ಸಾರಾಂಶ
- ಜಿಲ್ಲಾಡಳಿತ ನೇತೃತ್ವದಲ್ಲಿ ಜಯಂತಿ ಕಾರ್ಯಕ್ರಮದಲ್ಲಿ ಡಿಸಿ ಡಾ.ವೆಂಕಟೇಶ್- - - ಕನ್ನಡಪ್ರಭ ವಾರ್ತೆ, ದಾವಣಗೆರೆ ವಿಶ್ವಗುರು ಹಾಗೂ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರು ವರ್ಗರಹಿತ, ಜಾತಿರಹಿತ ಸಮಾಜ ನಿರ್ಮಾಣ ಮಾಡುವ ಮೂಲಕ ಸಾಮಾಜಿಕ ಹರಿಕಾರ ಎನಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.
ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಲಾದ ಬಸವ ಜಯಂತಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಬಸವೇಶ್ವರರು 12ನೇ ಶತಮಾನದಲ್ಲಿ ತಮ್ಮ ಸರಳವಾದ ವಚನಗಳ ಮೂಲಕ ಸಮಾಜದಲ್ಲಿನ ಮೌಢ್ಯತೆ ನಿವಾರಿಸುವ ಕೆಲಸ ಮಾಡಿದರು. ಆ ಮೂಲಕ ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅನುಭವ ಮಂಟಪ ಸ್ಥಾಪಿಸುವ ಮೂಲಕ ಈಗಿನ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಆಗಿನ ಕಾಲದಲ್ಲಿಯೇ ಅವರ ಕಲ್ಪನೆಯಾಗಿತ್ತು. ಈ ಎಲ್ಲ ದೃಷ್ಟಿಯಿಂದ ಬಸವಣ್ಣನವರನ್ನು ವಿಶ್ವಗುರು ಹಾಗೂ ಸಾಂಸ್ಕೃತಿಕ ನಾಯಕ ಎಂದು ಕರೆಯಲ್ಪಡಲಾಗುತ್ತದೆ ಎಂದರು.
ಹೇಮರೆಡ್ಡಿ ಮಲ್ಲಮ್ಮ ಶಿವಭಕ್ತೆಯಾಗಿ ಬಸವಣ್ಣನವರ ಮಾರ್ಗ ಅನುಸರಿಸಿದರು. ಹಾಗೂ ಮಹಾಸಾಧ್ವಿ ಆಗಿದ್ದ ಅವರ ಜೀವನ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷರಾದ ಡಾ.ಕೊಟ್ರೇಶ್ ಬಿದ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳನಾಯ್ಕ್ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
- - - -10ಕೆಡಿವಿಜಿ33ಃ:ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ಬಸವ ಜಯಂತಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.