ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ ಬಸವಣ್ಣನವರು: ಡಾ.ಪ್ರಭಾಕರ

| Published : May 11 2024, 12:31 AM IST

ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ ಬಸವಣ್ಣನವರು: ಡಾ.ಪ್ರಭಾಕರ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಬಸವ ಸಮಿತಿಯು ಬಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಕಾಯಕರತ್ನ ಪ್ರಶಸ್ತಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿಇಂದು ವಿಶ್ವದೆಲ್ಲೆಡೆ ಸಂಭ್ರಮದಿಂದ ಬಸವಣ್ಣವರ ಜಯಂತಿ ಆಚರಿಸಲಾಗುತ್ತಿದೆ. ಬಸವಣ್ಣನವರು ಈ ಜಗತ್ತು ಕಂಡ ಅಪ್ರತಿಮ ದಾರ್ಶನಿಕರು, ಸಮಾಜ ಸುಧಾರಕರು. ಮಾತ್ರವಲ್ಲ ಹೊಸ ಸಮಾಜದ ನಿರ್ಮಾಪಕರು ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ, ಮಾಜಿ ಸಂಸದ ಡಾ.ಪ್ರಭಾಕರ ಕೋರೆ ಹೇಳಿದರು.

ಬೆಂಗಳೂರಿನ ಬಸವ ಸಮಿತಿಯು ಬಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವ ಜಯಂತಿಯ ಭವ್ಯ ಸಮಾರಂಭದಲ್ಲಿ ಕಾಯಕರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, 850 ವರ್ಷಗಳ ಹಿಂದೆ ಅವರು ಕೈಗೊಂಡ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಶೈಕ್ಷಣಿಕ ಕ್ರಾಂತಿ ಇಂದಿಗೂ ಇಡೀ ಜಗತ್ತಿಗೆ ಆದರ್ಶಪ್ರಾಯವಾಗಿವೆ. ಬಸವಣ್ಣನವರ ತತ್ವ ಸಾಹಿತ್ಯ ಎಲ್ಲಾ ಧರ್ಮದವರಿಗೂ ಬೇಕು. ನಿಜವಾದ ಅರ್ಥದಲ್ಲಿ ಬಸವಣ್ಣನವರು ನಮ್ಮ ಸಾಂಸ್ಕೃತಿಕ ನಾಯಕ ಆಗಿದ್ದಾರೆ ಎಂದು ಶ್ಲಾಘಿಸಿದರು.

ಇಂದು ಅರವಿಂದ ಜತ್ತಿಯವರ ಸಾರಥ್ಯದಲ್ಲಿ ಬಸವ ಸಮಿತಿಯು ಜಗತ್ತಿನ ಹಲವಾರು ದೇಶಗಳಲ್ಲಿ ಬಸವಣ್ಣನವರ ಸಂದೇಶವನ್ನು ಮನೆ ಮನೆಗಳಿಗೆ ತಲುಪಿಸುವ ಮಹತ್ತರ ಕೆಲಸ ಮಾಡುತ್ತಿದೆ. ಅದಕ್ಕಾಗಿ ಅರವಿಂದ ಜತ್ತಿಯವರಿಗೆ ವೈಯಕ್ತಿಕವಾಗಿ ಹಾಗೂ ಈ ನಾಡಿನ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಡಾ.ಪ್ರಭಾಕರ ಕೋರೆ ಅವರು ಕಳೆದ 40 ವರ್ಷಗಳಿಂದ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ, ಸಹಕಾರಿ, ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆ ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿತು.

ಈ ಸಂದರ್ಭದಲ್ಲಿ ಬೇಲಿಮಠದ ಶಿವರುದ್ರ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ, ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ ಅವರು ಡಾ.ಕೋರೆಯವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.

----------------- ನಮ್ಮ ಸಂಸ್ಕೃತಿ ಉಳಿದರೇ ನಾವು ಉಳಿಯುತ್ತೇವೆ. ಹೀಗಾಗಿ ಬಸವ ಜಯಂತಿಯ ಈ ದಿನ ನಮ್ಮ ಸಾಂಸ್ಕೃತಿಕ ನಾಯಕರಾದ ಬಸವಣ್ಣವರ ಬದುಕಿನ ಆದರ್ಶಗಳನ್ನು ಪಾಲಿಸುವ ಸಂಕಲ್ಪ ನಮ್ಮದಾಗಬೇಕು. ಕಾಯಕವೇ ಕೈಲಾಸದಂತಹ ಕಾಯಕದ ಹೆಸರಿನ ಪ್ರಶಸ್ತಿ ನೀಡಿರುವುದು ನನಗೆ ಹಾಗೂ ನಮ್ಮ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಗೆ ನೀಡಿದ ಗೌರವವೆಂದು ನಾನು ಭಾವಿಸುತ್ತೇನೆ.

-ಡಾ.ಪ್ರಭಾಕರ ಕೋರೆ, ಕೆಎಲ್‌ಇ ಕಾರ್ಯಾಧ್ಯಕ್ಷರು.