ಬಸವ ಜಯಂತಿ: ಬೀದರ್‌ನಲ್ಲಿ ಸಾವಿರಾರು ಬೈಕ್‌, ಕಾರ್‌ ರ್‍ಯಾಲಿ

| Published : May 09 2024, 01:07 AM IST

ಸಾರಾಂಶ

ಬಸವ ದಳದ ಸೋಮಶೇಖರ ಪಾಟೀಲ ಗಾದಗಿಯವರಿಂದ ಚಾಲನೆ. ಬಸವ ಭಕ್ತರು, ಬಸವಾನುಯಾಯಿಗಳು ಹಾಗೂ ಸಾರ್ವಜನಿಕರು ಪ್ರಖರ ಬಿಸಿಲಲ್ಲೇ ಕಾರು ಹಾಗೂ ಬೈಕ್‌ಗಳಲ್ಲಿ ಉತ್ಸಾಹದಿಂದ ರ್‍ಯಾಲಿಯಲ್ಲಿ ಪಾಲ್ಗೊಂಡರು ರ್‍ಯಾಲಿಯುದ್ದಕ್ಕೂ ರಾರಾಜಿಸಿದ ಷಟಸ್ಥಲ ಧ್ವಜ, ಮುಗಿಲು ಮುಟ್ಟಿದ ಬಸವ ಜಯ ಘೋಷ.

ಕನ್ನಡಪ್ರಭ ವಾರ್ತೆ ಬೀದರ್‌

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ನಿಮಿತ್ತ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಕಾರು ಹಾಗೂ ಬೈಕ್‌ಗಳ ಮಹಾ ರ್‍ಯಾಲಿ ನಡೆಯಿತು.

ಬಸವ ಭಕ್ತರು, ಬಸವಾನುಯಾಯಿಗಳು ಹಾಗೂ ಸಾರ್ವಜನಿಕರು ಪ್ರಖರ ಬಿಸಿಲಲ್ಲೇ ಕಾರು ಹಾಗೂ ಬೈಕ್‌ಗಳಲ್ಲಿ ಉತ್ಸಾಹದಿಂದ ರ್‍ಯಾಲಿಯಲ್ಲಿ ಪಾಲ್ಗೊಂಡರು. ರ್‍ಯಾಲಿ ಉದ್ದಕ್ಕೂ ಷಟಸ್ಥಲ ಧ್ವಜಗಳು ರಾರಾಜಿಸಿದವು. ಬಸವ ಜಯ ಘೋಷಗಳು ಮುಗಿಲು ಮುಟ್ಟಿದವು.

ನಗರದ ಮನ್ನಳ್ಳಿ ರಸ್ತೆಯಲ್ಲಿರುವ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಿಂದ ಆರಂಭಗೊಂಡ ರ್‍ಯಾಲಿಯು ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ರಾಮ ಚೌಕ್‌, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಡಾ.ಅಂಬೇಡ್ಕರ್‌ ವೃತ್ತ, ಹರಳಯ್ಯ ವೃತ್ತ, ರೋಟರಿ ಕನ್ನಡಾಂಬೆ ವೃತ್ತ, ನೆಹರೂ ಕ್ರೀಡಾಂಗಣ, ಮಡಿವಾಳ ಮಾಚಿದೇವ ವೃತ್ತ, ಕೇಂದ್ರ ಬಸ್‌ನಿಲ್ದಾಣ, ಪಾಪನಾಶ ಗೇಟ್‌, ಪ್ರತಾಪನಗರ ಮೂಲಕ ಹಾಯ್ದು ನೌಬಾದ್‌ಗೆ ತಲುಪಿತು. ಅಲ್ಲಿಯ ಬಸವೇಶ್ವರ ವೃತ್ತದಿಂದ ಮರಳಿ ಪಾಪನಾಶ ದೇಗುಲಕ್ಕೆ ಬಂದು ಸಮಾರೋಪಗೊಂಡಿತು.

ರ್‍ಯಾಲಿಯಲ್ಲಿ ಪಾಲ್ಗೊಂಡವರು ತಲೆ ಮೇಲೆ ಟೊಪ್ಪಿಗೆ, ಕೊರಳಲ್ಲಿ ಸ್ಕಾರ್ಪ್‌ ಧರಿಸಿದ್ದರು. ಕಾರು, ಬೈಕ್‌ಗಳಿಗೆ ಬಸವಣ್ಣನವರ ಭಾವಚಿತ್ರ ಅಂಟಿಸಲಾಗಿತ್ತು. ಷಟಸ್ಥಲ ಧ್ವಜಗಳನ್ನು ಕಟ್ಟಲಾಗಿತ್ತು. ತೆರೆದ ವಾಹನದಲ್ಲಿ ಬಸವಣ್ಣನವರ ಭಾವಚಿತ್ರ ಇಡಲಾಗಿತ್ತು.

ಬೈಕ್‌ಗಳು ಮುಂಚೂಣಿಯಲ್ಲಿದ್ದರೆ ಕಾರುಗಳು ಅವುಗಳ ಹಿಂದೆ ಇದ್ದವು. ಪಾಪನಾಶ ದೇಗುಲದ ಪರಿಸರದಲ್ಲಿ ರ್‍ಯಾಲಿಯಲ್ಲಿ ಪಾಲ್ಗೊಂಡವರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಇದಕ್ಕೂ ಮುನ್ನ ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅವರು ಷಟಸ್ಥಲ ಧ್ವಜ ತೋರಿಸಿ ಕಾರು ಹಾಗೂ ಬೈಕ್‌ ರ್‍ಯಾಲಿಗೆ ಚಾಲನೆ ನೀಡಿದರು.

ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಡಾ. ಗಂಗಾಂಬಿಕೆ ಅಕ್ಕ, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಗಾದಗಿ, ಮುಖಂಡರಾದ ಬಿ.ಜಿ. ಶೆಟಕಾರ್‌, ರಾಜೇಂದ್ರಕುಮಾರ ಗಂದಗೆ, ಶರಣಪ್ಪ ಮಿಠಾರೆ, ದೀಪಕ ವಾಲಿ, ಬಸವರಾಜ ಪಾಟೀಲ್‌ ಹಾರೂರಗೇರಿ, ಶಿವಶಂಕರ ಟೋಕರೆ, ಶಶಿಧರ ಹೊಸಳ್ಳಿ, ವೀರಶೆಟ್ಟಿ ಪಾಟೀಲ್‌, ಅರುಣ ಹೋತಪೇಟ್‌, ಆದೀಶ ರಜನೀಶ ವಾಲಿ, ವಿವೇಕ ವಾಲಿ, ವಿಜಯಕುಮಾರ ಪಾಟೀಲ್‌, ಬಾಬುರಾವ್‌ ದಾನಿ, ಡಾ. ದೇವಕಿ ಅಶೋಕಕುಮಾರ ನಾಗೂರೆ, ಜಯದೇವಿ ಯದಲಾಪುರೆ, ಅಶೋಕ ದಿಡಗೆ, ಸಿದ್ಧಾರೂಢ ಭಾಲ್ಕೆ, ಹಣ್ಮು ಪಾಜಿ, ವಿಜಯಕುಮಾರ ಸೋನಾರೆ, ಪಾರ್ವತಿ ಸೋನಾರೆ, ಮಹಾನಂದಾ ಪಾಟೀಲ್‌, ಲಿಂಗಾರತಿ ಅಲ್ಲಂಪ್ರಭು, ಜಯದೇವಿ ಯದಲಾಪೂರೆ, ಸ್ವರೂಪಾರಾಣಿ ನಾಗೂರೆ ಹಾಗೂ ರೂಪಾ ಪಾಟೀಲ್‌ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.ಉಚಿತ ಆರೋಗ್ಯ ತಪಾಸಣೆ ಶಿಬಿರ: ಬಸವ ಜಯಂತಿ ನಿಮಿತ್ತ ಲಿಂ. ಶಕುಂತಲಾ ವಾಲಿ ಅವರ ಸ್ಮರಣಾರ್ಥವಾಗಿ ನಗರದ ವಾಲಿಶ್ರೀ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಶಿಬಿರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಉಚಿತ ತಪಾಸಣೆ, ಪರೀಕ್ಷೆ ಹಾಗೂ ಔಷಧಿ ವಿತರಿಸಲಾಯಿತು.

ಗಮನ ಸೆಳೆದ ವಚನ ಪಾರಾಯಣ: ಬಸವ ಜಯಂತಿ ಅಂಗವಾಗಿ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಬುಧವಾರ ಬೆಳಗ್ಗೆ ನಡೆದ ವಚನ ಪಾರಾಯಣ ಗಮನ ಸೆಳೆಯಿತು. ಡಾ. ಅಕ್ಕ ಗಂಗಾಂಬಿಕೆ ವಚನ ಪಾರಾಯಣ ನಡೆಸಿಕೊಟ್ಟರು. ಬಸವ ಭಕ್ತರು ಹಾಗೂ ಬಸವಾನುಯಾಯಿಗಳು ಪಾಲ್ಗೊಂಡಿದ್ದರು.

ಕರ್ನಾಟಕ ಸಾಂಸ್ಕೃಿತಕ ನಾಯಕ ಬಸವಣ್ಣನವರ ಜಯಂತಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಈ ಬಾರಿ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಮೊದಲ ದಿನದ ಕಾರ್ಯಕ್ರಮಗಳು ಯಶಸ್ವಿಯಾಗಿದ್ದು, ಗುರುವಾರ ಹಾಗೂ ಶುಕ್ರವಾರ ವಿವಿಧ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನೆರವೇರಲಿವೆ.

- ಸುರೇಶ ಚನಶೆಟ್ಟಿ, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರು.