ಬಸವಣ್ಣ ವಿಶ್ವದ ಸಾಂಸ್ಕೃತಿಕ ನಾಯಕ: ಜಗದೀಶ ಶೆಟ್ಟರ್‌

| Published : Jan 20 2024, 02:04 AM IST

ಸಾರಾಂಶ

ಕಲಬುರಗಿಯಲ್ಲಿ ಕಸಾಪ ವತಿಯಿಂದ ನಡೆದ ಜಿಲ್ಲಾ ಪ್ರಥಮ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾಜಿ ಸಿಎಂ ಅಭಿಮತ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಕನ್ನಡ ಭವನದವರೆಗೆ ವಚನ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ವಚನಗಳ ಕಟ್ಟು ಹೊತ್ತು ಮೆರವಣಿಗೆ ನಡೆಯಿತು. ಶರಣರ ವಿವಿಧ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಬಸವಣ್ಣ ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕ ಮಾತ್ರವಲ್ಲ ಇಡೀ ವಿಶ್ವದ ನಾಯಕರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು.

ಜಿಲ್ಲಾ ಕಸಾಪದಿಂದ ಕನ್ನಡ ಭವನದಲ್ಲಿ ಶುಕ್ರವಾರ ಜರುಗಿದ ಪ್ರಥಮ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರು ಸಮಾಜದ ಎಲ್ಲ ವರ್ಗ, ವರ್ಣ, ಜಾತಿಯ ಜನರನ್ನು ಅಪ್ಪಿಕೊಳ್ಳುವ ಮೂಲಕ ಸಮಾಜದಲ್ಲಿ ಸಮಾನತೆಯ ಬೀಜ ಬಿತ್ತಿದರೆಂದರು.

ಇನ್ನೂ ಅನೇಕ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಕಲ್ಪನೆಯೇ ಇಲ್ಲದಿರುವಾಗ ಪ್ರಜಾಪ್ರಭುತ್ವ ಕಲ್ಪನೆಯ ಪಾರ್ಲಿಮೆಂಟ್ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿಯೇ ಜಾರಿಗೆ ತಂದಿದ್ದರು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವ ಮಾತನಾಡಿ, ಮಹಿಳೆಗೆ ಸ್ವಾತಂತ್ರ್ಯ ಮತ್ತು ಸಮಾನತೆ ತಂದು ಕೊಟ್ಟ ಶರಣರ ವಿಚಾರಗಳು ಸಾರ್ವಕಾಲಿಕವಾಗಿವೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು. ಧಾರವಾಡ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಸುರೇಶ ಸಜ್ಜನ್, ಗೌರವಾಧ್ಯಕ್ಷ ಡಾ. ಎಸ್. ಬಿ. ಕಾಮರೆಡ್ಡಿ , ಮಲ್ಲಿನಾಥ ಪಾಟೀಲ ಕಾಳಗಿ, ಗೌಡೇಶ ಬಿರಾದಾರ, ಮಲ್ಲಿನಾಥ ದೇಶಮುಖ, ಶಿವರಾಜ ಅಂಡಗಿ, ಯಶವಂತರಾಯ ಅಷ್ಟಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ಬಾಬುರಾವ ಪಾಟೀಲ, ಡಾ. ರೆಹಮಾನ್ ಪಟೇಲ್, ಶಕುಂತಲಾ ಪಾಟೀಲ, ಡಾ. ಕೆ ಗಿರಿಮಲ್ಲ, ಶಿಲ್ಪಾ ಜೋಶಿ ಸೇರಿದಂತೆ ಅನೇಕರಿದ್ದರು.

ಇದಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಕನ್ನಡ ಭವನದವರೆಗೆ ವಚನ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ವಚನಗಳ ಕಟ್ಟು ಹೊತ್ತು ಮೆರವಣಿಗೆ ನಡೆಯಿತು. ಶರಣರ ವಿವಿಧ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು.

ಶಹಾಪುರಿನ ಶರಣ ಸಾಹಿತಿ ಶಿವಣ್ಣ ಇಜೇರಿ ಸಮಾರೋಪ ನುಡಿಗಳನ್ನಾಡಿದರು. ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಪ್ರಭುಲಿಂಗ ಮಹಾಗಾಂವಕರ್, ಸುರೇಶ ಡಿ ಬಡಿಗೇರ, ಶಿವಕುಮಾರ ಬಿದರಿ ಇದ್ದರು.

ಜಗದೀಶ ಮರಪಳ್ಳಿ, ಪ್ರೊ. ಶ್ರೀದೇವಿ ಹರವಾಳ, ಗೌರಿ ಕರಣಗಿ, ಶೈಲಜಾ ಚವ್ಹಾಣ, ಜಗದೇವಿ ಚೆಟ್ಟಿ, ರಮೇಶ ಪಾಟೀಲ, ಜಗನ್ನಾಥ ರಾಚೋಟಿ, ಶಂಕ್ರೆಪ್ಪ ಮಹಾಶೆಟ್ಟಿ, ಶಂಕರ ಕಟ್ಟಿ ಸಂಗಾವಿ, ಅಲ್ಲಾವುದ್ದೀನ್ ಸಾಗರ, ಸಂದೀಪ ದೇಸಾಯಿ, ಗಣೇಸರಾವ ಹುಲಿಮನಿ, ಧರ್ಮರಾಯ ಜವಳಿ, ಮೋದಿನ್ ಪಟೇಲ್, ಚಂದ್ರಕಾಂತ ನಾಟಿಕಾರ ಅವರನ್ನು ಸತ್ಕರಿಸಲಾಯಿತು.ವಚನಗಳನ್ನು ಬದುಕಲ್ಲಿ ಅಳ‍ಡಿಸಿಕೊಳ್ಳಿ: ನೀಲಾಂಬಿಕಾ

ಸಕಲ ಜೀವಾತ್ಮರಿಗೆ ಲೇಸು ಬಯಸಿದ ಬಸವಾದಿ ಶರಣರ ವೈಚಾರಿಕ ವಿಚಾರಗಳು ಪ್ರತಿಯೊಬ್ಬರ ಬದುಕಿಗೆ ಅಗತ್ಯವಾಗಿದ್ದು, ವಚನ ಪಠಣಕ್ಕಿಂತ ವಚನವನ್ನು ಬದುಕಿನಲ್ಲಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶರಣರ ಕೊಡುಗೆ ಅಪಾರವಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಶರಣ ಸಾಹಿತಿ ನೀಲಾಂಬಿಕಾ ಪೊಲೀಸ ಪಾಟೀಲ ತಿಳಿಸಿದರು.

ಸ್ತ್ರೀಯರಿಗೆ ಸಮಾನತೆ ಕಲ್ಪಿಸಿದ್ದು ವಚನಕಾರರ ಇನ್ನೊಂದು ವೈಶಿಷ್ಟ್ಯ ವಾಗಿದೆ. ಅಂಗದ ಮೇಲೆ ಇಷ್ಟಲಿಂಗ ಕರುಣಿಸುವ ಮೂಲಕ ವಿಶ್ವ ಮಾನವ ಸಂದೇಶ ತುಂಬಿದರು. ಕಾಯಕ ಮತ್ತು ದಾಸೋಹ ಎಂಬ ಎರಡು ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಶರಣರು, ನುಡಿದಂತೆ ನಡೆದರು. ನಡೆದಂತೆ ನುಡಿದರು. ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ನಿರ್ಮೂಲನೆ ಮಾಡಿ ವೈಚಾರಿಕ ಸಮಾಜಕ್ಕೆ ಭದ್ರ ಬುನಾದಿ ಹಾಕಿದರೆಂದರು.