ಸಾರಾಂಶ
ಚಿಕ್ಕಮಗಳೂರು, ಕಾಯಕವೇ ಕೈಲಾಸ ಎಂಬ ಘೋಷ ವಾಕ್ಯದೊಂದಿಗೆ ಬಸವಣ್ಣನವರು ಎಲ್ಲಾ ರೀತಿ ಸೇವೆಯ ಕಸುಬು ದಾರರನ್ನು ಗೌರವಿಸುತ್ತಿದ್ದರು. ಅಂದು ಕನ್ನಡದಲ್ಲಿ ರಚಿಸಿದ ವಚನಗಳು ಇಂದಿಗೂ ಪ್ರಪಂಚದಾದ್ಯಂತ ಪ್ರಸ್ತುತವಾಗಿವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
- ಕೆಎಸ್‌ಆರ್‌ಟಿಸಿಯಲ್ಲಿ ಜಗಜ್ಯೋತಿ ಬಸವಣ್ಣನವರ 891 ನೇ ಜಯಂತ್ಯುತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಯಕವೇ ಕೈಲಾಸ ಎಂಬ ಘೋಷ ವಾಕ್ಯದೊಂದಿಗೆ ಬಸವಣ್ಣನವರು ಎಲ್ಲಾ ರೀತಿ ಸೇವೆಯ ಕಸುಬು ದಾರರನ್ನು ಗೌರವಿಸುತ್ತಿದ್ದರು. ಅಂದು ಕನ್ನಡದಲ್ಲಿ ರಚಿಸಿದ ವಚನಗಳು ಇಂದಿಗೂ ಪ್ರಪಂಚದಾದ್ಯಂತ ಪ್ರಸ್ತುತವಾಗಿವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಕೆಎಸ್‌ಆರ್‌ಟಿಸಿ ಘಟಕದ ಆವರಣದಲ್ಲಿ ಕೆಎಸ್‌ಆರ್‌ಟಿಸಿ ಬಸವ ಸಮಿತಿ ಸೋಮವಾರ ಏರ್ಪಡಿಸಿದ್ದ ಜಗಜ್ಯೋತಿ ಬಸವಣ್ಣನವರ 891 ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಜನಿಸಿ ಸಮಾನತೆಗಾಗಿ ವಚನ ಸಾಹಿತ್ಯವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ವಿಶ್ವಗುರು ಬಸವಣ್ಣನವರ 891 ನೇ ಜಯಂತಿ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಕುವೆಂಪು, ವಾಲ್ಮೀಕಿ ಸೇರಿದಂತೆ ಎಲ್ಲಾ ಮಹಾನ್ ಪುರುಷರ ಜಯಂತಿಯನ್ನು ಸರ್ವರೂ ಒಗ್ಗಟ್ಟಾಗಿ ಆಚರಿಸಿದಾಗ ಮಾತ್ರ ಅರ್ಥ ಬರುತ್ತದೆ. ಜೊತೆಗೆ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.ಈ ಮಹಾನ್ ಪುರುಷರನ್ನು ಒಂದು ಜನಾಂಗಕ್ಕೆ ಸೀಮಿತಗೊಳಿಸದೆ ಅವರ ವಿಚಾರಧಾರೆಗಳು ಶೋಷಿತ ರನ್ನು ಸಮಾಜದ ಮುನ್ನಲೆಗೆ ತರಬೇಕೆಂಬ ಹೋರಾಟದಲ್ಲಿ ಉದ್ದೇಶ ಹೊಂದಿದ್ದರು ಎಂದರು.ಸರ್ಕಾರಕ್ಕೆ ಸಮಾನಾಂತರವಾಗಿ ಇಂದು ಮಠ ಮಾನ್ಯಗಳು ವಿದ್ಯೆ ಮತ್ತು ಅನ್ನದಾಸೋಹ ನಡೆಸುತ್ತಿವೆ. ವಿವಿಧ ಸಮಾಜದ ಮಠಗಳಲ್ಲಿಯೂ ವಿದ್ಯಾ ಕೇಂದ್ರಗಳನ್ನು ಸ್ಥಾಪಿಸಿ ಸಮಾಜದಲ್ಲಿ ಬಡತನದಲ್ಲಿರುವ ಶೋಷಿತರ ಮಕ್ಕಳಿಗೆ ಈ ದ್ವಿದಾಸೋಹ ನೀಡುವ ಮೂಲಕ ಸಮಾಜದಲ್ಲಿ ಸಮಾನತೆ ತರಲು ಗುರಿ ಹೊಂದಲಾಗಿದೆ ಎಂದು ಹೇಳಿದರು.ಎಲ್ಲಾ ಧರ್ಮದ ಶೋಷಿತರನ್ನು ಅನುಭವ ಮಂಟಪದಲ್ಲಿ ತಂದು ಸರ್ವರಿಗೂ ಸಮ ಪಾಲು, ಸರ್ವರಿಗೂ ಸಮ ಬಾಳು ಎಂಬುದು ಬಸವಣ್ಣನವರ ಆದರ್ಶಗಳಲ್ಲಿ ಒಂದಾಗಿದೆ. ಇವತ್ತಿನ ಪ್ರಜಾ ಪ್ರಭುತ್ವದ ಪರಿಕಲ್ಪನೆ ಬಸವಣ್ಣ ಅಂದೇ ಜಾರಿಗೆ ತಂದಿದ್ದರು ಎಂದು ತಿಳಿಸಿದರು.ಬೆಟ್ಟ ಬಾಗುವುದಿಲ್ಲ, ಕಷ್ಟಪಟ್ಟು ಹತ್ತಿದರೆ ನಿನ್ನ ಪಾದದ ಕೆಳಗೆ ಇರುತ್ತದೆ ಎಂದು ಬಸವಣ್ಣನವರು ಹೇಳಿದ್ದರು. ನಾವು ಕಷ್ಟಪಟ್ಟು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದೇವಿರಮ್ಮ ಬೆಟ್ಟವನ್ನು ಪ್ರತೀ ವರ್ಷ ಹತ್ತುತ್ತೇವೆ, ಮೇಲೆ ನಿಂತು ನೋಡಿದರೆ ಪ್ರಕೃತಿ ಸೊಬಗು ಕಾಣಲು ಸಂತೋಷವಾಗುತ್ತಿದೆ ಎಂದರು.ಪ್ರತಿಯೊಬ್ಬರೂ ತಮ್ಮ ವೃತ್ತಿಯನ್ನು ಪ್ರೀತಿಯಿಂದ ಗೌರವಿಸಿ ಸೇವೆ ಸಲ್ಲಿಸಿದಾಗ ಮಾತ್ರ ಅದು ಹೂವಿ ನಷ್ಟು ಹಗುರವಾಗುತ್ತದೆ. ಜೊತೆಗೆ ತಮ್ಮ ಜೀವನ ಸುಖಮಯವಾಗಿ ಸಾಗಲು ನೆರವಾಗುತ್ತದೆ ಎಂದು ಹೇಳಿದರು. ಬಸವ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಪ್ರಪಂಚದಲ್ಲಿ ಜಾತಿ, ಮತ, ಪಂಥ, ಭೇದಭಾವವಿಲ್ಲದೆ ಎಲ್ಲರೂ ಒಂದೇ ಎಂದು ಸಾರಿದ ಮಹಾನ್ ವ್ಯಕ್ತಿ ವಿಶ್ವಗುರು ಬಸವಣ್ಣ 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ್ದಾರೆ ಎಂದು ತಿಳಿಸಿದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಕಲ್ಯಾಣ ನಗರದ ಬಸವ ಮಂದಿರದ ಡಾ.ಬಸವ ಮರುಳಸಿದ್ದ ಶ್ರೀಗಳು ವಹಿಸಿ ಆಶೀರ್ವಚನ ನೀಡಿದರು. ಸಾಹಿತಿ ಚಟ್ನಳ್ಳಿ ಮಹೇಶ್ ಉಪನ್ಯಾಸ ನೀಡಿದರು. ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ಡಾ. ವಿನಾಯಕ್ ಸಿಂದಿಗೆರೆ, ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್, ಬಿ.ಎಸ್. ರಮೇಶ್, ಭಾಗ್ಯ, ಎಸ್.ಮಮತ, ಬೇಬಿಬಾಯಿ, ಕೆ.ಜಯಣ್ಣ, ಸಿ.ಎಸ್ ಸ್ಮಿತಾ, ಎಚ್.ಮಂಜುನಾಥ್, ಉಪಾಧ್ಯಕ್ಷರಾದ ಬಿ.ಟಿ.ರವಿಕುಮಾರ್, ಮಧು ಕುಮಾರ್, ಕುಮಾರೇಗೌಡ ಉಪಸ್ಥಿತರಿದ್ದರು. ಸದಾಶಿವ ಸ್ವಾಗತಿಸಿದರು. ಜಯಶಂಕರ್ ವಂದಿಸಿದರು. 10 ಕೆಸಿಕೆಎಂ 5ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ಘಟಕದ ಆವರಣದಲ್ಲಿ ಕೆಎಸ್‌ಆರ್‌ಟಿಸಿ ಬಸವ ಸಮಿತಿ ಸೋಮವಾರ ಏರ್ಪಡಿಸಿದ್ದ ಜಗಜ್ಯೋತಿ ಬಸವಣ್ಣನವರ 891 ನೇ ಜಯಂತ್ಯುತ್ಸವವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಬಿ.ಎಚ್. ಹರೀಶ್, ರಾಧಾ ಸುಂದರೇಶ್, ಜಗದೀಶ್‌ಕುಮಾರ್ ಇದ್ದರು.