ಸರ್ವ ಸಮಾನತೆ ಸಂಸ್ಕೃತಿ ಪರಿಚಯಿಸಿದ ಬಸವಣ್ಣ

| Published : May 15 2024, 01:40 AM IST

ಸಾರಾಂಶ

ಬಸವೇಶ್ವರರು ಅನುಭವ ಮಂಟಪದ ಮೂಲಕ ಶರಣ ಸಂಸ್ಕತಿಯನ್ನು ನಾಡಿಗೆ ಪರಿಚಯಿಸಿದರು. ಬಹು ಸಂಸ್ಕೃತಿಗಳ ನೆಲೆಗಳನ್ನು ಒಗ್ಗೂಡಿಸಿಕೊಂಡು ಹೊದವರಲ್ಲಿ ಬಸವೇಶ್ವರ ಪಾತ್ರ ದೊಡ್ಡದು

ಧಾರವಾಡ:

ಸಮಾನತೆ ಮತ್ತು ಸ್ವಾತಂತ್ರ‍್ಯದ ಪ್ರತೀಕವಾಗಿ ಶರಣ ಸಂಸ್ಕೃತಿಯನ್ನು ಬಸವಣ್ಣನವರು ಬಲವಾಗಿ ಪ್ರತಿಪಾದಿಸಿದ್ದರು. ಅವರು ಶ್ರೇಣಿಕೃತ ಜಾತಿ ಮತ್ತು ಶ್ರೇಣಿಕೃತ ರಾಜ ವ್ಯವಸ್ಥೆಯ ಸಂಸ್ಕೃತಿಗಳನ್ನು ಧಿಕ್ಕರಿಸಿ ಸರ್ವ ಸಮಾನತೆಯ ಸಂಸ್ಕೃತಿ ಪರಿಚಯಿಸಿದ ಧೀಮಂತರು ಎಂದು ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ಡಾ. ವೀರಣ್ಣ ರಾಜೂರ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠವು ಬಸವೇಶ್ವರ ಜಯಂತಿ ಅಂಗವಾಗಿ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಆಯೋಜಿಸಿದ ‘ಸಾಂಸ್ಕೃತಿಕ ನಾಯಕ'''' ಹೆಸರಿನ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿ, ಶರಣ ತತ್ವಗಳನ್ನು ಪ್ರಸ್ತುತ ಸಂದರ್ಭದಲ್ಲಿ ಸಮಾಜದ ಅಭ್ಯುದ್ಯಯಕ್ಕೆ ಹೊಸ ರೀತಿಯಲ್ಲಿ ವ್ಯಾಖ್ಯಾನ ಮಾಡುವುದು ಅವಶ್ಯಕತೆ ಇದೆ ಎಂದರು.

ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಬಸವಣ್ಣನವರು ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್‌ ಆಗಿದ್ದು 700ಕ್ಕಿಂತಲೂ ಹೆಚ್ಚು ಕೆಳಸ್ತರದ ಕಾಯಕ ಜೀವಿಗಳನ್ನು ಹೊಂದಿದ್ದರು. ಕೆಳಸ್ತರದ ಜನರನ್ನು ಒಗ್ಗೂಡಿಸಿಕೊಂಡು ಅನುಭವ ಮಂಟಪವನ್ನು ರೂಪಿಸಿದ್ದಕ್ಜಾಗಿ ಅವರೊಬ್ಬ ವಿಶ್ವ ಸಾಂಸ್ಕೃತಿಕ ನಾಯಕರು ಎಂದು ಹೇಳಿದರು.

ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಸೇರಿದಂತೆ ಅನೇಕ ವಿಷಯಗಳ ಕುರಿತು ವಚನಗಳ ಮೂಲಕ ಬಸವಣ್ಣನವರು ನಮಗೆ ನೀಡಿದ್ದಾರೆ. ಧರ್ಮ ಮತ್ತು ರಾಜಪ್ರಭುತ್ವ ಧಿಕ್ಕರಿಸಿ ಸಾಮಾಜಿಕ ಕ್ರಾಂತಿಗೆ ಹೆಜ್ಜೆ ಇಟ್ಟರು. ಬಸವೇಶ್ವರರು ಅನುಭವ ಮಂಟಪದ ಮೂಲಕ ಶರಣ ಸಂಸ್ಕತಿಯನ್ನು ನಾಡಿಗೆ ಪರಿಚಯಿಸಿದರು. ಬಹು ಸಂಸ್ಕೃತಿಗಳ ನೆಲೆಗಳನ್ನು ಒಗ್ಗೂಡಿಸಿಕೊಂಡು ಹೊದವರಲ್ಲಿ ಬಸವೇಶ್ವರ ಪಾತ್ರ ದೊಡ್ಡದರು ಎಂದರು.

ಕವಿವಿ ಬಸವೇಶ್ವರ ಪೀಠದ ಸಂಯೋಜಕ ಡಾ. ಪ್ರೊ. ಸಿ.ಎಂ. ಕುಂದಗೋಳ ಪ್ರಾಸ್ತಾವಿಕ ಮಾತನಾಡಿ, ಎರಡು ದಿನಗಳಲ್ಲಿ 16 ವಿದ್ವಾಂಸರು ಬಸವಣ್ಣನವರ ಕುರಿತು ಮಾತನಾಡಿದರು. ಎಲ್ಲ ವಿದ್ವಾಂಸರ ಪ್ರಬಂಧ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಕವಿವಿ ಪತ್ರಿಕೋದ್ಯಮ ವಿಭಾಗದಿಂದ ಈ ವಿಚಾರ ಸಂಕಿರಣದ ಕುರಿತು ಹೊರತಂದ ವಿದ್ಯಾ ಸಮಾಚಾರ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಸಚಿವ ಡಾ. ಎ. ಚೆನ್ನಪ್ಪ ಮಾತನಾಡಿದರು. ಕುಲಪತಿ ಪ್ರೊ. ಕೆ.ಬಿ. ಗುಡಸಿ, ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಡಾ. ಈರಣ್ಣ ಇಂಜಣಗೇರಿ ಮತ್ತಿತರರು ಇದ್ದರು. ಇಂದು ಬಸವೇಶ್ವರ ಪೀಠದ ಸುವರ್ಣ ಮಹೋತ್ಸವ

ಬಸವೇಶ್ವರ ಪೀಠ ಸ್ಥಾಪನೆಯಾಗಿ 50 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಮೇ 15ರಂದು ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಬಸವೇಶ್ವರ ಪೀಠದ ಸುವರ್ಣ ಮಹೋತ್ಸವ ಏರ್ಪಡಿಸಿದ್ದು ಬೆಳಗ್ಗೆ 10ಕ್ಕೆ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ನಾಡಿನ ವಿವಿಧ ಮಠಾಧೀಶರು ಆಗಮಿಸಿದ್ದಾರೆ. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹಾಗೂ ಸುರ್ಣಾ ಗ್ರುಪ್‌ ಮುಖ್ಯಸ್ಥ ಡಾ. ವಿ.ಎಸ್‌.ವಿ. ಪ್ರಸಾದ ಅತಿಥಿಗಳಾಗಿ ಭಾಗವಹಿಸುತ್ತಾರೆ. ಕುಲಪತಿ ಡಾ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸುತ್ತಾರೆ. ಬಸವೇಶ್ವರ ಪೀಠದಿಂದ ಸಾಕ್ಷ್ಯಚಿತ್ರ ಹಾಗೂ 16 ಪುಸ್ತಕಗಳ ಬಿಡುಗಡೆ ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದು ಪೀಠದ ಸಂಯೋಜಕ ಸಿ.ಎಂ. ಕುಂದಗೋಳ ತಿಳಿಸಿದ್ದಾರೆ.