನು ಮೂಡಿಸುವಲ್ಲಿ ಯಶಸ್ವಿಯಾದ ಬಗ್ಗೆ ಚಿತ್ರಹಳ್ಳಿ ಸಹ ಪ್ರಾಧ್ಯಾಪಕ ಡಾ.ಎ.ಮೋಹನ್ ಉಪನ್ಯಾಸದಲ್ಲಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ, ನಗರಸಭಾ ಸದಸ್ಯ ಕೆ.ಸಿ.ನಾಗರಾಜು ಮಾತನಾಡಿ, ನಗರದ ಬೆಂಗಳೂರು ರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರರ ಅಶ್ವಾರೂಢ ಕಂಚಿನ ಪ್ರತಿಮೆಯನ್ನು ಸುಮಾರು ೨೨ ಲಕ್ಷದಲ್ಲಿ ನಿರ್ಮಿಸಲು ನಿರ್ಧಾರ ಕೈಗೊಂಡಿದ್ದು, ಎಲ್ಲರೂ ಸಹಕರಿಸು ವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕೆ.ಎಂ.ಜಗದೀಶ್, ಕಾರ್ಯದರ್ಶಿ ಹೊಸಮನೆ ಸ್ವಾಮಿ, ನೌಕರರ ಸಂಘದ ಅಧ್ಯಕ್ಷ ಸಿ.ಗುರುಮೂರ್ತಿ, ಲಿಂಗಾಯತ ಮಹಾಸಭಾ ತಾಲ್ಲೂಕು ಅದ್ಯಕ್ಷ ಎಚ್.ಪ್ರಸನ್ನಕುಮಾರ್, ವಕೀಲರ ಸಂಘ ಅಧ್ಯಕ್ಷ ಕೆ.ಎಂ.ನಾಗರಾಜು, ರಿಯಲ್‌ಎಸ್ಟೇಟ್ ಉದ್ಯಮಿ ರೇವಣ್ಣ, ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಎಂ.ವಿಜಯೇಂದ್ರ, ಎಚ್.ಎಲ್.ಅಶೋಕ್, ವಕೀಲ ಸಿದ್ಧಾರ್ಥ, ಎಸ್.ವಿ.ನಾಗರಾಜು, ಎಚ್.ಪ್ರಕಾಶ್, ಕೆ.ನಾಗೇಶ್, ಕೆ.ಬಿ.ತಿಪ್ಪೇಸ್ವಾಮಿ, ಎಸ್.ಜಯಪ್ರಕಾಶ್, ಸಿ.ಎಂ.ವಿಶುಕುಮಾರ್, ಸಿ.ಸಿದ್ಧಾರ್ಥ, ಅಕೌಂಟೆಟ್ ಎಚ್.ಎಲ್.ಅಶೋಕ್, ಕೆ.ಎಂ.ಕೋಟ್ರೇಶ್, ಎ.ವಿಜಯೇಂದ್ರ, ಪಿ.ಜಗದೀಶ್, ಮಾತೃಶ್ರೀ ಮಂಜುನಾಥ, ಕೆ.ಎಂ.ನಟರಾಜು, ವೃಷಬೇಂದ್ರಪ್ಪ, ಜಿ.ವಿ.ರಾಜಣ್ಣ, ಸಿ.ಎಲ್.ವೀರಣ್ಣ, ಎ.ಮಂಜುನಾಥ, ಎಚ್.ಗಂಗಣ್ಣ, ಇಂಧುಶೇಖರ್, ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ, ನಾಗರಾಜು, ಶಿವಕೀರ್ತಿ, ಡಿ.ಎಂ.ಟಿಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.ಶಿಕ್ಷಣ ಸಂಸ್ಕಾರವಾದಾಗ ಮಾತ್ರ ಗುರುತ್ವ, ಮಹತ್ವ ಬರುತ್ತದೆ: ಶ್ರೀ

ಹಿರಿಯೂರು: ತಾಲೂಕಿನ ಐಮಂಗಲ ಗ್ರಾಮದ ಶ್ರೀ ಹರಳಯ್ಯ ಗುರುಪೀಠ, ಶ್ರೀ ಮಹಾಶಿವಶರಣ ಹರಳಯ್ಯ ವಿದ್ಯಾಸಂಸ್ಥೆ ಹಾಗೂ ಶ್ರೀ ಮಹಾ ಶಿವಶರಣ ಹರಳಯ್ಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಶುಕ್ರವಾರ ವಿಶ್ವಗುರು ಬಸವೇಶ್ವರ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಬಸವ ಹರಳಯ್ಯಸ್ವಾಮಿ ಮಾತನಾಡಿ ಶಿಕ್ಷಣ ಸಂಸ್ಕಾರವಾದಾಗ ಮಾತ್ರ ಗುರುತ್ವ ಮತ್ತು ಮಹತ್ವ ಬರುತ್ತದೆ. ಬಸವಣ್ಣನವರು 12 ನೇ ಶತಮಾನದಲ್ಲಿ ಗುರುತ್ವದ ಗುರುತಾಗಿ ಉದಯಿಸಿದರು. ಎಲ್ಲಾ ದೀನ ದಲಿತರಿಗೆ ಲಿಂಗ ದೀಕ್ಷೆ ನೀಡಿ ಅರಿವಿನ ಜ್ಯೋತಿಯನ್ನು ಮತ್ತು ಅಂತರಂಗದ ಜ್ಯೋತಿಯನ್ನು ಬೆಳಗಿಸಿದರು. ಅಂತರಂಗದ ಕಲ್ಮಶವನ್ನು ತೊಳೆದು ಪರಿಶುದ್ಧ ಮಾಡಿದರು.ಲಂಡನ್ನಿನ ಥೇಮ್ಸ್‌ ನದಿ ತೀರದಲ್ಲಿ ಬಸವಣ್ಣವರ ಪುತ್ಥಳಿಯಾಗಿರುವುದು ಕನ್ನಡ ನಾಡಿಗೆ ಹೆಮ್ಮೆಯ ವಿಷಯವಾಗಿದೆ. ಬಸವಣ್ಣನವರು ಹಾಕಿಕೊಟ್ಟ ಹಾದಿಯೇ ನಮಗೆ ಆದರ್ಶ. ಮುಖ್ಯಮಂತ್ರಿಗಳು ಬಸವಣ್ಣ ರವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿರೋದು ಸಂತಸ ತಂದಿದೆ. ಅದಕ್ಕಾಗಿ ಶ್ರೀಮಠದಿಂದ ಅವರಿಗೆ ಅಭಿನಂದನೆಗಳು ಸಲ್ಲಿಸುತ್ತಿದ್ದೇನೆ ಎಂದರು.

ನಿವೃತ್ತ ಶಿಕ್ಷಕ, ಚಿಂತಕ ಬುಡೇನ್ ಸಾಬ್ ರವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಎಸ್ ಜೆ ಎಂ ಚಿತ್ರಕಲೆ ಶಾಲೆಯ ಪ್ರಾಂಶುಪಾಲ ಸಿ ಕಣುಮೇಶ್, ಹಿರಿಯ ಕಲಾವಿದ ಗೊಂದಾಳಪ್ಪ ಮಾತನಾಡಿದರು.ಈ ಸಂದರ್ಭದಲ್ಲಿ ಕಲಾವಿದ ಡಿ.ಶ್ರೀಕುಮಾರ್, ಚಂದ್ರಪ್ಪ, ಲೋಕೇಶ್, ಶಿಕ್ಷಕ ತಿಪ್ಪೇಸ್ವಾಮಿ, ಛಾಯಾ ಡಿ ನಾಗಾರ್ಜುನ್, ಕೆ ಪವಿತ್ರ, ಶಿಕ್ಷಕಿ ರಕ್ಷಿತಾ, ಹರೀಶ್ ಹಾಗೂ ಮಠದ ಭಕ್ತಾದಿಗಳು,ಶಾಲಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು .