ಕನ್ನಡಪ್ರಭವಾರ್ತೆ ತಿಪಟೂರು

೧೨ನೇ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣನವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿದೆ ಎಂದು ಷಡಕ್ಷರಮಠದ ರುದ್ರಮುನಿ ಸ್ವಾಮೀಜಿ ತಿಳಿಸಿದರು.ತಿಪಟೂರಿನ ವೀರಶೈವ ಗುರುಕುಲಾನಂದಾಶ್ರಮದಲ್ಲಿ ಏರ್ಪಡಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮುಂಬರುವ ಸಮಾಜದ ಎಲ್ಲ ಯುವಕರೂ ಸೇರಿ ಬಸವಜಯಂತಿ ಆಚರಿಸುತ್ತಿರುವುದು ಸಂತೋಷದ ಸಂಗತಿ. ಇದೇ ಉತ್ಸಾಹದಿಂದ ಮುಂದಿನ ವರ್ಷ ಇನ್ನೂ ಹೆಚ್ಚಿನ ಸಿದ್ದತೆಯೊಂದಿಗೆ ತಾಲೂಕಿನ ಎಲ್ಲ ಮಠಾಧೀಶರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸಮಾರಂಭದಲ್ಲಿ ಭಾಗವಹಿಸುವಂತಾಗಲಿ ಎಂದು ತಿಳಿಸಿದರು.ರಾಜ್ಯ ಬಿಜೆಪಿ ವಕ್ತಾರ ಎಚ್.ಎನ್.ಚಂದ್ರಶೇಖರ್ ಮಾತನಾಡಿ, ಜಗತ್ತಿನಲ್ಲಿ ೧೨ನೇ ಶತಮಾನದಲ್ಲಿಯೇ ಮಾತನಾಡದೇ ಹೇಳಿದ್ದನ್ನು ಮಾಡಿ ತೋರಿಸಿದವರು ಬಸವಣ್ಣನವರು. ಮಹಿಳೆಯರಿಗೆ ಸಮಾನತೆಯನ್ನು ತೋರಿದ ಯಾವುದೇ ಸಮುದಾಯ ಅಥವಾ ಧರ್ಮ ಇದ್ದರೆ ಅದು ವೀರಶೈವ ಲಿಂಗಾಯಿತ ಧರ್ಮ ಮಾತ್ರ. ಅದರ ರೂವಾರಿ ಕಾಯಕಯೋಗಿ ಬಸವಣ್ಣ ಆಗಿದ್ದರು. ಜೊತೆಗೆ ಅಸ್ಪಶ್ಯತೆ ನಿವಾರಣೆಗಾಗಿ ಆಗಿನ ಕಾಲಘಟ್ಟದಲ್ಲಿಯೇ ಜನರ ವಿರೋಧದ ಮಧ್ಯೆಯೂ ಹೋರಾಟ ಮಾಡಿದವರಾಗಿದ್ದರು. ಅಂದಿನ ದಿನಮಾನದಲ್ಲಿಯೇ ಪ್ರಜಾ ಪ್ರಭುತ್ವದ ರೂಪುರೇಷೆಗಳನ್ನು ಅನುಭವ ಮಂಟಪದ ಮೂಲಕ ಜಾರಿಗೆ ತಂದಿದ್ದರು. ಆದರೆ ಅಂದು ಅವರು ಪ್ರಾರಂಭಿಸಿದ ಕೆಲಸ ಇಂದಿಗೂ ಪೂರ್ತಿಯಾಗದೇ ಇನ್ನೂ ಜನಮಾನಸದಲ್ಲಿ ಅಸ್ಪಶ್ಯತೆ, ಅಸಮಾನತೆ ಇರುವುದು ವಿಷಾದಕರ ಎಂದು ತಿಳಿಸಿದರು.ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ಸಮಾಜದಲ್ಲಿ ಕ್ರಾಂತಿ ಆಗದಿದ್ದರೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ. ೧೨ನೇ ಶತಮಾನದಲ್ಲಿ ನಡೆದ ಕ್ರಾಂತಿಯ ನೇತೃತ್ವವನ್ನು ಬಸವಣ್ಣನವರು ವಹಿಸಿದ್ದರು. ಸಮಾಜದಲ್ಲಿದ್ದ ಪಿಡುಗುಗಳು, ಶೋಷಣೆ ಹಾಗೂ ಮೌಢ್ಯತೆಗಳ ವಿರುದ್ಧ ಬಸವಣ್ಣನವರು ಸಮರ ಸಾರಿದ್ದರು. ವಚನಗಳ ಮೂಲಕ ಸಾಹಿತ್ಯ ರಚಿಸಿ ಸಮಾಜದಲ್ಲಿ ಬದಲಾವಣೆಗೆ ಕಾರಣೀಕರ್ತರಾದರು. ಅಂದು ಯಾವ ರೀತಿ ಬಸವಣ್ಣನವರು ಮಹಿಳೆಯರಿಗೆ ಸಮಾನತೆ ನೀಡಬಯಸಿದರೋ ಅದೇರೀತಿ ಇಂದು ಪ್ರಧಾನಿ ಮೋದಿಯವರು ಮಹಿಳಾ ಮೀಸಲಾತಿ ಮೂಲಕ ದೇಶದಲ್ಲಿ ಮಹಿಳಾ ಸಮಾನತೆ ತರಲು ಹೊರಟಿದ್ದರು. ದುರದೃಷ್ಟವಶಾತ್ ಆ ಬಿಲ್ ಪಾಸಾಗಲಿಲ್ಲ ಎಂದರು.ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ರೇಣುಕಾರಾಧ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ ಬಸವಣ್ಣನವರ ಒಂದು ವಚನವನ್ನು ಅರ್ಥೈಸಿಕೊಂಡು ಪಾಲನೆ ಮಾಡಿದರೆ ನಮ್ಮ ಜೀವನ ಪಾವನವಾಗುತ್ತದೆ. ವಿಶ್ವದ ಎಲ್ಲ ಸಮಸ್ಯೆಗಳಿಗೂ ಬಸವಣ್ಣನವರ ವಚನಗಳಲ್ಲಿ ಪರಿಹಾರವಿದೆ ಎಂದು ತಿಳಿಸಿದರು. ನಗರದ ಕೆಂಪಮ್ಮದೇವಿ ದೇವಸ್ಥಾನದಿಂದ ವೀರಶೈವ ಗುರುಕುಲಾನಂದಾಶ್ರಮದವರೆಗೂ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಬಸವಣ್ಣನವರ ಭಾವಚಿತ್ರ, ಪೇಟೆ ಬಸವಣ್ಣರ ಮೆರವಣಿಗೆ ಏರ್ಪಡಿಸಲಾಗಿತ್ತು. ನಂದಿಧ್ವಜ, ಬಸವನಗಾರಿ, ವೀರಗಾಸೆ ಕುಣಿತ, ಕಾಳಿ ಕುಣಿತ, ಹೆಣ್ಣುಮಕ್ಕಳ ವೀರಗಾಸೆ, ಲಿಂಗದವೀರರ ಕುಣಿತ ಪ್ರಮುಖ ಆಕರ್ಷಣೆಯಾಗಿತ್ತು. ದಿಬ್ಬದಹಳ್ಳಿ ಶ್ಯಾಮಸುಂದರ್ ಉಪನ್ಯಾಸ ನೀಡಿದರು. ಮನೋಹರ್ ಸ್ವಾಗತ ಬಯಸಿದರು. ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್ ನ್ಯಾಕೇನಹಳ್ಳಿ, ಹಾಸನ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ನವಿಲೆ ಪರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಡೇನೂರು ಕಾಂತರಾಜು, ಮಾಜಿ ನಗರಸಭೆ ಸದಸ್ಯ ಪ್ರಸನ್ನಕುಮಾರ್, ಯುವ ಘಟಕದ ಅಧ್ಯಕ್ಷ ಲೋಹಿತ್ ಬನ್ನೀಹಳ್ಳಿ, ಸುದರ್ಶನ್, ಸುರೇಶ್, ಇನ್ನಿತರರು ಉಪಸ್ಥಿತರಿದ್ದರು.