ರಾಮನಗರ: 12ನೇ ಶತಮಾನದ ಶ್ರೇಷ್ಠ ದಾರ್ಶನಿಕ, ಸಮಾಜ ಸುಧಾರಕ ಹಾಗೂ ವಚನಕಾರರಾದ ವಿಶ್ವಗುರು ಬಸವಣ್ಣರವರ ಜಯಂತಿಯನ್ನು ಅವರ ಪುತ್ಥಳಿ ಸ್ಥಾಪಿಸುವ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು
ರಾಮನಗರ: 12ನೇ ಶತಮಾನದ ಶ್ರೇಷ್ಠ ದಾರ್ಶನಿಕ, ಸಮಾಜ ಸುಧಾರಕ ಹಾಗೂ ವಚನಕಾರರಾದ ವಿಶ್ವಗುರು ಬಸವಣ್ಣರವರ ಜಯಂತಿಯನ್ನು ಅವರ ಪುತ್ಥಳಿ ಸ್ಥಾಪಿಸುವ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ನಗರಸಭೆ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಗರಸಭೆ ಸದಸ್ಯರು, ವೀರಶೈವ ಸೇರಿದಂತೆ ವಿವಿಧ ಸಮಾಜದ ಮುಖಂಡರು ಬಸವ ಜಯಂತಿ ಆಚರಣೆ ಕುರಿತು ನೀಡಿದ ಸಲಹೆಗಳನ್ನು ಸ್ವೀಕರಿಸಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿರವರು ಮೇ 8ರಂದು ನಗರಸಭೆ ಮುಂಭಾಗದಲ್ಲಿಯೇ ಜಗಜ್ಯೋತಿ ಬಸವಣ್ಣರವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸೋಣ ಎಂದು ತಿಳಿಸಿದರು.ಬಸವ ಜಯಂತಿ ಕಾರ್ಯಕ್ರಮದ ದಿನದಂದೇ ನಗರಸಭೆ ಆವರಣದಲ್ಲಿ ಬಸವಣ್ಣನವರ ಪುತ್ಥಳಿಯನ್ನು ಸಿದ್ದಗಂಗಾ ಮತ್ತು ಸುತ್ತೂರು ಶ್ರೀಗಳಿಂದ ಅನಾವರಣಗೊಳಿಸಲಾಗುವುದು. ಹೀಗಾಗಿ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಇಂದೇ ಚಾಲನೆ ನೀಡಿದ್ದು, ಮೇ 8ರೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠದ ಶ್ರೀಗಳು, ಸುತ್ತೂರು ಶ್ರೀಗಳು, ಬೇವೂರು ಮಠದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಹ್ವಾನಿಸಲಾಗಿದೆ. ನಗರಸಭೆ ಸದಸ್ಯರ ಸಹಕಾರದಲ್ಲಿ ಅರ್ಥಪೂರ್ಣವಾಗಿ ಜಯಂತಿ ಆಚರಿಸುವ ಮೂಲಕ ಅವರಿಗೆ ಗೌರವಿಸುವ ಕೆಲಸ ಮಾಡಲು ತೀರ್ಮಾನಿಸಿದ್ದೇವೆ. ತಮ್ಮೆಲ್ಲರ ಸಹಕಾರದಲ್ಲಿ ಎಲ್ಲ ವರ್ಗದವರನ್ನು ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸೋಣ ಎಂದು ತಿಳಿಸಿದರು.ಬಸವಣ್ಣನವರು ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು. ಅನುಭವ ಮಂಟಪದ ಮೂಲಕ ಜಗತ್ತಿನ ಮೊದಲ ಸಂಸತ್ತಿನ ಪರಿಕಲ್ಪನೆ ನೀಡಿ, ಶರಣರ ವೈಚಾರಿಕ ಚಿಂತನೆಗಳಿಗೆ ವೇದಿಕೆ ಕಲ್ಪಿಸಿದರು. ಅನುಭವ ಮಂಟಪ, ಸಂಸತ್ ಮತ್ತು ಶಾಸನಸಭೆ ತಾಯಿ ಇದ್ದಂತೆ ಎಂದು ಹೇಳಿದರು.
ಬಸವಣ್ಣರವರ ಕ್ರಾಂತಿ ಕಲ್ಪನೆಗೂ ಮೀರಿದ್ದು, ಅವರ ವಚನಗಳು ಇಂದು ಮಾತ್ರವಲ್ಲದೆ ಎಂದೆಂದಿಗೂ ಪ್ರಸ್ತುತವಾಗಿವೆ. ಸೂರ್ಯ ಚಂದ್ರ ಇರುವರೆಗೂ ಅವರ ಚಿಂತನೆಗಳು ಇರುತ್ತವೆ. ಬಸವಣ್ಣರ ತತ್ವಗಳನ್ನು ಅನುಸರಿಸಿ ನಡೆದರೆ ಶ್ರೇಷ್ಠ ಜೀವನ ನಡೆಸಲು ಸಾಧ್ಯ ಎಂದು ಕೆ.ಶೇಷಾದ್ರಿ ತಿಳಿಸಿದರು.ಸರ್ವ ಸಮಾಜದ ನಾಯಕ:
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಸ್.ಯೋಗಾನಂದ ಮಾತನಾಡಿ, ಎಲ್ಲ ವರ್ಗದವರನ್ನು ಪ್ರೀತಿಸಿ ಜೊತೆಯಲ್ಲಿ ಕರೆದೊಯ್ಯುವ ಕೆ.ಶೇಷಾದ್ರಿರವರು ಸರ್ವ ಸಮಾಜದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ನಗರಸಭೆ ಆವರಣದಲ್ಲಿ ಬಸವಣ್ಣರ ಪುತ್ಥಳಿ ಪ್ರತಿಷ್ಠಾಪನೆ ಮಾಡುವ ನಿರ್ಧಾರ ಕೈಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.ಜಗಜ್ಯೋತಿ ಬಸವಣ್ಣನವರನ್ನು ಒಂದು ವರ್ಗಕ್ಕೆ ಸೀಮಿತ ಮಾಡುವುದು ಬೇಡ. ಈ ಕಾರ್ಯಕ್ರಮದಲ್ಲಿ ಎಲ್ಲ ವರ್ಗದ ಜನರು ಪಾಲ್ಗೊಳ್ಳುವಂತೆ ಮಾಡಬೇಕಿದೆ. ಎಲ್ಲರೂ ಒಂದೇ ಎನ್ನುವ ವಾತಾವರಣವನ್ನು ಬಸವ ಜಯಂತಿ ಕಾರ್ಯಕ್ರಮದಲ್ಲಿ ಸೃಷ್ಟಿ ಮಾಡುವಂತೆ ಮನವಿ ಮಾಡಿದರು.
ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ:ರಾ - ಚ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ವೀರಶೈವ ಸಮಾಜದವರು ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪನೆ ಮಾಡುವ ಕುರಿತು ಚರ್ಚೆ ನಡೆಸುತ್ತಿತ್ತು. ಆದರೆ, ಯಾವ ಜಾಗದಲ್ಲಿ ಪುತ್ಥಳಿ ಸ್ಥಾಪನೆ ಮಾಡಬೇಕೆಂಬ ಗೊಂದಲ ಇತ್ತು. ಆದರೀಗ ನಗರಸಭೆ ಆವರಣದಲ್ಲಿ ಬಸವಣ್ಣರ ಪುತ್ಥಳಿ ಸ್ಥಾಪನೆಗೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಸಮಾಜದ ಎಲ್ಲ ವರ್ಗದ ಜನರ ಆಶಯಗಳನ್ನು ಈಡೇರಿಸುವ ಜೊತೆಗೆ ನಗರಸಭೆ ಮೂಲಕ ಮಾದರಿ ಕಾರ್ಯಗಳನ್ನು ಕೆ.ಶೇಷಾದ್ರಿ ಮಾಡುತ್ತಿದ್ದಾರೆ. ಈ ಕಾರ್ಯ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಅವರ ಪ್ರತಿ ಕಾರ್ಯಗಳಿಗೆ ನಾವು ಕೈಜೋಡಿಸುತ್ತೇವೆ ಎಂದು ತಿಳಿಸಿದರು.ವೀರಶೈವ ಸಮಾಜದ ಮುಖಂಡ ಚಂದ್ರಶೇಖರ್ ಮಾತನಾಡಿ, ನಗರಸಭೆ ಅಧ್ಯಕ್ಷರಾಗಿ ಕೆ.ಶೇಷಾದ್ರಿರವರು ಎಲ್ಲ ವರ್ಗದ ಜನರನ್ನು ಜೊತೆಯಲ್ಲಿ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ನಗರಸಭೆ ಸದಸ್ಯರಾದ ಅಜ್ಮತ್ ಉಲ್ಲಾ ಖಾನ್, ವಿಜಯ ಕುಮಾರಿ, ಪಾರ್ವತಮ್ಮ, ನಾಗಮ್ಮ, ಆಯುಕ್ತ ಜಯಣ್ಣ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷ ಪೋಲೀಸ್ ಶಂಕರಪ್ಪ, ಮುಖಂಡರಾದ ಎಂ.ಆರ್.ಶಿವಕುಮಾರ ಸ್ವಾಮಿ, ಗುರುವೇಗೌಡ, ನಾಗರಾಜು, ಎ. ಜೆ. ಸುರೇಶ್, ವೇದಮೂರ್ತಿ, ಚಿಕ್ಕೇನಹಳ್ಳಿನಾಗರಾಜು, ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.30ಕೆಆರ್ ಎಂಎನ್ 4.ಜೆಪಿಜಿ
ರಾಮನಗರ ನಗರಸಭೆ ಸಭಾಂಗಣದಲ್ಲಿ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ಬಸವ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.