ಸಾರಾಂಶ
ಸಮಾಜದಲ್ಲಿ ಎಲ್ಲಾ ಮನುಜರು ಸಮಾನರಾಗಿದ್ದು, ವಿಶ್ವವೇ ಒಂದು ಕುಟುಂಬ ಎಂದು ಸಾರಿದ ಬಸವಣ್ಣನವರು ವಿಶ್ವ ಪ್ರೇಮದ ಅನುಸಂಧಾನಕ್ಕೆ ಕಾರಣರಾದವರು.
ಚಿಕ್ಕಮಗಳೂರು: ಸಮಾಜದಲ್ಲಿ ಎಲ್ಲಾ ಮನುಜರು ಸಮಾನರಾಗಿದ್ದು, ವಿಶ್ವವೇ ಒಂದು ಕುಟುಂಬ ಎಂದು ಸಾರಿದ ಬಸವಣ್ಣನವರು ವಿಶ್ವ ಪ್ರೇಮದ ಅನುಸಂಧಾನಕ್ಕೆ ಕಾರಣರಾದವರು. ಅವರ ಮಾನವ ತತ್ತ್ವಗಳನ್ನು ಅಧ್ಯಯನ ಮಾಡಿದರೆ ವಿಶ್ವ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಜಿಲ್ಲಾಡಳಿತದಿಂದ ಬುಧವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿ ಅನೇಕ ಮಹಾಪುರುಷರು, ಸಾಮಾಜಿಕ ಕ್ರಾಂತಿ ಮಾಡಿ ಹೋಗಿ ದ್ದಾರೆ. ಅಂಥವರನ್ನು ನಾವು ಒಂದು ಸಮುದಾಯ ಅಥವಾ ಒಂದು ಜನಾಂಗಕ್ಕೆ ಸೀಮಿತಗೊಳಿಸುತ್ತಿರುವುದು ದುರಂತದ ವಿಚಾರ. ಬಸವಣ್ಣನವರನ್ನೂ ನಾವೆಲ್ಲೋ ಹಿಡಿದಿಟ್ಟಂತೆ ಕಾಣಿಸುತ್ತಿದೆ. ಇಂಥ ಮಹಾಪುರುಷರು ಸಾರ್ವಕಾಲಿಕ ಮತ್ತು ಇವರ ಸಿದ್ಧಾಂತವನ್ನು ಎಲ್ಲ ವರ್ಗದವರೂ ಅನುಸರಿಸಬೇಕಾಗಿದೆ ಎಂದರು.
ಅರ್ಥರಹಿತ ಆಚರಣೆಗಳನ್ನು ವಿರೋಧಿಸಿ, ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂಬ ತತ್ತ್ವ ಸಾರಿ ತಮ್ಮ ವಿಚಾರಧಾರೆ ಯಿಂದ ಧರ್ಮಕ್ಕೆ ವೈಚಾರಿಕ ಸ್ಪರ್ಶ ನೀಡಿದ ಮಹಾನ್ ಸಾಮಾಜಿಕ ವಿಜ್ಞಾನಿ ಬಸವಣ್ಣ. ಅವರ ಸಮಾನತೆ, ಸಹಬಾಳ್ವೆ, ಭಾತೃತ್ವ, ಏಕತೆ ಚಿಂತನೆಗಳನ್ನು ಅಳವಡಿಸಿಕೊಂಡರೆ ಪ್ರತಿಯೊಬ್ಬರು ಉತ್ತಮ ಜೀವನ ನಡೆಸಬಹುದು ಎಂದು ಹೇಳಿದರು.ವಚನ ಚಳುವಳಿಯಲ್ಲಿ ಭಾಗವಹಿಸಿದ ಪ್ರತಿ ಶರಣರು ಆತ್ಮಸಾಕ್ಷಿ ಆಧಾರವಾಗಿಟ್ಟುಕೊಂಡು, ಜೀವನದ ಮೌಲ್ಯ ಪಾಲಿಸಿಕೊಂಡು ಬಂದವರು. ಅದೇ ರೀತಿ ಜೀವನದ ನೀತಿ ಸಂಹಿತೆ ರೂಪಿಸಿಕೊಟ್ಟ ಬಸವಣ್ಣ ಶುದ್ಧ ನಡೆಯಿಲ್ಲದೇ ಯಾವುದೇ ವ್ಯಕ್ತಿಗೆ ವಚನ ಭೋಧಿಸುವ ಹಕ್ಕಿಲ್ಲ ಎಂಬ ತತ್ವವನ್ನು ಪ್ರತಿಪಾದಿಸಿದರು ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೈಸರ್ಗಿಕ ಕೃಷಿಕ ಚಂದ್ರಶೇಖರ್ ನಾರಾಯಣಪುರ ಉಪನಾಸ್ಯ ನೀಡಿ, ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದ ಸಂದರ್ಭದಲ್ಲಿ ಸಂಕಷ್ಟಗಳನ್ನು ಎದುರಿಸಿ ಬೃಹತ್ ಸಮೂಹಕ್ಕೆ ಸಾಮಾಜಿಕ ನ್ಯಾಯಕ್ಕಾಗಿ ಬದುಕಿ ತಮ್ಮ ಜೀವವನ್ನು ತೆತ್ತವರು ಸಾಂಸ್ಕೃತಿಕ ಚಳುವಳಿ ಸರ್ವ ಸಮರ್ಪಣ ಮಹಾನಾಯಕ ಬಸವಣ್ಣ ಎಂದು ಹೇಳಿದರು
.ವಚನಗಳು ಎಂದೂ ಆಚರಣೆಯ ವೈಶಿಷ್ಟ್ಯಗಳನ್ನು ಬಿಂಬಿಸಲಿಲ್ಲ ಬದಲಾಗಿ ಸಾಮಾಜಿಕ ಸಂಕಷ್ಟಗಳನ್ನು ಪ್ರತಿಪಾದಿಸಿದವು. ಪ್ರತಿ ಹಂತದಲ್ಲಿಯೂ ನಿರ್ಣಾಯಕ ಸಂಗತಿಯಾದ ಜಾತಿ ವಿನಾಶಕ್ಕೆ ತುಡಿದ ಬಸವಣ್ಣನ ಆಶಯಗಳನ್ನು ಸಮಾಜದಲ್ಲಿ ವ್ಯಾಪಿಸಲು ಮನುವಾದಿಗಳು ಬಿಡುತ್ತಿಲ್ಲ. ಜಾತಿ ವ್ಯವಸ್ಥೆ ಇಂದಿಗೂ ಅಳಿಯದೇ ಉಳಿದಿರುವುದು ದುರಂತ ಎಂದರು.ವಚನ ಸಾಹಿತ್ಯ ಕನ್ನಡದ ಶ್ರೇಷ್ಠ ಸಾಹಿತ್ಯವಾಗಿ ಹೊರಹೊಮ್ಮಿದೆ. ವಚನವೆಂದರೆ ಸಾಂಸ್ಕೃತಿಕ ಸಂವಿಧಾನ. ಜೀವನ ನಡೆಸುವ ವಿಧಾನವಾಗಿದೆ. ಸಾಮಾಜಿಕ ಬಿಕ್ಕಟ್ಟನ್ನು ನಿವಾರಿಸಲು ಇರುವ ಪರಿಹಾರ ಬಸವಣ್ಣನ ತತ್ತ್ವಗಳು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಪ್ರಭುತ್ವ ವಿರೋಧಿಸಿ, ತುಳಿತಕ್ಕೊಳ ಗಾದವರ ನೇತೃತ್ವ ವಹಿಸಿಕೊಂಡು ಸಮಾಜದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಎಲ್ಲವನ್ನು ದಿಕ್ಕರಿಸಿ ತಮ್ಮ ಜೀವನವನ್ನು ಮುಡಿಪಾಗಿಟ್ಟು, 12ನೇ ಶತಮಾನದಲ್ಲಿ ನುಡಿದಂತೆ ನಡೆಯುತ್ತಾ ವಿಶ್ವಗುರುವಾಗಿ ರೂಪುಗೊಂಡವರು ಬಸವಣ್ಣ ಎಂದರು.
ಬಸವಣ್ಣನ ಕ್ರಾಂತಿ ಜಾಗತಿಕ ಮಟ್ಟದ ದೊಡ್ಡ ಸಾಧನೆ. ಆದರೆ ಅಂದಿನ ಕಾಲದ ಕೆಲವು ಸಮಸ್ಯೆಗಳಿಂದಾಗಿ ಆ ಕ್ರಾಂತಿ ಜಗತ್ತಿನ ಗಮನ ಸೆಳೆದಿಲ್ಲ. ಇಂದು ಕೆಲವು ಮಠಮಾನ್ಯಗಳು, ಹಿರಿಯ ವಿದ್ವಾಂಸರು ವಚನ ಸಾಹಿತ್ಯ ಹಾಗೂ ಅಂದಿನ ಕ್ರಾಂತಿಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಕೇವಲ ಕಾಯ್ದೆ, ಕಾನೂನಿನಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ. ಮನಸ್ಸುಗಳು ಬದಲಾಗಬೇಕು. ಹೀಗಾಗಿ ಸದಾ ಕಾಲಕ್ಕೂ ಪ್ರಸ್ತುತವಾದ ಬಸವಣ್ಣನವರ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಮಾತನಾಡಿ, ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿ ಮಾಡಿ, ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣನವರ ತತ್ತ್ವಗಳು ಕೇವಲ ಸರ್ಕಾರಿ ಕಾರ್ಯಕ್ರಮದ ವಸ್ತುವಾಗದೇ, ಪ್ರತಿಯೊಬ್ಬರು ಬಸವಣ್ಣನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ , ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾದಿಕಾರಿ ಎಚ್.ಎಸ್. ಕೀರ್ತನಾ, ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದೇವರಾಜ್, ತಹಸೀಲ್ದಾರ್ ಕೆ.ಎಸ್. ರೇಷ್ಮಾ, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಎಸ್ಸಿ.ಎಸ್ಟಿ. ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಲಕ್ಷ್ಮಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ. ರಮೇಶ್ ಉಪಸ್ಥಿತರಿದ್ದರು.