ಬಸವಣ್ಣ ಸಂಸತ್‌ ವ್ಯವಸ್ಥೆಯ ಮೂಲಪುರುಷ

| Published : Oct 11 2024, 11:47 PM IST

ಬಸವಣ್ಣ ಸಂಸತ್‌ ವ್ಯವಸ್ಥೆಯ ಮೂಲಪುರುಷ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಭಾರತದ ಎಲ್ಲ ಗ್ರಂಥಗಳಿಗಿಂತ ಶ್ರೇಷ್ಠ ಎಂದು ಸದ್ಯ ಅನೇಕ ನಾಯಕರು ಹೇಳಿಕೆ ನೀಡುತ್ತಿದ್ದಾರೆ

ಗದಗ: 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಅದಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವ ಹಾಗೂ ಸಂಸತ್ ವ್ಯವಸ್ಥೆಯ ಕಲ್ಪನೆ ಹುಟ್ಟು ಹಾಕಿದ್ದ ವಿಶ್ವಗುರು ಬಸವೇಶ್ವರ ಸಂಸತ್ ವ್ಯವಸ್ಥೆಯ ಮೂಲಪುರುಷ ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.

ಅವರು ಇತ್ತೀಚೆಗೆ ನಗರದ ತೋಂಟದ ಸಿದ್ಧೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಂಸದೀಯ ವ್ಯವಹಾರಗಳ ಇಲಾಖೆ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಗದಗ, ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ಜರುಗಿದ ಜಿಲ್ಲಾಮಟ್ಟದ ಯುವ ಅಣಕು ಸಂಸತ್ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದ ಭವಿಷ್ಯವು ವರ್ಗ ಕೊಠಡಿಯಲ್ಲಿ ನಿರ್ಮಾಣವಾಗುತ್ತದೆ ಎಂಬ ಮಾತಿನಂತೆ ವಿದ್ಯಾರ್ಥಿಗಳು ಶಾಲಾ-ಕಾಲೇಜು ಹಂತದಲ್ಲಿಯೇ ನಮ್ಮ ಸಂಸತ್, ಪ್ರಜಾಪ್ರಭುತ್ವ ಹಾಗೂ ಆಡಳಿತದ ಬಗ್ಗೆ ಜಾಗೃತಿ ಹೊಂದಿರಬೇಕು. ಸಂವಿಧಾನ ಭಾರತದ ಎಲ್ಲ ಗ್ರಂಥಗಳಿಗಿಂತ ಶ್ರೇಷ್ಠ ಎಂದು ಸದ್ಯ ಅನೇಕ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಆದರೆ ಲಿಂ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಈ ಮಾತನ್ನು ಹಲವು ದಶಕಗಳ ಹಿಂದೆಯೇ ನುಡಿದಿದ್ದರು.12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ್ದ ಅನುಭವ ಮಂಟಪ ಪಾರ್ಲಿಮೆಂಟಿನ ಮೂಲವಾಗಿದ್ದು, ಬಸವಾದಿ ಶರಣರು ರಚಿಸಿದ ವಚನಗಳಿಗೆ ಕಾನೂನಾಗಿ ಪರಿವರ್ತನೆ ಆಗುವ ಶಕ್ತಿ ಇತ್ತು.ಆದರೆ ಕಾನೂನು ರಚಿಸಲು ಈಗಿನಂತೆ ಸಂವಿಧಾನ ಇರಲಿಲ್ಲ. 530 ಸಂಸ್ಥಾನಗಳು ಇದ್ದವು. ಹೀಗಾಗಿ ವಚನಗಳು ಕಾನೂನು ಆಗಲಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಗದಗ ಪಪೂ ಇಲಾಖೆ ಉಪನಿರ್ದೇಶಕ ಸಿದ್ಧಲಿಂಗ ಮಸನಾಯಿಕ ಮಾತನಾಡಿ, ಸಂವಿಧಾನ ಹಾಗೂ ಸಂಸತ್ತಿನ ಕುರಿತು ಇಂದಿನ ವಿದ್ಯಾರ್ಥಿಗಳಿಗೆ ಅರಿವು ಅನಿವಾರ್ಯವಾಗಿದ್ದು, ಇಂತಹ ಅಣಕು ಸಂಸತ್ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಇದರ ಕುರಿತು ಮಾಹಿತಿ ಹಾಗೂ ಕುತೂಹಲ ಹುಟ್ಟುಹಾಕುತ್ತವೆ ಎಂದರು.

ತೀರ್ಪುಗಾರರಾಗಿ ಪಿ.ಜಿ. ಜೋಗಣ್ಣವರ ಮುಂತಾದವರು ಮಾತನಾಡಿದರು. ಸರಿಗಮಪ ಖ್ಯಾತಿಯ ಕಾಲೇಜಿನ ವಿದ್ಯಾರ್ಥಿನಿ ನಯನಾ ಅಳವಂಡಿ ಪ್ರಾರ್ಥಿಸಿದರು. ಶ್ರೀದೇವಿ ಹೊನ್ನಳ್ಳಿ ಪ್ರಥಮ, ಪೂರ್ವಿ ಜೋಶಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ತೋಂಟದ ಸಿದ್ಧೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ವೈ.ಎಸ್. ಮತ್ತೂರ ಸ್ವಾಗತಿಸಿದರು. ವೇದಿಕೆ ಮೇಲೆ ಅಮರೇಶ ಅಂಗಡಿ, ಎಂ.ಎಸ್.ಮುಲ್ಲಾ, ಜಿ.ಎಂ.ಹಕಾರಿ, ಬಿ.ಕೆ. ಪೂಜಾರ, ಜಿ.ಎಸ್.ಶಿರಸಿ, ಎಚ್.ಎಸ್. ಕಿಂದ್ರಿ, ಎ.ಎಂ. ಅಂಗಡಿ ಉಪಸ್ಥಿತರಿದ್ದರು. ಕೆ.ಎಸ್. ಮಲ್ಲಾಪೂರ ನಿರೂಪಿಸಿದರು. ಅಮಿತ್ ಬುವಾ ವಂದಿಸಿದರು.