ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಜನರ ಜೀವನ ಸುಧಾರಣೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟ ಬಸವಣ್ಣನವರು, ಜನರಿಂದ ಜನರಿಗಾಗಿ ಶ್ರಮಿಸಿ ಜನರನ್ನೇ ಶಕ್ತಿಯನ್ನಾಗಿ ರೂಪಿಸುವ ಪ್ರಜಾಪ್ರಭತ್ವ ಸಮಾಜವನ್ನು 12ನೇ ಶತಮಾನದಲ್ಲೇ ನಿರ್ಮಾಣ ಮಾಡಿದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಹೇಳಿದರು.ಬುಧವಾರ ನಗರದ ಸಂಸದ, ಕೇಂದ್ರ ಸಚಿವ ವಿ.ಸೋಮಣ್ಣ ಅವರ ಕಚೇರಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಇದ್ದ ಅಧಿಕಾರವನ್ನು ಬಿಟ್ಟು ಜನರ ಹಿತಕ್ಕಾಗಿ, ಜನರಿಗೆ ಶಕ್ತಿ ತುಂಬಲು ಪ್ರಯತ್ನಿಸಿದವರಲ್ಲಿ ಬಸವಣ್ಣ, ಅಂಬೇಡ್ಕರ್, ಬುದ್ಧ, ಗಾಂಧೀಜಿ ಪ್ರಮುಖರು ಎಂದರು.ಎಲ್ಲರೂ ಸಮಾನವಾಗಿ ಬಾಳಬೇಕು ಎಂದು ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಅಲ್ಲಿ ಶರಣರ ಜೊತೆಗೂಡಿ ಜಾತಿಭೇದ, ಸಾಮಾಜಿಕ ತಾರತಮ್ಯ ನಿವಾರಣೆಗೆ ಚರ್ಚೆ ಮಾಡುತ್ತಿದ್ದರು. ಬಸವಣ್ಣನವರ ವಚನಗಳಲ್ಲಿ ಜೀವನ ಮೌಲ್ಯ ಸಾರಿದರು ಎಂದರು.
ದೇಶದ ಪಾರ್ಲಿಮೆಂಟಿನಬಲ್ಲಿ ಇದೇ ಮೊದಲ ಬಾರಿಗೆ ಬಸವ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಮೂಲಕ ಶ್ರೇಷ್ಠ ಮಾನವೀಯ ವ್ಯಕ್ತಿಯ ಆದರ್ಶಗಳನ್ನು ಜಗತ್ತಿಗೆ ಸಾರುವ ಕೆಲಸವನ್ನು ಭಾರತ ಸರ್ಕಾರ ಮಾಡುತ್ತಿದೆ. ಅಲ್ಲಿ ಬಸವ ಜಯಂತಿ ಆಚರಣೆಗೆ ಸಚಿವ ವಿ. ಸೋಮಣ್ಣ ಅವರು ಹೆಚ್ಚು ಕಾಳಜಿ ವಹಿಸಿದರು ಎಂದು ಕೆ.ಎಸ್. ಸಿದ್ಧಲಿಂಗಪ್ಪ ಶ್ಲಾಘಿಸಿದರು.ಜಿಲ್ಲಾ ಬಿಜೆಪಿ ಹಿರಿಯ ಉಪಾಧ್ಯಕ್ಷ ವೈ.ಎಚ್. ಹುಚ್ಚಯ್ಯ ಮಾತನಾಡಿ, ಬಸವಣ್ಣನವರು ಸಮ ಸಮಾಜದ ನಿರ್ಮಾತೃ. ಅವರ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಅದರಂತೆ ನಡೆದರೆ ಸಮಾಜದಲ್ಲಿ ಯಾವ ಗಲಭೆ, ಗಲಾಟೆ, ದ್ವೇಷ, ಅಸೂಯೆ ಇಲ್ಲದೆ ಪ್ರತಿಯೊಬ್ಬರೂ ಶಾಂತಿ, ಸೌಹಾರ್ದತೆಯಿಂದ ಬಾಳಲು ಸಾಧ್ಯವಿದೆ ಎಂದರು.
ನಮ್ಮಲ್ಲಿ ಕೋಟ್ಯಂತರ ಜನ ಬಸವಣ್ಣನ ಆರಾಧಕರಿದ್ದಾರೆ. ಆದರೆ ಅವರ ತತ್ವಗಳನ್ನು ಅನುಸರಿಸಿದೆ ಬಸವಣ್ಣನವರಿಗೆ ಅಪಚಾರ ಮಾಡುತ್ತಿದ್ದಾರೆ. ಇದಾಗಬಾರದು ಸಾಮಾಜಿಕ ತಾರತಮ್ಯ ನಿವಾರಿಸಿಕೊಂಡು ಎಲ್ಲರೂ ಸರಿಸಮಾನರಾಗಿ ಭಾವೈಕ್ಯತೆಯಿಂದ ಬಾಳುವಂತಾಗಬೇಕು ಎಂದು ಆಶಿಸಿದರು.ಬಿಜೆಪಿ ಮುಖಂಡರಾದ ಎಸ್. ಶಿವಪ್ರಸಾದ್, ನಗರ ಅಧ್ಯಕ್ಷ ಧನುಷ್, ಮಾಜಿ ಅಧ್ಯಕ್ಷ ಟಿ.ಹೆಚ್. ಹನುಮಂತರಾಜು, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ್, ಮುಖಂಡರಾದ ಗಣೇಶ್‌ಪ್ರಸಾದ್, ನಂಜುಂಡಪ್ಪ(ದಾಸಣ್ಣ), ನಿಸರ್ಗ ರಮೇಶ್, ಬಿ.ಬಿ.ಮಹದೇವಯ್ಯ, ಸೊಗಡು ಕುಮಾರಸ್ವಾಮಿ, ತರಕಾರಿ ಮಹೇಶ್, ಕೊಪ್ಪಲ್ ನಾಗರಾಜು, ಲಕ್ಷ್ಮೀನಾರಾಯಣ್, ವಿನಯ್‌ಕುಮಾರ್, ಮಂಜುನಾಥ್, ಮಹೇಶ್ ಮೊದಲಾದವರು ಭಾಗವಹಿಸಿದ್ದರು.