ಸಾರಾಂಶ
ಸುರೇಶ ಚನಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಬೀದರ್: ಬೀದರ್ ಜಿಲ್ಲಾ 21ನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಾಡೋಜ ಪುರಸ್ಕೃತ ಡಾ. ಬಸವಲಿಂಗ ಪಟ್ಟದ್ದೇವರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಮ್ಮೇಳನ ಅಧ್ಯಕ್ಷರ ಆಯ್ಕೆ ಸಂಬಂಧದ ಚರ್ಚೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.ಜಿಲ್ಲಾ ಕಸಾಪ ಅಧ್ಯಕ್ಷರಾದ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೆ ಅತ್ಯಂತ ಯಶಸ್ವಿಯಾಗಿ ಜಿಲ್ಲಾಮಟ್ಟದ ದಾಸ ಸಾಹಿತ್ಯ ಸಮ್ಮೇಳನ ಜರುಗಿದ್ದು ಬರುವ ದಿನಗಳಲ್ಲಿ ಜಿಲ್ಲಾಮಟ್ಟದ ದಲಿತ ಸಾಹಿತ್ಯ ಸಮ್ಮೇಳನ, ಜಾನಪದ ಸಾಹಿತ್ಯ ಸಮ್ಮೇಳನ, ಚಿತ್ರ ಸಂತೆ, ಪುಸ್ತಕ ಸಂತೆ ಸೇರಿದಂತೆ ಹಲವು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನಗಳನ್ನೂ ಆಯೋಜಿಸುವ ಕುರಿತು ವಿಷಯ ಮಂಡಿಸಿ ನಿರ್ಣಯ ಕೈಗೊಂಡರು.
ಜನರು ತಾವೇ ಸಮ್ಮೇಳನಗಳನ್ನು ಮಾಡುವಂತೆ ಒತ್ತಾಯಿಸುತ್ತಿರುವುದು ಜನರಿಗೆ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯದ ಬಗ್ಗೆ ಒಲವು ಹೆಚ್ಚುತ್ತಿರುವುದರ ಸಂಕೇತವಾಗಿದೆ. ಪ್ರಸ್ತುತ 21ನೇ ಸಮ್ಮೇಳನದ ಪ್ರಯುಕ್ತ ಬೀದರ್ ಜನರ ಬಹುದಿನಗಳ ಬೇಡಿಕೆಯಾದ ‘ಕನ್ನಡ ಭವನ’ದ ಉದ್ಘಾಟನೆ ಹಾಗೂ ಅದೇ ಸ್ಥಳದಲ್ಲಿ ಸಮ್ಮೇಳನ ನಡೆಸುವ ಬಗ್ಗೆಯೂ ನಿರ್ಧರಿಸಲಾಯಿತು.ಸಭೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಟಿ.ಎಂ.ಮಚ್ಚೆ ಅವರು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಹೆಸರನ್ನು ಸೂಚಿಸಿದರು. ಗೌ. ಕೋಶಾಧ್ಯಕ್ಷ ಶಿವಶಂಕರ ಟೋಕರೆ ಅನುಮೋದಿಸಿದರು. ಕಾರ್ಯಕಾರಿ ಮಂಡಳಿಯ ಇತರ ಸದಸ್ಯರು ಚಪ್ಪಾಳೆ ತಟ್ಟಿ ಸರ್ವಾನುಮತದಿಂದ ಅನುಮೋದಿಸಿದರು.