ಅಂಧಕಾರ ಅಳಿಸಿ ಹೊಸ ಬೆಳಕು ಕೊಟ್ಟವರು ಬಸವಾದಿ ಶರಣರು-ಸ್ವಾಮೀಜಿ

| Published : Aug 05 2025, 01:30 AM IST

ಸಾರಾಂಶ

ಬಸವಣ್ಣನವರು, ಕಲ್ಲನಾಗರ ಕಂಡರೆ ಹಾಲನೆರೆಯೆಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂಬ ವಚನದ ಮೂಲಕ ಸಮಾಜದಲ್ಲಿನ ಅಂಧಕಾರವನ್ನು ಅಳಿಸಿ ಹೊಸ ಬೆಳಕು ಕೊಟ್ಟಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಶ್ರೀಗಳು ಹೇಳಿದರು.

ಗದಗ: ಬಸವಣ್ಣನವರು, ಕಲ್ಲನಾಗರ ಕಂಡರೆ ಹಾಲನೆರೆಯೆಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂಬ ವಚನದ ಮೂಲಕ ಸಮಾಜದಲ್ಲಿನ ಅಂಧಕಾರವನ್ನು ಅಳಿಸಿ ಹೊಸ ಬೆಳಕು ಕೊಟ್ಟಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಶ್ರೀಗಳು ಹೇಳಿದರು. ಅವರು ಲಿಂಗಾಯತ ಪ್ರಗತಿಶೀಲ ಸಂಘದ 2756ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವೈಜ್ಞಾನಿಕ ಯುಗದಲ್ಲಿಯೂ ಮೌಢ್ಯಗಳನ್ನು ಆಚರಣೆ ಮಾಡುವ ಪದ್ಧತಿಯನ್ನು ಕಾಣುತ್ತೇವೆ. ಸಮಾಜದಲ್ಲಿನ ಅಜ್ಞಾನ ಮೂಢನಂಬಿಕೆ ಹೊಡೆದೊಡಿಸಬೇಕೆಂದು ಬಸವಾದಿ ಶಿವಶರಣರು ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಆ ಪಾಲು ಈ ಪಾಲು ಎನ್ನುತ್ತಾ ಕಲ್ಲನಾಗರಕ್ಕೆ ಹಾಲೆರೆದು ಮಣ್ಣುಪಾಲು ಮಾಡುತ್ತಾರೆ. ಬಡವರಿಗೆ, ರೋಗಿಗಳಿಗೆ, ನಿರ್ಗತಿಕರಿಗೆ ಕೊಟ್ಟರೆ ಸಾರ್ಥಕವಾಗುತ್ತದೆ ಎಂದು ಶ್ರೀಗಳು ಮಾತನಾಡಿದರು. ಉಪನ್ಯಾಸಕರಾಗಿ ಆಗಮಿಸಿದ ಲಕ್ಷ್ಮೇಶ್ವರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಡಾ. ಬಿ.ಎಂ. ಮರಳಿಹಳ್ಳಿಯವರು ಮಾತನಾಡಿ, ಮೌಢ್ಯಗಳನ್ನು ವಿರೋಧಿಸುವ ವಚನಗಳು ಇಂದಿಗೂ ಪ್ರಸ್ತುತ. ಹಾವಾಡಿಗ, ಬೆಕ್ಕು, ಮೂಕೊರತಿ ಎದುರಿಗೆ ಬಂದರೆ ಅಪಶಕುನ ಎನ್ನುವ ಸಮಾಜಕ್ಕೆ ಬಸವಣ್ಣನವರು ವಚನಗಳ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ. ಅನುಭವಕ್ಕೆ ವಿಘ್ನಗಳಿಲ್ಲ. ಆತ್ಮ ಕೇಂದ್ರಿತ ಪ್ರಜ್ಞೆಯನ್ನು ನಿರಾಕರಿಸಿ, ದೇಹ ಕೇಂದ್ರಿತವಾದ ಪ್ರಜ್ಞೆಯನ್ನು ಸಾರಿದರು. ಅರಿವೇ ಗುರು ಶರಣರ ದಿವ್ಯ ಸಂದೇಶವಾಗಿತ್ತು ಎಂದು ಮಾತನಾಡಿದರು.ವಿಜಯಮಹಾಂತದೇವರು ಹಿರೇಮಠ ಅವರು ಶ್ರಾವಣ ಮಾಸದ ನಿಮಿತ್ಯ ವಚನ ಚಿಂತನದ ಪ್ರವಚನ ಮಾಡಿದರು. ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ. ಧನೇಶ್ ದೇಸಾಯಿ, ಉಪಾಧ್ಯಕ್ಷ ಶೈಲಾ ಕೋಟೆಕಲ್ಲ, ಶಿವಣ್ಣ ಕತ್ತಿ, ಸಿದ್ದರಾಮಪ್ಪ ಗೊಜನೂರ ಉಪಸ್ಥಿತರಿದ್ದರು. ವಚನ ಸಂಗೀತ ಗುರುನಾಥ್ ಸುತಾರ ಹಾಗೂ ರೇವಣಸಿದ್ಧೇಶ್ವರ ಮಂಟೂರಮಠ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಪೂರ್ವಿ ಮಂಟೂರಮಠ ಹಾಗೂ ವಚನ ಚಿಂತನವನ್ನು ಭೂಮಿಕಾ ಹೊಸಳ್ಳಿಮಠ ಮಂಡಿಸಿದರು. ದಾಸೋಹ ಸೇವೆಯನ್ನು ರಾಜೇಶ್ ಈಶ್ವರಪ್ಪ ಮಾನ್ವಿ ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪಭು ಗಂಜಿಹಾಳ ನಿರೂಪಿಸಿದರು.