ಕನ್ನಡಪ್ರಭ ವಾರ್ತೆ ಬೀದರ್‌

ಬೀದರ್‌ ಜಿಲ್ಲೆಯು ಶರಣರು, ಸಂತರು ಕಾರ್ಯಕ್ಷೇತ್ರವಾಗಿದ್ದು, ಭಾಲ್ಕಿ ಹಿರೇಮಠದ ನಾಡೋಜ ಬಸವಲಿಂಗ ಪಟ್ಟದ್ದೇವರು ಅನ್ನ ದಾಸೋಹ, ಅಕ್ಷರ ದಾಸೋಹ ಹಾಗೂ ಆರೋಗ್ಯ ದಾಸೋಹದಂತಹ ಸಾರ್ಥಕ ಕೈಂಕರ್ಯದೊಟ್ಟಿಗೆ ಪರಿತ್ಯಕ್ತ ಮಕ್ಕಳಲ್ಲಿಯೇ ಅವರ ಭವಿಷ್ಯ ಹಾಗೂ ಗುರಿ ಕಂಡಿದ್ದಾರೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಹೇಳಿದರು.

ಜಿಲ್ಲೆಯ ಭಾಲ್ಕಿಯಲ್ಲಿ ಬುಧವಾರ ನಡೆದ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರ ಅಮೃತಮಹೋತ್ಸವ ಹಾಗೂ ಲಿಂ.ಚನ್ನಬಸವಪಟ್ಟದ್ದೇವರ 27ನೇ ಸಂಸ್ಮರಣೋತ್ಸವದಲ್ಲಿ ಮಾತನಾಡಿದರು. ಸಮಾನತೆ, ಸಾಮಾಜಿಕ, ಧಾರ್ಮಿಕ ಕ್ರಾಂತಿ, ಸಮಾಜ ಸುಧಾರಣೆಗೆ ಶ್ರಮಿಸಿದ್ದ ವಿಶ್ವಗುರು ಬಸವಣ್ಣ ಅವರ ನಾಡಿನಲ್ಲಿ ಬಸವಾದಿ ಶರಣರ ಆಶಯಗಳಂತೆ ಭಾಲ್ಕಿ ಹಿರೇಮಠ ಸೇವೆ ಸಲ್ಲಿಸುತ್ತಿದೆ. ಹಿರಿಯ ಸ್ವಾಮೀಜಿಗಳು ಬಸವಾದಿ ಶರಣರ ತತ್ವಾದರ್ಶಗಳಂತೆ ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ಮಾಡಿದ್ದು, ಇಂದು ಅವರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಕನ್ನಡದಲ್ಲಿ ಮಾತು ಆರಂಭ:

ಅತ್ಯಂತ ಶಕ್ತಿಶಾಲಿ ಮತ್ತು ಕರುಣಾ ಮಯಿಯಾದ ನಮ್ಮ ಭಾರತ ಮಾತೆಯ ಪಾದಗಳಿಗೆ ನಮಸ್ಕರಿಸುತ್ತೇನೆ ಎಂದು ಕನ್ನಡದಲ್ಲಿ ಭಾಷಣ ಆರಂಭಿಸುವ ಮೂಲಕ ಎಲ್ಲರ ಗಮನ ಸೆಳೆದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಅವರು ‘ಧನ್ಯವಾದಗಳು, ಎಲ್ಲರಿಗೂ ನಮಸ್ಕಾರ, ಜೈ ಕರ್ನಾಟಕ, ಜೈ ಭಾರತ’ ಎಂದು ಕನ್ನಡದಲ್ಲಿ ಮಾತು ಮುಗಿಸಿದ್ದು ವಿಶೇಷವಾಗಿತ್ತು.


ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್‌ ಗಹ್ಲೋಟ್‌, ರಾಜ್ಯಸಭೆ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಸಚಿವರಾದ ಈಶ್ವರ ಖಂಡ್ರೆ, ರಹೀಮ್‌ಖಾನ್‌, ಸಂಸದ ಸಾಗರ ಖಂಡ್ರೆ ಇದ್ದರು. ಭಾಲ್ಕಿ ಹಿರೇಮಠದ ಡಾ। ಬಸವಲಿಂಗ ಪಟ್ಟದ್ದೇವರು, ಗದಗನ ತೋಂಟದಾರ್ಯ ಶ್ರೀಗಳು ಆಶೀರ್ವಚನ ನೀಡಿದರು.ಟೆರರಿಸ್ಟ್‌, ಟೆರರ್‌ ಟು ಟೆರರಿಸ್ಟ್‌ ವ್ಯತ್ಯಾಸ ತಿಳಿಯದ ಖರ್ಗೆ:

ಇತ್ತೀಚೆಗೆ ತಮಿಳುನಾಡು ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಹೇಳಿ ಪೇಚಿಗೆ ಸಿಲುಕಿದ್ದ ಮಲ್ಲಿಕಾರ್ಜುನ್‌ ಖರ್ಗೆಗೆ ಅವರ ಸಮ್ಮುಖದಲ್ಲಿಯೇ ಉಪರಾಷ್ಟ್ರಪತಿ ಮಾತಿನಲ್ಲೇ ತೀಕ್ಷ್ಣವಾಗಿ ತಿವಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಕಪ್ಪು-ಬಿಳಿಯ ಮಧ್ಯ ಬೇಧಭಾವ ಮಾಡೋಲ್ಲ. ಆದರೆ, ಕೆಲವೊಮ್ಮೆ ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಭಯ ಹುಟ್ಟಿಸುವಂಥವರ (ಟೆರರಿಸ್ಟ್‌ ಹಾಗೂ ಟೆರರ್‌ ಟು ಟೆರರಿಸ್ಟ್‌) ಮಧ್ಯದ ವ್ಯತ್ಯಾಸ ಅರಿಯುತ್ತಿಲ್ಲ ಎಂದು ಹೇಳುವ ಮೂಲಕ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್‌ ಅವರು ಪ್ರಧಾನಿ ಮೋದಿ ಭಯೋತ್ಪಾದಕರಿಗೆ ಭಯ ಹುಟ್ಟಿಸುವಂಥವರು ಎಂದೂ ಪರೋಕ್ಷವಾಗಿ ಹೇಳಿದರು.ಬಸವ ತತ್ವವನ್ನು ಪ್ರಚಾರ ಮಾಡಿದದ್ದರೆ ನಾಶ:

ಬಸವಣ್ಣನವರ ತತ್ವಾದರ್ಶಗಳನ್ನು ವಿಶ್ವದಾದ್ಯಂತ ಪಸರಿಸಿ ಆಚಾರದಲ್ಲೂ ತರದಿದ್ದಲ್ಲಿ ಬೌದ್ಧ ಧರ್ಮದಂತೆ ದೇಶದಿಂದ ಕಾಣೆ ಆಗೋದರಲ್ಲಿ ಸಂದೇಹವಿಲ್ಲ ಎಂದು ರಾಜ್ಯಸಭೆ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನ, ಕಜಕಿಸ್ತಾನ್‌ ಸೇರಿದಂತೆ ದೇಶದಲ್ಲಿ ಬೌದ್ಧ ಧರ್ಮ ಬಹಳ ಪ್ರಚಾರದಲ್ಲಿತ್ತು. ಆದರೆ ನಮ್ಮಲ್ಲಿ ಅತ್ಯಂತ ತೊಂದರೆ ಕೊಟ್ಟು ಓಡಿಸಿ ಹಾಳು ಮಾಡಿದೆವು. ಅದೇ ರೀತಿಯಾಗಿ ಬಸವತತ್ವವನ್ನು ಪ್ರಚಾರ ಮಾಡದಿದ್ದರೆ ಅದು ಕಾಣೆಯಾಗಲಿದೆ. ಕೊನೆಗೆ ಮನೆ-ಮಠ, ಗುರುಕುಲದಲ್ಲಿಯೇ ಉಳಿಯುತ್ತದೆ. ಇದರಿಂದ ದೇಶದ, ಸಮಾಜದ ಉದ್ಧಾರ ಆಗೋಲ್ಲ ಎಂದು ತಿಳಿಸಿದರು.