ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗವಿಶ್ವಗುರು ಬಸವಣ್ಣನವರು ಶೋಷಿತ ಸಮುದಾಯಗಳ ಆಲೋಚನೆಗೆ ದಿಕ್ಸೂಚಿಯಾಗಿದ್ದು, ಚಿತ್ರದುರ್ಗದಲ್ಲಿ ವೀರಶೈವ ಲಿಂಗಾಯಿತರೇ ಬಸವಣ್ಣಗೆ ಘೋರ ಅವಮಾನ ಮಾಡುವ ಮೂಲಕ ಬಸವ ತತ್ವ ಸಿದ್ಧಾಂತಗಳಿಗೆ ಅಪಚಾರ ವೆಸಗಿದ್ದಾರೆಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಛಲವಾದಿ ಸಮಾಜದ ಮುಖಂಡ ಎಚ್.ಸಿ.ನಿರಂಜನಮೂರ್ತಿ ಆರೋಪಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯಿತ ಯುವ ವೇದಿಕೆ ಕೆಲ ಪದಾಧಿಕಾರಿಗಳು ಶನಿವಾರ ಮಧ್ಯರಾತ್ರಿ ಒನಕೆ ಓಬವ್ವ ವೃತ್ತದಲ್ಲಿ ಬಸವಣ್ಣನ ಪುತ್ಥಳಿ ಸ್ಥಾಪನೆಗೆ ಮುಂದಾಗಿದ್ದಾರೆ. ಇದು ತರವಲ್ಲದ ನಡವಳಿಕೆಯಾಗಿದೆ. ಹಾಲಿ ಒನಕೆ ಓಬವ್ವ ಪ್ರತಿಮೆ ಇರುವ ಜಾಗದಲ್ಲಿ ಮತ್ತೊಂದು ಪುತ್ಥಳಿ ಸ್ಥಾಪಿಸುವ ಅಗತ್ಯವಾದರೂ ಏಕೆ. ಬಸವಣ್ಣನಂತಹ ವಿಶ್ವ ಮಾನವನ ಪುತ್ಥಳಿಯನ್ನು ಕಳ್ಳತನದಲ್ಲಿ ಪ್ರತಿಷ್ಠಾಪನೆ ಮಾಡುವ ಸಾಹಸ ಅರ್ಥವಾಗದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಬಸವಣ್ಣ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲ ಸಮುದಾಗಳ ಆಸ್ತಿ, ಅದರಲ್ಲೂ ಶೋಷಿತ ಸಮುದಾಯಗಳ ಏಳಿಗೆ ಹಾಗೂ ಸಮಾನತೆಗೆಗಾ ಶ್ರಮಿಸಿದವರು. ಅಂತಹರ ಪ್ರತಿಮೆ ಸ್ಥಾಪಿಸಲು ನಮ್ಮಗಳ ಪೂರ್ಣ ಬೆಂಬಲವಿದೆ. ಇದಕ್ಕೆ ವಿಶಾಲವಾದ ಜಾಗ ಹುಡುಕಿ ಪ್ರತಿಮೆ ಸ್ಥಾಪಿಸೋಣ. ಆದರೆ ಪುಟ್ಟ ಗೊಂಬೆಯಾಕಾರದ ಪುತ್ಥಳಿಯನ್ನು ಒನಕೆ ಓಬವ್ವ ವೃತ್ತದಲ್ಲಿರುವ ಹೈಮಾಸ್ಟ್ ದೀಪದ ಕೆಳಭಾಗದಲ್ಲಿ ಪ್ರತಿಷ್ಠಾಪನೆಗೆ ಯತ್ನಿಸಲಾಗಿದೆ. ಇದು ಬಸವಣ್ಣನವರಿಗೆ ಮಾಡಿದ ಅವಮಾನವಲ್ಲದೇ ಬೇರೇನೂ ಇಲ್ಲ. ನಗರಸಭೆ ಜಾಗದಲ್ಲಿ ಯಾರೂ ರಾತ್ರೋ ರಾತ್ರಿ ಗುಡಿಸಲು ಹಾಕಿ ಜಾಗ ಕಬ್ಜಾ ಮಾಡಿಕೊಳ್ಳಲು ಯತ್ನಿಸುವ ಮಾದರಿಯಲ್ಲಿಯೇ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೆ ಒನಕೆ ಓಬವ್ವ ಪ್ರತಿಮೆ ಜಾಗದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲವೆಂದರು.
ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಒನಕೆ ಓಬವ್ವ ವೃತ್ತದಲ್ಲಿ ರಾತ್ರೋರಾತ್ರಿ ಕೆಲವು ಕಿಡಿಗೇಡಿಗಳು ವಿಶ್ವಗುರು ಬಸವಣ್ಣನವರ ಪ್ರತಿಮೆ ಇರಿಸುವ ಅಗತ್ಯವಾದರೂ ಏನಿತ್ತು. ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರಿಗೆ ವೀರಶೈವ-ಲಿಂಗಾಯಿತರೆ ಅವಮಾನ ಮಾಡುವಂತೆ ಕಾಣುತ್ತಿದೆ. 450 ವರ್ಷಗಳ ಇತಿಹಾಸವಿರುವ ಕೆಚ್ಚೆದೆಯ ವೀರವನಿತೆ ಒನಕೆ ಓಬವ್ವಳ ನಾಡಿನಲ್ಲಿ ಇಂತಹ ಹೇಯ ಕೃತ್ಯ ಬೇಡ ಎಂದು ಕಿಡಿಕಾರಿದರು.ಶಾರದಾ ಬ್ರಾಸ್‌ಬ್ಯಾಂಡ್‌ನ ಗುರುಮೂರ್ತಿ ಮಾತನಾಡಿ, ಕಾನ್ವೆಂಟ್ ಶಾಲೆ ಬಳಿಯಿರುವ ತಿಪ್ಪರ್ಜಿ ಸರ್ಕಲ್‌ಗೆ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಅಲ್ಲಿ ಬಸವಣ್ಣನವರ ಪ್ರತಿಮೆ ಕೂರಿಸಲಿ. ಹೇಗೂ ವೃತ್ತ ವಿಶಾಲವಾಗಿದೆ ಎಂದರು. ಛಲವಾದಿ ಜನಾಂಗದ ಜಿಲ್ಲಾಧ್ಯಕ್ಷ ಶೇಷಪ್ಪ, ಎಚ್.ಅಣ್ಣಪ್ಪಸ್ವಾಮಿ, ಪ್ರಸನ್ನಕುಮಾರ್, ಧನಂಜಯ, ರವೀಂದ್ರ, ಜೈರಾಂ, ನವೀನ್ ಉಪಸ್ಥಿತರಿದ್ದರು.
ವೀರಶೈವರ ಸಭೆ:ಏತನಮಧ್ಯೆ ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಬಸವ ಪ್ರತಿಮೆ ಸ್ಥಾಪನೆ ಸಂಬಂಧಿಸಿದಂತೆ ವೀರಶೈವ ಲಿಂಗಾಯಿತ ಸಮಾಜ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ನಾಯಕರು ರಾತ್ರೋರಾತ್ರಿ ಬಸವ ಪುತ್ಥಳಿ ಸ್ಥಾಪನೆಗೆ ಮುಂದಾದ ಯುವಕರ ನಡೆ ಖಂಡಿಸಿದ್ದಾರೆ. ಯುವಕರು ಮಾಡುವ ಕೆಲಸಕ್ಕೆ ಸಮುದಾಯದ ಜನರನ್ನು ಕಟಕಟೆಗೆ ನಿಲ್ಲಿಸಿದಂತಾಗುತ್ತದೆ. ಯಾರೂ ಕೂಡಾ ಇಂತಹ ಪ್ರಯತ್ನ ಮಾಡಬಾರದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹುಲಿಕುಂಟೆ ಜಿತೇಂದ್ರ, ಕಾಪಿಪುಡಿ ಪರಮೇಶ್, ಎಂ.ಶಶಿಧರಬಾಬು ಸೇರಿ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆ ನಂತರ ಮಾತನಾಡಿದ ವೀರಶೈವ ಲಿಂಗಾಯಿತ ಯುವ ವೇದಿಕೆ ಅಧ್ಯಕ್ಷ ಮಂಜುನಾಥ್, ಒನಕೆ ಓಬವ್ವ ಪ್ರತಿಮೆಗೂ ಬಸವ ಪುತ್ಥಳಿ ಸ್ಥಾಪನೆಗೆ ಮುಂದಾದ ಸ್ಥಳಕ್ಕೂ ಸಂಬಂಧವಿಲ್ಲ. ಅದೂ ದೂರದಲ್ಲಿದ್ದು, ಪೊಲೀಸರು ಬಂದು ತಡೆದಾಗ ನಾವು ಸುಮ್ಮನಾದೆವು. ಒನಕೆ ಓಬವ್ವ, ಮದಕರಿನಾಯಕರ ಮೇಲೆ ನಮಗೂ ಗೌರವವಿದೆ ಎಂದರು. ಶೀಘ್ರ ಮತ್ತೊಂದು ಸಭೆ ನಡೆಸಿ ಪುತ್ಥಳಿ ಸ್ಥಾಪನೆ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದರು.