ಬಸವಣ್ಣ ಕಾಲುವೆ ತ್ಯಾಜ್ಯ ಹೊರ ಹಾಕುವ ಸಾಹಸ

| Published : Nov 07 2024, 11:51 PM IST

ಸಾರಾಂಶ

ತುಂಗಭದ್ರಾ ಜಲಾಶಯದಿಂದ ಈ ಕಾಲುವೆ 140 ಕ್ಯುಸೆಕ್ ನೀರು ದಿನನಿತ್ಯ ಹರಿಸಲಾಗುತ್ತಿತ್ತು.

ಹೊಸಪೇಟೆ: ನಗರದ ಹೃದಯ ಭಾಗದಲ್ಲಿರುವ ಮೂರಂಗಡಿ ವೃತ್ತದಲ್ಲಿ ಬಸವಣ್ಣ ಕಾಲುವೆ ನೀರಿನ ಹರಿದಾಟ ತಪ್ಪಿಸಲು ನಗರಸಭೆ, ನೀರಾವರಿ ಇಲಾಖೆಯ ಅಧಿಕಾರಿಗಳು ಏದುಸಿರು ಬೀಡುವಂತಾಗಿದೆ.

ತುಂಗಭದ್ರಾ ಜಲಾಶಯದಿಂದ ಈ ಕಾಲುವೆ 140 ಕ್ಯುಸೆಕ್ ನೀರು ದಿನನಿತ್ಯ ಹರಿಸಲಾಗುತ್ತಿತ್ತು. ಆದರೆ, ಮೂರಂಗಡಿ ವೃತ್ತದ ಬಳಿ ಕಾಲುವೆಯಲ್ಲಿ ತ್ಯಾಜ್ಯ ತುಂಬಿ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆಯಲ್ಲಿ ಹರಿಯತೊಡಗಿತ್ತು. ಈಗ ಕಾಲುವೆ ತ್ಯಾಜ್ಯ ಹೊರ ಹಾಕಲು ಜೆಸಿಬಿ ಬಳಸಿ ಯತ್ನಿಸಿದರೂ ಪ್ರಯತ್ನ ಕೈಗೂಡಿಲ್ಲ!

ಕನ್ನಡಪ್ರಭ ದಿನಪತ್ರಿಕೆ "ಹೊಸಪೇಟೆ ಹೃದಯ ಭಾಗದಲ್ಲೇ ಕಾಲುವೆ ನೀರು " ಎಂಬ ಶೀರ್ಷಿಕೆಯಡಿ ಗುರುವಾರ ವರದಿ ಪ್ರಕಟಿಸಿತ್ತು. ಈ ವರದಿ ಹಿನ್ನೆಲೆ ಶಾಸಕರು ಕೂಡ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಗೆ ತ್ಯಾಜ್ಯ ತೆರವು ಮಾಡಲು ಸೂಚಿಸಿದರು.

ಒಂದು ಲಾರಿ ಬಿಯರ್‌ ಬಾಟಲಿ:

ಬಸವಣ್ಣ ಕಾಲುವೆಯಲ್ಲಿ ಒಂದು ಲಾರಿಯಷ್ಟು ಬಿಯರ್‌ ಬಾಟಲಿಗಳು ದೊರೆತಿವೆ. ಇನ್ನು ದೀಪಾವಳಿ, ದಸರಾ ಹಬ್ಬದ ವೇಳೆ ಮಾರಾಟ ಮಾಡಲಾದ ಬಾಳೆ ಕಂಬಗಳು, ಮಾವಿನ ಎಲೆ, ಕಬ್ಬು ಸೇರಿದಂತೆ ವಿವಿಧ ಹೂವಿನ ತ್ಯಾಜ್ಯ ಕೂಡ ಹೊರ ಬಂದಿದೆ. ಐದು ಮೀಟರ್‌ ಅಳದಲ್ಲಿ ಇನ್ನೂ ಮೂರು ಮೀಟರ್‌ನಷ್ಟು ತ್ಯಾಜ್ಯ ಸೇರಿಕೊಂಡಿದೆ. ಅನ್ಯ ಮಾರ್ಗ ಇಲ್ಲದೇ ಈಗ ನೀರು ನಿಲ್ಲಿಸಿ, ನೀರಾವರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಈಗ ನೀರು ನಿಲ್ಲಿಸಲಾಗಿದ್ದು, ತುರ್ತಾಗಿ ತ್ಯಾಜ್ಯ ಹೊರ ತೆಗೆದು ನೀರು ಬಿಡಲು ನೀರಾವರಿ ಇಲಾಖೆ ಅಧಿಕಾರಿಗಳು ಯೋಚಿಸಿದ್ದಾರೆ. ಇಲ್ಲದಿದ್ದರೆ, ಕಬ್ಬು, ಬಾಳೆ ಮತ್ತು ಭತ್ತ ಬೆಳೆದಿರುವ ರೈತರಿಗೆ ತೊಂದರೆ ಆಗಲಿದೆ. ಇದನ್ನರಿತು ಸಮರೋಪಾದಿಯಲ್ಲಿ ರಾತ್ರಿಯಲ್ಲೂ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳೂ ಕನ್ನಡಪ್ರಭಕ್ಕೆ ತಿಳಿಸಿದರು.

ಈ ಕಾಲುವೆಗೆ ಡಿಸೆಂಬರ್‌ ಹಾಗೂ ಜನವರಿ ತಿಂಗಳೊಳಗೆ ಹೊದಿಕೆ ಹಾಕುವ ಆಲೋಚನೆ ಕೂಡ ಹೊಂದಲಾಗಿದೆ. ತ್ಯಾಜ್ಯ ಹಾಗೂ ಕಸ ಕಾಲುವೆಯಲ್ಲಿ ಹಾಕದಂತೆ ನಗರಸಭೆಯಿಂದ ಜಾಗ್ರತೆ ಮೂಡಿಸುವ ಕೆಲಸ ನಡೆಸಲಿ ಎಂದು ನೀರಾವರಿ ಇಲಾಖೆಯ ಅಧಿಕಾರಿ ಜಾನ್ಕರ್‌ ಕೋರಿದ್ದಾರೆ.

ಈ ನಡುವೆ ನಗರಸಭೆ ಕೂಡ ಮೊದಲು ಕಾಲುವೆಯಲ್ಲಿ ತ್ಯಾಜ್ಯ ತೆಗೆದ ಬಳಿಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು. ಈ ಕಾಲುವೆಯನ್ನು ಸಂರಕ್ಷಿಸುವ ಕೆಲಸ ಮಾಡಲಾಗುವುದು ಎಂದು ಪೌರಾಯುಕ್ತ ಚಂದ್ರಪ್ಪ ಕೂಡ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಕಾಲುವೆಯಲ್ಲಿ ತ್ಯಾಜ್ಯ ಸೇರದಂತೆ ಜಾಗ್ರತೆ ವಹಿಸುವುದೇ ಸವಾಲಿನ ಕೆಲಸವಾಗಿದೆ. ಇದಕ್ಕಾಗಿ ಕ್ರಮವಹಿಸಲು ನೀರಾವರಿ ಇಲಾಖೆ ಆಲೋಚಿಸುತ್ತಿದೆ.