ಸಾರಾಂಶ
ಶಾಲೆಯ ನೋಂದಣಿಯಲ್ಲಿ ಜಾತಿ ದಾಖಲು ಮಾಡುವುದನ್ನು ಬಿಡಬೇಕು. ಅಂದಾಗ ಜಾತೀಯತೆಯಿಂದ ಹೊರಬರಲುಸಾಧ್ಯ ಎಂದ ಶಾಸಕ ಅಶೋಕ ಪಟ್ಟಣ
ಕನ್ನಡಪ್ರಭ ವಾರ್ತೆ ರಾಮದುರ್ಗ
ವಿಶ್ವಗುರು ಬಸವಣ್ಣನವರ ಆಶಯದಂತೆ ಸಮಾಜದಲ್ಲಿ ಸಮಾನತೆ ಬರಲು ಶಾಲಾ ನೋಂದಣಿ ಸಂದರ್ಭದಲ್ಲಿ ಜಾತಿ ದಾಖಲಿಸುವುದನ್ನು ಬಿಟ್ಟರೆ ಮಾತ್ರ ಜಾತೀಯತೆಯಿಂದ ಹೊರಬರಲು ಸಾಧ್ಯವಿದೆ ಎಂದು ವಿಧಾನಸಭೆಯ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ರಾಜ್ಯ ಸರ್ಕಾರಕ್ಕೆ ಜಾಗತಿಕ ಲಿಂಗಾಯತ ಮಹಸಭಾ ತಾಲೂಕು ಘಟಕ ಮತ್ತು ವಿವಿಧ ಶರಣ ಸಂಘಟನೆಗಳು ತಾಪಂ ಸಭಾಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಾತ್ಯತೀತ ರಾಷ್ಟ್ರ ಎನ್ನುವ ದೇಶದಲ್ಲಿ ಚುನಾವಣೆಯಲ್ಲಿ ಟಿಕೆಟ್ ನೀಡಲು ಜಾತಿ, ಗೆದ್ದ ಮಂತ್ರಿ ಮಾಡಲು ಜಾತಿ ನೋಡುವ ಇಂದಿನ ದಿನದಲ್ಲಿ ಬಸವಣ್ಣನವರ ಆದರ್ಶ ಸಮಾಜ ನಿರ್ಮಿಸಲು ಪರದಾಡಬೇಕಾಗಿದೆ ಎಂದು ವಿಷಾದಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸರ್ವ ಜನಾಂಗದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು ಯಾವುದೇ ಜಾತಿಗೆ ಸೀಮಿತವಾಗದೇ ರಾಜ್ಯದ ಜನರನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಜಾರಿಗೆ ತರುತ್ತಿದ್ದಾರೆ. ಲಿಂಗಾಯತ ಸಮಾಜ ಒಳಪಂಗಡಗಳನ್ನು ಬಿಟ್ಟು ಎಲ್ಲರೂ ಒಂದಾಗಿ ಲಿಂಗಾಯತ ಎಂದು ಹೇಳಿ ಬಸವಣ್ಣನವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಮಾಜದಲ್ಲಿ ಸಮಾನತೆ ತರಲು ಮುಂದಾಗಬೇಕು. ಅದಕ್ಕಾಗಿ ಸಮಾಜದೊಂದಿಗೆ ನಾನು ಎಲ್ಲ ಕಾರ್ಯಕ್ಕೂ ಬರುತ್ತೇನೆ ಎಂದು ಹೇಳಿದರು.ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಹಾರೂಗೇರಿಯ ಶರಣ ಸಾಹಿತಿ ಐ.ಆರ್.ಮಠಪತಿ ಕರ್ನಾಟಕ ಸರ್ಕಾರ ವಿಶ್ವಗುರುವಿಗೆ ಶ್ರೇಷ್ಠ ಸ್ಥಾನಮಾನ ನೀಡಿದ್ದು ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ ಆದರ್ಶ ಜೀವನ ನಡೆಸಬೇಕು ಎಂದು ಹೇಳಿದರು.
ಇಂದು ಸಮಾಜವನ್ನು ಮೌಢ್ಯಗಳೇ ಆಳುತ್ತಿವೆ. ಮೂಢನಂಬಿಕೆ ನಂಬುವುದನ್ನು ಬಿಟ್ಟು ಅನುಭಾವ ಮಂಟಪದ ಶರಣರು ಅನುಭಾವದಿಂದ ರಚನೆ ಮಾಡಿರುವ ವಚನ ಸಾಹಿತ್ಯ ಇಂದಿನ ವೈಜ್ಞಾನಿಕ ಯುಗಕ್ಕೆ ಹೊಂದಾಣಿಕೆಯಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರು ವಚನಗಳನ್ನು ಅರಿತು ನಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಹೇಳಿದರು. ಪ್ರಾಚಾರ್ಯ ಎಸ್.ಎಂ. ಸಕ್ರಿ ಸ್ವಾಗತಿಸಿದರು. ಶಿದ್ದು ಹದ್ಲಿ ನಿರೂಪಿಸಿದರು. ಈರಣ್ಣ ಬುಡ್ಡಾಗೋಳ ವಂದಿಸಿದರು.