ಸಾರಾಂಶ
ಕಾಯಕ ಯೋಗಿ ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿ ಪಟ್ಟಾಧಿಕಾರ ರಜತ ಮಹೋತ್ಸವದಲ್ಲಿ ಬಸವ ತತ್ವ ಸಮಾವೇಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಸಮಾಜದಲ್ಲಿನ ಮೌಢ್ಯ, ಕಂದಚಾರ ಹೋಗಲಾಡಿಸಿ ಜಾತ್ಯತೀತ ಸಮಾಜಕ್ಕಾಗಿ ಬಹುದೊಡ್ಡ ಹೋರಾಟ ಮಾಡಿದ್ದ 12 ಶತಮಾನದ ಬಸವಣ್ಣ, ತನ್ನ ನೆಲೆಯನ್ನೇ ದಿಕ್ಕರಿಸಿ ಧ್ವನಿ ಇಲ್ಲದವರ ಬಾಳಿಗೆ ಆಸರೆಯಾಗಿದ್ದರು. ಅವರ ಆದರ್ಶ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬೇಕೆಂದು ಬೆಂಗಳೂರು ಬೇಲಿಮಠದ ಮ.ನಿ.ಪ್ರ.ಶಿವರುದ್ರ ಸ್ವಾಮೀಜಿ ಹೇಳಿದರು.ತಾಲೂಕಿನ ಸಿದ್ದಯ್ಯನ ಕೋಟೆಯಲ್ಲಿ ಚಿತ್ತರಗಿ ವಿಜಯ ಮಹಂತೇಶ್ವರ ಶಾಖಾ ಮಠದಲ್ಲಿ ನಡೆಯುತ್ತಿರುವ ಕಾಯಕ ಯೋಗಿ ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿ ಪಟ್ಟಾಧಿಕಾರ ರಜತ ಮಹೋತ್ಸವದಲ್ಲಿ ಬಸವ ತತ್ವ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿನ ಅಜ್ಞಾನ, ಅಂಧಕಾರ ಹೋಗಲಾಡಿಸಿ ಸಮಸಮಾಜ ನಿರ್ಮಾಣಕ್ಕಾಗಿ ಹೋರಾಟ ಮಾಡಿದ್ದ ಬಸವಣ್ಣನವರು ತಮ್ಮ ವಚನಗಳ ಮೂಲಕ ಶೂದ್ರ ಸಮುದಾಯ ಜಾಗೃತರನ್ನಾಗಿಸಿದರು. ಅನುಭವ ಮಂಟಪ ಸ್ಥಾಪಿಸಿ ಎಲ್ಲಾ ಸಮಾಜಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಿದ್ದರು. ವಿರೋಧದ ನಡುವೆಯೂ ಜಾತ್ಯತೀತ ಸಮಾಜಕ್ಕಾಗಿ ಆಂದೋಲನವನ್ನೇ ನಡೆಸಿ ಜಗತ್ತಿಗೆ ವಿಶ್ವ ಗುರುವಾಗಿ ಹೆಸರಾಗಿದ್ದಾರೆ ಎಂದರು.ಲಿಂಗ ಎಂಬುದು ಯಾರ ಆಸ್ತಿಯೂ ಅಲ್ಲ ಎನ್ನುವುದನ್ನು ಸಾರಿದ್ದ ಕ್ರಾಂತಿ ಕಾರಿ ಬಸವಣ್ಣನವರು, ಜಗತ್ತಿಗೆ ಕಾಯಕ ತತ್ವ ಸಾರಿದರು. ಮೇಲು-ಕೀಳು ಎನ್ನುವುದನ್ನು ದೂರ ಸರಿಸಿ, ಇವ ನಮ್ಮವ ಇವ ನಮ್ಮವ ಎನ್ನುತ್ತಾ ಎಲ್ಲರನ್ನೂ ಅಪ್ಪಿಕೊಂಡು ಭಾವೈಕ್ಯತೆ ನಾಡನ್ನು ನಿರ್ಮಾಣ ಮಾಡಿದ್ದರು. ಬಸವ ನಾಡನ್ನು ನಿರ್ಮಾಣವಾಗಬೇಕಾದರೆ ಅವರ ಚಿಂತನೆ ಎಲ್ಲಡೆ ಅನಾವರಣವಾಗಬೇಕು. ಬಸವತತ್ವ ಅಳವಡಿಸಿಕೊಂಡು ಸಾಗಬೇಕಿದೆ ಎಂದರು.
12ನೇ ಶತಮಾನದ ಬಸವಣ್ಣನ ಹಾದಿಯಲ್ಲಿಯೇ ಸಾಗಿದ ಇಳಕಲ್ ಮಠದ ಶ್ರೀ ಜನರಲ್ಲಿರುವ ದುಶ್ಚಟ, ಮೂಡ ನಂಬಿಕೆ, ಕಂದಚಾರ ಹೋಗಲಾಡಿಸುವಲ್ಲಿ ಶ್ರಮಿಸಿದ್ಧರು. ಅವರಂತೆಯೇ ಸಾಗುತ್ತಿರುವ ಕಾಯಕ ಯೋಗಿ ಬಸವಲಿಂಗ ಶ್ರೀಗಳು ಶ್ರೀ ಮಠವನ್ನು 25 ವರ್ಷಗಳಿಂದ ಬೃಹತ್ ಮಟ್ಟದಲ್ಲಿ ಕಟ್ಟಿ ಬೆಳೆಸಿ ನಾಡಿಗೆ ಪರಿಚಯಿಸಿದ್ದಾರೆ. ಶ್ರೀಗಳು ಇನ್ನಷ್ಟು ಸೇವೆ ಸಲ್ಲಿಸುವ ಮೂಲಕ ಜನರಲ್ಲಿರುವ ಅಂಧಕಾರ ಅಜ್ಞಾನ ದೂರ ಸರಿಸಲಿ ಎಂದರು.ಇದೇ ಸಂದರ್ಭದಲ್ಲಿ 25 ವರ್ಷಗಳು ಪೂರೈಸಿದ ಶ್ರೀ ಮಠದ ಬಸವಲಿಂಗ ಸ್ವಾಮೀಜಿಯವರನ್ನು ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಮಠಾಧೀಶರು ಬೆಳ್ಳಿ ಕಿರೀಟ ನೀಡಿ ಬೃಹತ್ ಹೂಮಾಲೆ ಹಾಕಿ ಸನ್ಮಾನಿಸಿದರು.
ಈ ವೇಳೆ ದತ್ರಿ ನಾಟ್ಯ ಕಲಾ ಸಂಘ, ಸಿರಿಗೇರಿ ಕಲಾ ತಂಡದವರಿಂದ ಸೋರುತಿಹದು ಸಂಸಾರ ಎನ್ನುವ ನಾಟಕ ಪ್ರದರ್ಶನ ಮಾಡಿದರು. ಇಳಕಲ್ ಗುರು ಮಹಾಂತ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಶಿರೂರು ಡಾ.ಬಸವಲಿಂಗ ಸ್ವಾಮಿ, ವನ್ಯಾಯದೀಶ, ಶರಣಪ್ಪ ಎಂ.ಬಿ.ಬೀಗೇಶ ಗೌಡ,ಮುಖಂಡ ಕೆ.ಬಸಣ್ಣ,ವಾಗೇಶ ಗವಾಯಿ, ಕೋನಸಾಗರ ನಾಗೇಂದ್ರಪ್ಪ ಇದ್ದರು.