ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

| Published : Jan 19 2024, 01:45 AM IST

ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಸರ್ಕಾರ ಇಂದು ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿರುವ ವಿಚಾರ ತಿಳಿದು ತುಂಬಾ ಸಂತೋಷವಾಯಿತು. ಇದಕ್ಕಾಗಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಂಪುಟದ ಎಲ್ಲ ಸಚಿವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಲು ಇಷ್ಟಪಡುತ್ತೇವೆ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಕರ್ನಾಟಕದ ಹಲವು ಸಂಘ ಸಂಸ್ಥೆಗಳು, ಸ್ವಾಮಿಗಳು, ಪ್ರಗತಿಪರರು, ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇಂದು ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿರುವ ವಿಚಾರ ತಿಳಿದು ತುಂಬಾ ಸಂತೋಷವಾಯಿತು. ಇದಕ್ಕಾಗಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಂಪುಟದ ಎಲ್ಲ ಸಚಿವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಲು ಇಷ್ಟಪಡುತ್ತೇವೆ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕರಾದರು ಎಂದಾಕ್ಷಣ ಕೇವಲ ಸಂಸ್ಕೃತಿಗೆ ಮಾತ್ರ ಮೀಸಲು ಅಂತ ಅಲ್ಲ. ಸಂಸ್ಕೃತಿಯಲ್ಲಿ ಧರ್ಮ, ಕಲೆ, ಸಾಹಿತ್ಯ, ಸಂಗೀತ, ನಾಟಕ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಇದೆ. ಜೀವನದ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಎಲ್ಲ ಚೈತನ್ಯವನ್ನು ಸಮಾಜಕ್ಕೆ ತಂದುಕೊಟ್ಟವರು ಬಸವಣ್ಣನವರು. ಅಂತಹ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿರುವುದು ಕರ್ನಾಟಕದ ಜನತೆಗೆ ಮಾತ್ರವಲ್ಲ, ಇಡೀ ಭಾರತೀಯರು ಮೆಚ್ಚಬಹುದಾದ, ಗೌರವಿಸಬಹುದಾದ ಸಂಗತಿ ಎಂದು ಹೇಳಿಕೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಮತ್ತೊಂದು ಮನವಿ ಮಾಡುತ್ತೇನೆ. ಕೇವಲ ಘೋಷಣೆ ಮಾಡಿದರೆ ಸಾಲದು, ಅದು ಕಲೆ, ಸಾಹಿತ್ಯ, ಸಂಗೀತ ಇವುಗಳ ನೆಲೆಯಲ್ಲಿ ಬಸವಣ್ಣನವರ ಆಶಯಗಳನ್ನು ಸಮಾಜದಲ್ಲಿ ಜಾರಿಗೆ ತರಬೇಕು. ಇವುಗಳಿಗೆ ಒಂದು ಸಮಿತಿಯನ್ನು ನೇಮಕ ಮಾಡಿ ಅದರಲ್ಲಿ ಅರ್ಹವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ಹಾಗೂ ಸದಸ್ಯರನ್ನಾಗಿ ನೇಮಿಸಬೇಕು. ಅವರ ಮೂಲಕ ಬಸವ ಸಂದೇಶವನ್ನು ಇಡೀ ನಾಡಿನಲ್ಲಿ ಬಿತ್ತರಿಸುವಂಥ ಕಾರ್ಯವನ್ನು ಸರ್ಕಾರ ಮಾಡಬೇಕು. ಅದಕ್ಕೆ ಬೇಕಾದ ಆರ್ಥಿಕ ನೆರವನ್ನು ಸರಕಾರ ನೀಡಬೇಕು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಣೆ ಮಾಡಬೇಕೆಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ ಕ್ಷಣ.