ಸಾರಾಂಶ
ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಜಾತಿಯ ಪಿಡುಗನ್ನು ದೂರವಾಗಿಸಿ ಧರ್ಮ, ಧರ್ಮಗಳ ನಡುವೆ ಪ್ರೀತಿಸುವ ಗುಣ ಎಲ್ಲರಲ್ಲೂ ಇರಬೇಕೆಂದು ತಿಳಿಸಿಕೊಟ್ಟಿದ್ದರು ಎಂದು ಕುಪ್ಪೂರು-ತಮ್ಮಡಿಹಳ್ಳಿ ಮಠದ ಡಾ. ಶ್ರೀ ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಜಾತಿಯ ಪಿಡುಗನ್ನು ದೂರವಾಗಿಸಿ ಧರ್ಮ, ಧರ್ಮಗಳ ನಡುವೆ ಪ್ರೀತಿಸುವ ಗುಣ ಎಲ್ಲರಲ್ಲೂ ಇರಬೇಕೆಂದು ತಿಳಿಸಿಕೊಟ್ಟಿದ್ದರು ಎಂದು ಕುಪ್ಪೂರು-ತಮ್ಮಡಿಹಳ್ಳಿ ಮಠದ ಡಾ. ಶ್ರೀ ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ನಗರದ ಶ್ರೀ ಗುರುಕುಲಾನಂದಾಶ್ರಮ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯತ ಸಂಘಟನೆ, ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿ ಜಾತಿ, ಧರ್ಮದ ಕಟ್ಟುಪಾಡುಗಳನ್ನು ಕಿತ್ತೊಗೆದು ಪ್ರತಿಭಟನೆಗೆ ಮುನ್ನುಡಿ ಹಾಕಿದ್ದವರು. ವರ್ಣಭೇದ, ಮೇಲು-ಕೀಳು, ಬಡವ-ಬಲ್ಲಿದರೆಂಬ ತಾರತಮ್ಯಗಳನ್ನು ಸಂಪೂರ್ಣವಾಗಿ ನಿಮೂರ್ಲನೆ ಮಾಡಲು ವಚನಗಳನ್ನು ರಚಿಸಿ ವೈಚಾರಿಕ ಕ್ರಾಂತಿ ಮಾಡಿದ್ದರು. ಮೌಢ್ಯತೆ, ಅಜ್ಞಾನ, ಅಂಧಕಾರ, ಕಂದಾಚಾರಗಳನ್ನು ಹೋಗಲಾಡಿಸಿ ಸಮಾಜದಲ್ಲಿ ಅರಿವಿನ ಕ್ರಾಂತಿಯನ್ನು ಮೂಡಿಸಿದ್ದರು ಎಂದರು. ನಗರದ ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಇಷ್ಟಲಿಂಗವು ಸಮಾನತೆ ಹಾಗೂ ಶ್ರದ್ಧೆಯ ಸಂಕೇತವಾಗಿದೆ. ಬಸವಾದಿ ಶರಣರ ತತ್ವ, ಚಿಂತನೆಗಳು ಹಿಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿವೆ. ಭ್ರಷ್ಟಾಚಾರ, ಅನೈತಿಕತೆ, ಜಾತಿ, ಅಂತಸ್ತು, ಹೊಡೆದಾಟ, ಬಡಿದಾಟಗಳಿಂದ ಕಲುಷಿತಗೊಳ್ಳುತ್ತಿರುವ ಸಮಾಜವನ್ನು ಶಿವಶರಣರ ವಚನಗಳ ಮೂಲಕ ಆರೋಗ್ಯಕರ ಸಮಾಜಕ್ಕಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದರು. ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಅನುಭವ ಮಂಟಪ ಕಟ್ಟಿ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದರು. ಈ ವಚನಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿವೆ. ವೀರಶೈವ ಧರ್ಮದಲ್ಲಿ ಗಂಡು, ಹೆಣ್ಣಿಗೆ ಶಿವನೇ ಮೂಲ, ಇಷ್ಟಲಿಂಗ ಪೂಜೆಯನ್ನು ಶ್ರದ್ಧೆ, ಏಕಾಗ್ರತೆಯಿಂದ ಮನಸ್ಸಿನಲ್ಲಿ ಮಂತ್ರ ಪಠಣೆ ಮಾಡುತ್ತಾ ಪೂಜಿಸಬೇಕು ಹಾಗೂ ಬಸವಾದಿ ಶರಣರ ವಚನಗಳನ್ನು ಮಕ್ಕಳಿಗೆ ಕಲಿಸುವ ಕೆಲಸವಾಗಬೇಕಿದೆ ಎಂದರು. ಸಮಾಜ ಸೇವಕ, ಕಾಂಗ್ರೆಸ್ ಮುಖಂಡ ಸಿ.ಬಿ. ಶಶಿಧರ್ ಮಾತನಾಡಿ, ನಮ್ಮ ಕಾಲ ಕಳೆದಂತೆ ವಿಭೂತಿ ಸಂಸ್ಕೃತಿ, ವಸ್ತ್ರ ಸಂಸ್ಕೃತಿ ಮರೆಯಾಗುತ್ತಿದೆ. ಶಿವ ಎಂಬ ನಾಮಸ್ಮರಣೆ ಇಲ್ಲವಾಗುತ್ತಿದೆ. ನಮ್ಮದು ಧ್ವಂಸ ಮಾಡುವ ಸಂಸ್ಕೃತಿ ಅಲ್ಲ ಶರಣ ಸಂಸ್ಕೃತಿಯಾಗಿದ್ದು ಪ್ರತಿಯೊಬ್ಬರು ಶಿವಶರಣರ ಹಾದಿಯಲ್ಲಿ ನಡೆದು ಸಮಾಜ ಸ್ವಾಸ್ಥ್ಯವನ್ನು ಕಾಪಾಡಬೇಕೆಂದರು. ಈ ಸಂದರ್ಭದಲ್ಲಿ ಯುವಜನೋತ್ಸವದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಶೇಖರ್ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು. ಮಹೋತ್ಸವದಲ್ಲಿ ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಶಾಸಕ ಕೆ.ಷಡಕ್ಷರಿ, ಮಾಜಿ ಸಚಿವ ಬಿ.ಸಿ. ನಾಗೇಶ್, ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್, ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ವೀರಶೈವ ಲಿಂಗಾಯತ ಸಂಘಟನೆಯ ಅಧ್ಯಕ್ಷ ಸಿ.ಎಸ್. ರೇಣುಕಾರಾಧ್ಯ, ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್, ಯುವ ಮುಖಂಡ ನಿಖಿಲ್‌ರಾಜಣ್ಣ, ರಾಜ್ಯ ಬಿಜೆಪಿ ವಕ್ತಾರ ಎಚ್.ಎಂ.ಚಂದ್ರಶೇಖರ್, ಸಂಘಟನೆ ಉಪಾಧ್ಯಕ್ಷ ಎಸ್.ಆರ್. ರಘುನಂದನ್, ಕಾರ್ಯದರ್ಶಿ ಕುಮಾರಸ್ವಾಮಿ, ದಯಾನಂದ್, ಶ್ಯಾಮಸುಂದರ್, ಯುವ ವೇದಿಕೆಯ ಸುದರ್ಶನ್, ಲೋಹಿತ್ ಮತ್ತಿತರರು ಭಾಗವಹಿಸಿದ್ದರು.