ಸಾರಾಂಶ
ಬೆಂಗಳೂರಿನಲ್ಲಿ ಅ.5ರಂದು ಸಮಾರೋಪವಾಗುವ ಬಸವ ಸಂಸ್ಕೃತಿ ಅಭಿಯಾನದ ಬೃಹತ್ ಕಾರ್ಯಕ್ರಮಕ್ಕೆ ಪಂಚ ಪೀಠಾಧೀಶ್ವರರು ಭಾಗವಹಿಸಿದರೆ ಮೊದಲು ಸ್ವಾಗತಿಸುತ್ತೇವೆ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.
- ಪೂರ್ವಭಾವಿ ಸಭೆಯಲ್ಲಿ ಸಾಣೇಹಳ್ಳಿ ಶ್ರೀ ಹೇಳಿಕೆ । ಬೆಂಗಳೂರಲ್ಲಿ ಅ.5ರಂದು ಅಭಿಯಾನ ಸಮಾರೋಪ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಂಗಳೂರಿನಲ್ಲಿ ಅ.5ರಂದು ಸಮಾರೋಪವಾಗುವ ಬಸವ ಸಂಸ್ಕೃತಿ ಅಭಿಯಾನದ ಬೃಹತ್ ಕಾರ್ಯಕ್ರಮಕ್ಕೆ ಪಂಚ ಪೀಠಾಧೀಶ್ವರರು ಭಾಗವಹಿಸಿದರೆ ಮೊದಲು ಸ್ವಾಗತಿಸುತ್ತೇವೆ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಮಂಗಳವಾರ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಲಿಂಗಾಯತರೆಲ್ಲರೂ ಒಂದಾಗಬೇಕೆಂಬ ವಿಚಾರ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ನಮ್ಮದು ದೊಡ್ಡದೆಂಬ ಭಾವನೆ ನಮ್ಮಲ್ಲಿಲ್ಲ ಎಂದರು.
ಗುರು-ವಿರಕ್ತ ಭಾವನೆಯೇ ಲಿಂಗಾಯತ ಧರ್ಮದಲ್ಲಿಲ್ಲ. ಪಂಚ ಪೀಠಾಧೀಶರು ಜಾತಿಗಣತಿ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಕ್ಕೂ ನಮ್ಮ ವಿರೋಧ ಇಲ್ಲ. ಹಿಂದೆಲ್ಲಾ ಪಂಚಪೀಠಾಧೀಶರು ಬರಬೇಕೆಂದರೆ ಉತ್ಸವವಿದ್ದರೆ ಬರುತ್ತಿದ್ದರು. ಈಗ ಉತ್ಸವದ ಉತ್ಸಾಹ ಸ್ವಲ್ಪ ಸರಿಸಿ, ನಾವೆಲ್ಲರೂ ಒಂದಾಗಬೇಕೆಂಬ ಭಾವನೆ ಬೆಳೆಸಿಕೊಂಡಿದ್ದಾರೆ. ನಾವೂ ಅಂತಹ ಭಾವನೆ ಬೆಳೆಸಿಕೊಳ್ಳೋಣ ಎಂದು ಹೇಳಿದರು.ಅತಿಯಾಗಿ ಟೀಕೆ, ಟಿಪ್ಪಣಿಗಳೇ ಬೇಡ. ಹಾಗಂತ ಪಂಚ ಪೀಠಾಧೀಶರು ಹೇಳಿದ್ದೆಲ್ಲವೂ ಸತ್ಯವಲ್ಲ. ಅಂತಹವರು ಹೇಳಿದ್ದೆಲ್ಲವನ್ನೂ ನಾವು ಒಪ್ಪುವುದೂ ಇಲ್ಲ. ಬಸವ ತತ್ವ ಪುರಾಣ ಪರಂಪರೆಯಲ್ಲ. ಪಂಚ ಪೀಠಾಧೀಶರಲ್ಲೂ ವೈಜ್ಞಾನಿಕ, ವೈಚಾರಿಕಾ ಮನೋಭಾವ ಬೆಳೆಯುತ್ತಿರುವುದು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇವೆ. ಜಾತಿಗಣತಿಯಲ್ಲಿ ಹೀಗೆಯೇ ಬರೆಸಬೇಕೆಂಬ ಒತ್ತಡ ಜನರ ಮೇಲೆ ಹೇರುವುದಲ್ಲ. ಪಂಚ ಪೀಠಾಧೀಶರು ಸಿದ್ಧರಿದ್ದರೆ ಚರ್ಚಿಸಿ, ಒಗ್ಗೂಡಿ ತೀರ್ಮಾನ ಕೈಗೊಳ್ಳಲು ಮುಕ್ತರಾಗಿದ್ದೇವೆ ಎಂದು ಶ್ರೀಗಳು ತಿಳಿಸಿದರು.
ಶ್ರೀಶೈಲ ಜಗದ್ಗುರುಗಳು ಕೆಲವು ವರ್ಷಗಳ ಹಿಂದೆ ಸಮೀಪದಲ್ಲಿದ್ದ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ಶಿಷ್ಯರ ಮೂಲಕ ಸಾಣೇಹಳ್ಳಿಗೆ ಭೇಟಿ ನೀಡುವಂತೆ ಹೇಳಿದ್ದೆ. ಆಗ ಶ್ರೀಶೈಲ ಶ್ರೀಗಳು ಸಾಣೇಹಳ್ಳಿ ಮಠಕ್ಕೆ ಬಂದು, ನೋಡಿ ಸಂತೋಷಪಟ್ಟಿದ್ದರು. ಶ್ರೀಶೈಲ ಶ್ರೀಗಳಲ್ಲಿನ ಸರಳತೆ ನೋಡಿ ನಮಗೂ ಸಂತೋಷವಾಯಿತು. ಇತ್ತೀಚಿನ ದಿನಗಳಲ್ಲಿ ಪಂಚ ಪೀಠಾಧೀಶ್ವರರಲ್ಲಿ ವೈಜ್ಞಾನಿಕ, ಸೈದ್ಧಾಂತಿಕ ಮನೋಭಾವನೆ ಹೆಚ್ಚುತ್ತಿದೆ. ಪಂಚಪೀಠಾಧೀಶರಲ್ಲೂ ಬದಲಾವಣೆ ಆಗಬೇಕೆಂಬ ಮನೋಭಾವನೆ ಇದೆ ಎಂದು ಸಾಣೇಹಳ್ಳಿ ಶ್ರೀಗಳು ಅಭಿಪ್ರಾಯಪಟ್ಟರು.- - -
(ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ)