ಜರ್ಮನಿಯ ಲೆವರ್ಕುಸೆನ್ ನಗರದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ತರಳಬಾಳು ಮಠದ ಶಿವಮೂರ್ತಿ ಸ್ವಾಮೀಜಿ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಪ್ರಸ್ತುತ ಸಂದರ್ಭದಲ್ಲಿ ಮಾನವ ಕುಲವು ಎದುರಿಸುತ್ತಿರುವ ಹಲವು ಸವಾಲುಗಳಿಗೆ ಬಸವ ತತ್ವವನ್ನು ಪಾಲಿಸುವುದೇ ಶಾಶ್ವತ ಪರಿಹಾರ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಯುರೋಪ್ ಪ್ರವಾಸದಲ್ಲಿರುವ ಶ್ರೀಗಳು ಜರ್ಮನಿಯ ಲೆವರ್ಕುಸೆನ್ ನಗರದಲ್ಲಿ ಅನಿವಾಸಿ ಭಾರತೀಯರು ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ಚನ ನೀಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನವು ಅಭೂತಪೂರ್ವವಾಗಿ ಬೆಳೆಯುತ್ತಿರುವ ಈ ಯುಗದಲ್ಲಿ, ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆಗೆ ಬಸವಣ್ಣನವರ ವಚನಗಳು ಅತ್ಯಂತ ಪ್ರಸ್ತುತವಾಗಿವೆ. ವಿಶ್ವಶಾಂತಿ, ಸಾಮಾಜಿಕ ಸಾಮರಸ್ಯ, ಸಹಬಾಳ್ವೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಬಸವತತ್ವವೇ ದಾರಿದೀಪ ಎಂದು ಅಭಿಪ್ರಾಯಪಟ್ಟರು.ಬಸವೇಶ್ವರರು ಎಲ್ಲರೂ ಒಂದೇ, ಎಲ್ಲರಿಗೂ ಸಮಾನ ಗೌರವ ಎಂಬ ಸಂದೇಶವನ್ನು ಸಾರಿದ್ದರು. ಅದರಂತೆ ನಡೆದರೆ ಸಮಾನತೆ ಎನ್ನುವುದು ಹೆಚ್ಚು ಹತ್ತಿರಕ್ಕೆ ಬಂದಂತಾಗುತ್ತದೆ ಎಂದರು.
‘ವಸುದೈವ ಕುಟುಂಬಕಂ’ ಎಂಬ ಭಾರತೀಯ ಆದರ್ಶ ಮತ್ತು ‘ಮಾನವನೇ ಮಹಾದೇವ’ ಎಂಬ ಬಸವಣ್ಣನವರ ವಿಶ್ವಮಾನವೀಯ ಸಂದೇಶವು ಯುರೋಪ್‌ನಲ್ಲಿ ನಿಮ್ಮ ಮೂಲಕ ಪಸರಿಸಲಿ ಎಂದರು.ಬಸವಣ್ಣನವರ ಹಲವು ವಚನಗಳಿಗೆ ವ್ಯಾಖ್ಯಾನ ನೀಡಿದ ಶ್ರೀಗಳು ಅವುಗಳನ್ನು ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗೆ ಭಾಷಾಂತರ ಮಾಡಿ ವಿವರಿಸಿದರು. ಧಾರ್ಮಿಕ ಸಭೆಯಲ್ಲಿ ಕನ್ನಡಿಗರೂ, ಭಾರತದ ವಿವಿಧ ಭಾಗದ ಜನರು ಭಾಗವಹಿಸಿದ್ದರು. ಆಶೀರ್ಚನದ ನಂತರ ಶ್ರೀಗಳು ಭಾಗವಹಿಸಿದ್ದವರಿಗೆ ಪ್ರಸಾದ ವಿನಿಯೋಗ ಮಾಡಿದರು.