ಕನ್ನಡಪ್ರಭ ವಾರ್ತೆ ತುಮಕೂರುಭಾರತದ ಶ್ರೇಷ್ಠ ದಾರ್ಶನಿಕರಾದ 12 ನೆ ಶತಮಾನದ ಬಸವೇಶ್ವರರು ತಮ್ಮ ಕಾಯಕನಿಷ್ಠೆ, ಸಾಮಾಜಿಕ ಕಳಕಳಿ, ಅಸಮಾನತೆಯ ವಿರುದ್ಧ ನಡೆಸಿದ ಹೋರಾಟದ ಮೂಲಕ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ದಾರ್ಶನಿಕರಾಗಿದ್ದಾರೆ ಎಂದು ತುಮಕೂರು ನಗರದ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.

ಅವರು ತುಮಕೂರು ನಗರದ ಗೋಕುಲ ಬಡಾವಣೆಯ ಡಾ. ಶಿವಕುಮಾರಸ್ವಾಮೀಜಿ ಧಾರ್ಮಿಕ ಕೇಂದ್ರದಲ್ಲಿ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರಂತೆಯೇ ಸಿದ್ಧಗಂಗೆ ಶ್ರೀ ಶಿವಕುಮಾರಸ್ವಾಮಿಗಳು ಸಹ ಶರಣರ ಆದರ್ಶಗಳನ್ನು ಆಚರಣೆಗೆ ತಂದು, ಲಕ್ಷಾಂತರ ಬಡಮಕ್ಕಳಿಗೆ ಅನ್ನ, ಅಕ್ಷರ, ಅರಿವು ನೀಡುವ ಮೂಲಕ ಸಾಮಾಜಿಕ, ಆರ್ಥಿಕ, ಧಾರ್ಮಿಕ ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದರು.

ಬಸವಣ್ಣನವರ ಬಗ್ಗೆ ಉಪನ್ಯಾಸ ನೀಡಿದ ಪ್ರೊ. ಜೆ. ಗಂಗಾಧರ್ ಮಾತನಾಡಿ 12ನೇ ಶತಮಾನದ ಬಸವಯುಗ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹುದು. ಬಸವಣ್ಣ ಅಧಿಕಾರಕ್ಕೆ ಅಂಟಿಕೊಳ್ಳದೆ ಸುಸಂಸ್ಕೃತ ಸಮ ಸಮಾಜದ ನಿರ್ಮಾಣಕ್ಕೆ ಹೋರಾಡಿ ಯಶಸ್ಸು ಕಂಡವರು ದಯವೇ ಧರ್ಮದ ಮೂಲವೆಂದು ಸಾರಿದರು. ಸತ್ಯ ಶುದ್ಧ ಕಾಯಕಕ್ಕೆ ಒತ್ತು ನೀಡಿ ವೈಚಾರಿಕತೆಯ ಬುನಾದಿಯ ಮೇಲೆ ಹೊಸಧರ್ಮದ ನಿರ್ಮಾಣ ಮಾಡಿದರು ಎಂದು ತಿಳಿಸಿದರು. ಸಂಶೋಧಕ ಡಾ. ಡಿ.ಎನ್. ಯೋಗೀಶ್ವರಪ್ಪ ಅವರು ಶಿವಕುಮಾರ ಸ್ವಾಮೀಜಿ ಕುರಿತು ಮಾತನಾಡಿ ಶ್ರೀಗಳು 20 ಮತ್ತು 21ನೆಯ ಎರಡೂ ಶತಮಾನಗಳನ್ನು ಕಂಡ ಮಹಾನ್ ಸಂತರು. ಶರಣರ ತತ್ವಾದರ್ಶಗಳನ್ನು ಆಚರಿಸಿ ತೋರಿಸಿದವರು. ಅಲ್ಲಮನ ಜ್ಞಾನ, ಬಸವಣ್ಣನ ಭಕ್ತಿ ಹಾಗೂ ಸಿದ್ಧರಾಮನ ಕಾಯಕವನ್ನು ಅಳವಡಿಸಿಕೊಂಡು ದೇಶಪರ್ಯಟನೆ ಮಾಡಿ ಭಿಕ್ಷಾಟನೆಯಿಂದ ಮಠಕಟ್ಟಿ ಬೆಳೆಸಿ ಜಾತಿ, ಮತ, ಪ್ರಾಂತ್ಯಗಳ ಭೇದವೆಣಿಸದೆ ಲಕ್ಷಾಂತರ ಬಡವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. 1930 ರಿಂದ 2019ರವರೆಗೆ ಶ್ರೀಮಠದ ಬೆಳವಣಿಗೆಗೆ ಶ್ರಮಿಸಿ ಶ್ರೀಮಠವನ್ನು ಉತ್ತುಂಗಕ್ಕೇರಿಸಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ. ಸಿದ್ಧರಾಮಯ್ಯ ಮಾತನಾಡಿದರು. ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ನಿರ್ದೇಶಕ ಜಯವಿಭವಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀಮಠದ ಬಹುಮುಖ ಸೇವೆಯನ್ನು ಪರಿಚಯಿಸಿದರು. ಸಾನ್ನಿಧ್ಯ ವಹಿಸಿದ್ದ ಚಿಕ್ಕಮಸ್ಕಲ್ ಮಠದ ಶ್ರೀ ಬಸವಲಿಂಗಸ್ವಾಮಿಗಳು ಆಶೀರ್ವಚನ ನೀಡಿ ಸನ್ಯಾಸಿಯಾದವರು ಹೇಗಿರಬೇಕೆಂದು ಶ್ರೀಗಳವರು ನಮಗೆ ತಿಳಿಸಿದ್ದಾರೆ. ಮಾರ್ಗದರ್ಶನ ಮಾಡಿದ್ದಾರೆ ಆಚರಿಸಿ ತೋರಿಸಿದ್ದಾರೆ. ನಾವೆಲ್ಲರೂ ಅವರ ಕೃಪೆಯಲ್ಲಿ ಬೆಳೆದವರು ಎಂದು ತಿಳಿಸಿದರು. ನಿವೃತ್ತ ಉಪಪ್ರಾಂಶುಪಾಲರಾದ ಕೆ.ಎಸ್. ಉಮಾಮಹೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯಶಿಕ್ಷಕ ಪಿ.ಆರ್. ಸೋಮಶೇಖರ್ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಎಚ್. ರೇಣುಕಪ್ಪ ವಂದಿಸಿದರು. ಧಾರ್ಮಿಕ ಕೇಂದ್ರದ ವ್ಯವಸ್ಥಾಪಕ ಷಡಕ್ಷರಿ, ಕೆ.ಎಸ್. ಮಹೇಶ್, ಡಾ. ಕೆ.ಎಲ್. ದರ್ಶನ್ ಮೊದಲಾದವರು ಭಾಗವಹಿಸಿದ್ದರು. ನಿವೃತ್ತ ಶಿಕ್ಷಕ ಎಂ. ಗಣೇಶ್ ನಿರೂಪಿಸಿದರು.