ಲಿಂಗ ಪೂಜೆ ಒಪ್ಪಿಕೊಂಡರೆ ಬಸವಣ್ಣ ಅರ್ಥವಾಗುತ್ತಾನೆ-ಮೂರುಸಾವಿರಮಠದ ಸ್ವಾಮೀಜಿ

| Published : Mar 19 2024, 12:48 AM IST

ಲಿಂಗ ಪೂಜೆ ಒಪ್ಪಿಕೊಂಡರೆ ಬಸವಣ್ಣ ಅರ್ಥವಾಗುತ್ತಾನೆ-ಮೂರುಸಾವಿರಮಠದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮ ಶ್ರದ್ಧೆಯನ್ನು ಕುಂದಿಸುವ ವೈಚಾರಿಕತೆ ಈಗ ಅಗತ್ಯವಿಲ್ಲ, ಜಗಜ್ಯೋತಿ ಬಸವಣ್ಣನವರನ್ನು ಒಪ್ಪಿಕೊಳ್ಳುವವರೆಲ್ಲ ಲಿಂಗ ಪೂಜೆಯನ್ನು ಒಪ್ಪಿಕೊಂಡರೆ ನಿಜವಾದ ಬಸವಣ್ಣ ನಮಗೆ ಅರ್ಥವಾಗುತ್ತಾನೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಡಾ. ಗುರುಸಿದ್ಧರಾಜಯೋಗಿಂದ್ರ ಮಹಾಸ್ವಾಮಿಗಳು ತಿಳಿಸಿದರು.

ಹಾನಗಲ್ಲ: ಧರ್ಮ ಶ್ರದ್ಧೆಯನ್ನು ಕುಂದಿಸುವ ವೈಚಾರಿಕತೆ ಈಗ ಅಗತ್ಯವಿಲ್ಲ, ಜಗಜ್ಯೋತಿ ಬಸವಣ್ಣನವರನ್ನು ಒಪ್ಪಿಕೊಳ್ಳುವವರೆಲ್ಲ ಲಿಂಗ ಪೂಜೆಯನ್ನು ಒಪ್ಪಿಕೊಂಡರೆ ನಿಜವಾದ ಬಸವಣ್ಣ ನಮಗೆ ಅರ್ಥವಾಗುತ್ತಾನೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು.ಹಾನಗಲ್ಲ ತಾಲೂಕಿನ ಸಾಂವಸಗಿಯ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಧರ್ಮ ಸಭೆಯ ಸಾನಿಧ್ಯವಹಿಸಿ ಸಾಂವಸಗಿ ಗ್ರಾಮಸ್ಥರ ೨೫ನೇ ತುಲಾಭಾರ ಸ್ವೀಕರಿಸಿ ಮಾತನಾಡಿದ ಅವರು, ಭಕ್ತಿ ಇದ್ದರೆ ಧರ್ಮ ಇರುತ್ತದೆ. ಆದರೆ ವೈಚಾರಿಕತೆಯ ಹೆಸರಿನಲ್ಲಿ ಧರ್ಮದ ಮೂಲಾರ್ಥವೇ ಬದಲಾಗುತ್ತಿದೆ. ಲಿಂಗ ಪೂಜೆ ಕೇವಲ ಧರ್ಮ ಮಾತ್ರವಲ್ಲ. ಅದನ್ನು ಮೀರಿದ ಮಾನವನ ಶ್ರದ್ಧೆ, ಸಂಸ್ಕಾರ, ಸಾಧನೆಯ ಒಂದು ದಿವ್ಯ ಶಕ್ತಿ. ಬಸವಣ್ಣ ಎಲ್ಲರಿಗೂ ಬೇಕು. ಹತ್ತು ಹಲವು ಸಂದರ್ಭಗಳಲ್ಲಿ ಬಸವಣ್ಣ ಚರ್ಚೆಯ ವಸ್ತುವಾಗುತ್ತಾನೆ. ವಚನಗಳ ಆಳ ಅಧ್ಯಯನದ ಮೂಲಕ ಬಸವಣ್ಣ ಇನ್ನಷ್ಟು ಅರ್ಥವಾಗುತ್ತಾನೆ. ಆದರೆ ಬಸವಣ್ಣನನ್ನು ಒಪ್ಪಿಕೊಳ್ಳುವವರು ಲಿಂಗಧಾರಣೆ, ಲಿಂಗಪೂಜೆಯನ್ನೂ ಒಪ್ಪಿಕೊಳ್ಳಬೇಕು. ಆರೇಳು ದಶಕಗಳಿಂದ ಲಿಂಗಧಾರಣೆ ಮಾಡಿಕೊಳ್ಳುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಲಿಂಗ ಪೂಜೆಯ ಅರಿವು ಮೂಡಿಸುವ ಅಗತ್ಯವೂ ಇದೆ. ಸಾಂವಸಗಿ ಗ್ರಾಮದಲ್ಲಿ ಹಲವು ದಶಕಗಳಿಂದ ಈ ಜಾತ್ರಾ ಮಹೋತ್ಸವ ಭಕ್ತಿ ಶ್ರದ್ಧೆಯ ಹಬ್ಬವಾಗಿ ಅರ್ಥಪೂರ್ಣ ಆಚರಣೆಗೆ ಹೆಸರಾಗಿದೆ. ಹಲವು ಸಂದರ್ಭದಲ್ಲಿ ಭಕ್ತರ ತೃಪ್ತಿಗಾಗಿ ಗುರುಗಳು ಇಂಥ ಸಮಾರಂಭದಲ್ಲಿ ತಪ್ಪದೇ ಪಾಲ್ಗೊಳ್ಳುವ ಅನಿವಾರ್ಯತೆ ಇದೆ. ಧರ್ಮಕ್ಕೆ ಶಕ್ತಿ ಇದೆ. ಅದನ್ನು ಪ್ರತಿಯೊಬ್ಬರು ಪಾಲಿಸುವಂತಾದರೆ ಸತ್ಸಮಾಜ ನಿರ್ಮಾಣ ಸಾಧ್ಯ ಎಂದರು.

ಶಿಗ್ಗಾವಿಯ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ನಾಗರಾಜ ದ್ಯಾಮನಕೊಪ್ಪ ಮುಖ್ಯ ಅತಿಥಿಯಾಗಿ ಮಾತನಾಡಿ, ನಡೆ ನುಡಿಯ ಸಮನ್ವಯದ ಪಾಠ ಈಗ ಬೇಕಾಗಿದೆ. ಅಹಂಕಾರ ನಿರಶನವಾಗಿ ಧರ್ಮದ ರಾಜಮಾರ್ಗ ನಿರ್ಮಾಣವಾಗಬೇಕು. ಬದುಕಿನ ದಾರಿಯಲ್ಲಿ ಸಾಧನೆ ಅತಿ ಮುಖ್ಯ. ಶಾಶ್ವತ ಸ್ಮರಣೀಯ ಬದುಕಿನ ಸತ್ಯಗಳನ್ನು ಅರಿತು ಬಾಳುವುದೇ ನಿಜವಾದ ಸ್ವರ್ಗ ಸುಖ ಎಂದರು.

ಹೋತನಹಳ್ಳಿ ಸಿಂದಗಿ ಮಠದ ಮಠಾಧೀಶರಾದ ಶಂಭುಲಿಂಗಶಿವಾಚಾರ್ಯರು ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಜವಾಬ್ದಾರಿಯನ್ನು ಪಾಲಕರು ವಹಿಸಿಕೊಳ್ಳಬೇಕು. ಭವಿಷ್ಯದ ಬದುಕಿಗಾಗಿ ಮಕ್ಕಳನ್ನು ತುಂಬ ಎಚ್ಚರಿಕೆಯಿಂದ ಬೆಳೆಸಬೇಕಾದ ಕಾಲದಲ್ಲಿ ನಾವಿದ್ದೇವೆ ಎಂಬ ಅರಿವಿರಲಿ. ದಾನ ಧರ್ಮ ಪರೋಪಕಾರಗಳ ಮೂಲಕ ಸಮಾಜದಲ್ಲಿ ಸತ್ಸೀಲರಾಗಿ ಬದುಕಲು ಮುಂದಾಗಿರಿ ಎಂದರು.

ವೀರಭದ್ರೇಶ್ವರ ಮಂದಿರದ ಪ್ರಧಾನ ಅರ್ಚಕ ವೇದಮೂರ್ತಿ ಸಂಗಯ್ಯಶಾಸ್ತ್ರಿ ಹಿರೇಮಠ ಮಾತನಾಡಿದರು, ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಆಶಯ ನುಡಿ ನುಡಿದರು. ಶಿಗ್ಗಾವಿ ಎನ್.ಬಿ. ಬೆಂತೂರ, ಮುಖ್ಯೋಪಾಧ್ಯಾಯ ಎಂ.ಬಿ. ಹಳೇಮನಿ, ರಾಜಶೇಖರ ಹಲಸೂರ ಅತಿಥಿಗಳಾಗಿದ್ದರು. ಈರಣ್ಣ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು. ಇಂದ್ರಯ್ಯ ಹಿರೇಮಠ, ದಿಂಗಾಲಯ್ಯ ಹಿರೇಮಠ ಸಂಗೀತ ಸೇವೆ ಸಲ್ಲಿಸಿದರು.

ತುಲಾಭಾರ: ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳಿಗೆ ಮೊಟ್ಟ ಮೊದಲ ತುಲಾಭಾರವನ್ನು ಸಾಂವಸಗಿಯಲ್ಲಿಯೇ ನೀಡಲಾಗಿತ್ತು. ಈಗ ಸಾಂವಸಗಿಯಲ್ಲಿಯೇ ೨೫ನೇ ತುಲಾಭಾರ ನಡೆದಿದ್ದು, ಈ ತುಲಾಭಾರವನ್ನು ವೇದಮೂರ್ತಿ ಸಂಗಯ್ಯಶಾಸ್ತ್ರಿ ಹಿರೇಮಠ ಕುಟುಂಬದವರು ಸಲ್ಲಿಸಿದರು.