ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಈ ವರ್ಷವೂ ನಗರದಲ್ಲಿ ವಿಶ್ವಜ್ಯೋತಿ ಬಸವೇಶ್ವರರ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ವಿಶೇಷವಾಗಿ ಆಚರಿಸುವ ಸಂಕಲ್ಪ ಮಾಡಲಾಗಿದೆ. ವಿಜಯಪುರ ನಗರ ಬಸವ ಜಯಂತಿ ಉತ್ಸವ ಸಮಿತಿಯಿಂದ ಏ.29 ಹಾಗೂ 30 ರಂದು ಜರಗುವ ಬಸವಣ್ಣನವರ ಜಯಂತಿಯು ಅದ್ದೂರಿಯಾಗಿ ನಡೆಯುತ್ತದೆ ಎಂದು ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮಿಜಿ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವ ಜಯಂತ್ಯುತ್ಸವ ಸಮಿತಿಯನ್ನು ರಚಿಸಲಾಗಿದ್ದು, ವೀರಶೖವ ಲಿಂಗಾಯತ ಎಲ್ಲ ಒಳ ಪಂಗಡಗಳು ಈ ಜಯಂತಿಯಲ್ಲಿ ಪಾಲ್ಗೊಳ್ಳುತ್ತವೆ. ನಗರದ ವಿವಿಧ ಸಂಘ ಸಂಸ್ಥೆಗಳು, ಮಹಿಳಾ ಮಂಡಳಿಗಳು, ಶಿಕ್ಷಣ ಸಂಸ್ಥೆಗಳು, ವ್ಯಾಪಾರಸ್ಥರು, ಉದ್ದಿಮೆದಾರರು, ಎಲ್ಲ ದೇವಸ್ಥಾನಗಳ ಸಮಿತಿಯವರು ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಬಸವಣ್ಣನವರು ಜಾತ್ಯಾತೀತ ಸಮ ಸಮಾಜವನ್ನು ಕಟ್ಟಲು ಸಮಾಜೋಧಾರ್ಮಿಕ ಕ್ರಾಂತಿಯನ್ನು ಮಾಡಿದರು. ದೀನದಲಿತರ, ಶೋಷಿತರ ಹಾಗೂ ಮಹಿಳೆಯರ ಉದ್ಧಾರಕ್ಕಾಗಿ ಶ್ರಮಿಸಿದರು. 12ನೇ ಶತಮಾನದ ಶರಣರು ಅನುಭವ ಮಂಟಪವನ್ನು ಸ್ಥಾಪಿಸಿ ಎಲ್ಲರ ಅನುಭವಗಳನ್ನು ಚಿಂತನೆಗೊಳಪಡಿಸಿ ವಚನಗಳನ್ನು ರಚಿಸಿದರು. ವೈಚಾರಿಕ ಹಾಗೂ ವೖಜ್ಞಾನಿಕ ನೆಲೆಯಲ್ಲಿ ನೂತನ ತತ್ವಗಳನ್ನು ನಿರ್ಮಿಸಿದರು. ತ್ರಿಕಾಲಕ್ಕೂ ಪ್ರಸ್ತುತವೆನಿಸುವ ವಚನ ಸಾಹಿತ್ಯ ಮಾನವ ಕಲ್ಯಾಣಕ್ಕೆ ಪೂರಕವಾಗಿವೆ. ಜಾಗತಿಕ ಸಾಹಿತ್ಯಕ್ಕೆ ಅಪಾರ ಕೊಡಿಗೆ ನೀಡಿದ ಬಸವೇಶ್ವರರನ್ನು ಇಂದು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.ಈ ಬಾರಿಯ ಬಸವ ಜಯಂತಿ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ನಾವೆಲ್ಲರೂ ಬಸವತತ್ವವನ್ನು ಆಚರಣೆ ಮಾಡಬೇಕಿದೆ. ಬಸವಣ್ಣನವರ ಮೂಲ ಆಶಯ, ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇವನಾರವ, ಇವನಾರವ, ಎಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ ಎಂಬಂತೆ ಎಲ್ಲರನ್ನು ಒಗ್ಗೂಡಿಸಬೇಕಿದೆ. ಅವರಂತೆಯೇ ನಡೆದಾಡುವ ದೇವರೆನಿಸಿಕೊಂಡ ಸಿದ್ಧೇಶ್ವರ ಸ್ವಾಮೀಜಿಗಳು ಸಹ ವಚನ ಸಾಹಿತ್ಯ, ಆಧ್ಯಾತ್ಮಿಕದ ಮೂಲಕ ಸಮಾಜದಲ್ಲಿ ಸಂದೇಶ ಸಾರಿದರು. ಬಸವಣ್ಣನವರದ್ದು ಬಸವಜ್ಯೋತಿಯಾದರೆ, ಜ್ಞಾನಯೋಗಾಶ್ರಮದ್ದು ಜ್ಞಾನಜ್ಯೋತಿಯಾಗಿದೆ. ಬಸವಣ್ಣನವರು ಹೇಳಿದಂತೆ ದಯವಿಲ್ಲದ ಧರ್ಮ ಯಾವುದಯ್ಯಾ?, ದಯವೇ ಧರ್ಮದ ಮೂಲವಯ್ಯಾ ಎಂಬಂತೆ ನಾವೆಲ್ಲರೂ ಬಾಳಬೇಕಿದೆ ಎಂದು ಕಿವಿಮಾತು ಹೇಳಿದರು.ಜಂಬುನಾಥ ಕಂಚಾಣಿ ಮಾತನಾಡಿ, ಜಗಜ್ಯೋತಿ ಬಸವೇಶ್ವರರ ಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಪ್ರೇಮಿಗಳು ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಲು ಕೋರುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಕಾಶಿನಾಥ ಅಣೆಪ್ಪನವರ, ಈರಣ್ಣ ತೊಂಡಿಕಟ್ಟಿ, ಅಪ್ಪು ಇಟ್ಟಂಗಿ, ಮ.ಗು.ಯಾದವಾಡ, ಸಂಗು ಸಜ್ಜನ, ಅಮರೇಶ ಸಾಲಕ್ಕಿ, ಓಂಕಾರ ಅಥರ್ಗಾ, ಕುಮಾರಗೌಡ ಹರನಾಳ, ಎಂ.ಎಂ.ಅಂಗಡಿ, ಶಿವಾನಂದ ಸಂಖ, ಬಿ.ಟಿ.ಈಶ್ವರಗೊಂಡ ಮುಂತಾದವರು ಉಪಸ್ಥಿತರಿದ್ದರು.----
ಎರಡು ದಿನ ಏನೇನು ಕಾರ್ಯಕ್ರಮ?ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ವಿ.ಸಿ.ನಾಗಠಾಣ ಮಾತನಾಡಿ, ಬಸವ ಜಯಂತಿ ಪ್ರಯುಕ್ತ ಏ.29ರಂದು ಶಾಲಾ ಮಕ್ಕಳು ಮತ್ತು ಮಹಿಳೆಯರಿಗಾಗಿ ಸಂಜೆ ಶಿವಾನುಭವ ಮಂಟಪದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಏ.30ರಂದು ಸಂಜೆ 4 ಗಂಟೆಗೆ ಯುವಕರು ಬೈಕ್ ರ್‍ಯಾಲಿ ಹಮ್ಮಿಕೊಂಡಿದ್ಧಾರೆ. 4.30ಕ್ಕೆ ನಗರದ ಸಿದ್ಧೇಶ್ವರ ದೇವಾಲಯದಿಂದ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಹೊರಡುವುದು. ಮೆರವಣಿಗೆ ಉತ್ಸವದಲ್ಲಿ ಬಸವಣ್ಣನವರ ವೇಷಧಾರಿ ಮಕ್ಕಳು, ವಚನ ಗ್ರಂಥಗಳನ್ನು ಹೊತ್ತ ಮಹಿಳೆಯರು, ವಿವಿಧ ಸಾಂಸ್ಕ್ರತಿಕ ಕಲಾ ತಂಡಗಳು ಮತ್ತು ವಾದ್ಯವೃಂದಗಳು ಪಾಲ್ಗೊಳ್ಳುತ್ತವೆ. ಮೆರವಣಿಗೆಯು ಜ್ಞಾನಯೋಗಾಶ್ರಮದಲ್ಲಿ ಕೊನೆಗೊಳ್ಳುತ್ತವೆ. ನಂತರ 6ಗಂಟೆಗೆ ಜ್ಞಾನಯೋಗಾಶ್ರಮದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಮಹಾಮಾನವತಾವಾದಿ ಬಸವಣ್ಣನವರನ್ನು ಕುರಿತು ಡಾ.ಗುರುಲಿಂಗಪ್ಪ ದಬಾಲೆ ಉಪನ್ಯಾಸ ನೀಡುವರು. ವೇದಿಕೆಯಲ್ಲಿ ರಾಜಕೀಯ ಧುರೀಣರು, ಜಿಲ್ಲೆಯ ಆಡಳಿತಾಧಿಕಾರಿಗಳು, ವೀರಶೖವ ಲಿಂಗಾಯತ ಮಹಾಸಭೆ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು.