ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಬಸವಣ್ಣ ಶ್ರಮಿಸಿದ್ದರು: ಚೇತನ್ ಕುಮಾರ್

| Published : May 12 2024, 01:21 AM IST

ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಬಸವಣ್ಣ ಶ್ರಮಿಸಿದ್ದರು: ಚೇತನ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕಗಳನ್ನು ತಿದ್ದುವ ಪ್ರಯತ್ನ ಮಾಡಿದ ವಿಶ್ವಗುರು ಬಸವಣ್ಣ ಅವರ ತತ್ವ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು. 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ, ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಹೋರಾಡುವ ಮೂಲಕ ಸಾಮಾಜಿಕ ಅಸಮಾನತೆ ತೊಡೆದುಹಾಕಲು ಬಸವಣ್ಣ ಶ್ರಮಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ, ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಹೋರಾಡುವ ಮೂಲಕ ಸಾಮಾಜಿಕ ಅಸಮಾನತೆ ತೊಡೆದುಹಾಕಲು ಬಸವಣ್ಣ ಶ್ರಮಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಚೇತನ್ ಕುಮಾರ್ ತಿಳಿಸಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣ ಜಯಂತಿಯಲ್ಲಿ ಮಾತನಾಡಿ, ತಮ್ಮ ಹೋರಾಟದ ಮೂಲಕ ಬಸವಣ್ಣನವರು ಸಾಮಾಜಿಕ ಅಸಮಾನತೆ ತೊಡೆದುಹಾಕಲು ಶ್ರಮಿಸಿ ಅಂರ್ತಜಾತಿ ವಿವಾಹ ಮಾಡಿಸಿದ್ದರು. ಅಲ್ಲದೇ, ಅಸ್ಪೃಶ್ಯತೆ ತೊಡೆದು ಹಾಕಿ ಸಮಾಜಗಳಿಗೆ ಲಿಂಗಧಾರಣೆ ಮಾಡುವ ಮೂಲಕ ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸಿದರು ಎಂದರು.

ಅನುಭವ ಮಂಟಪವನ್ನು ಸ್ಥಾಪನೆ ಮಾಡಿ ಎಲ್ಲ ಸಮುದಾಯಗಳನ್ನು ಒಂದೆಡೆ ಸೇರಿಸಿ ಸಮಾನತೆ ಸಾರಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ವಚನ ಸಾಹಿತ್ಯದ ಪಾತ್ರ ತುಂಬಾ ದೊಡ್ಡದು ಎಂದು ಅಭಿಪ್ರಾಯಪಟ್ಟರು.

ಕಸಾಪ ತಾಲೂಕು ಮಾಜಿ ಅಧ್ಯಕ್ಷ ದೇವರಾಜು ಕೊದೇನಕೊಪ್ಪಲು ಮಾತನಾಡಿ, ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕಗಳನ್ನು ತಿದ್ದುವ ಪ್ರಯತ್ನ ಮಾಡಿದ ವಿಶ್ವಗುರು ಬಸವಣ್ಣ ಅವರ ತತ್ವ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಜನರು ಆಡಂಬರ ಬದುಕಿಗೆ ಹೆಚ್ಚು ಒತ್ತು ನೀಡುವುದರಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಬಸವಣ್ಣ ಅವರ ವಚನ ಸಾಹಿತ್ಯ ಓದಿ ಜೀವನವನ್ನು ಸರಳವಾಗಿ ಮಾಡಿಕೊಳ್ಳಬೇಕು. ಕಾಯಕ, ದಾಸೋಹ ಮತ್ತು ಸಮಾನತೆ ಬೋಧಿಸಿದ ಬಸವಣ್ಣನವರ ಆದರ್ಶಗಳನ್ನು ಪರಿಪಾಲಿಸಬೇಕು ಎಂದರು.

ಈ ವೇಳೆ ಪ್ರಮುಖರಾದ ಎಂ.ಎನ್.ಜಯರಾಜು, ಮಹದೇವಸ್ವಾಮಿ, ಎಚ್.ಎನ್.ಪುಟ್ಟಸ್ವಾಮಿ, ಮಹಾಲಿಂಗು, ಬಿ.ಚುಂಚಣ್ಣ, ದೇವರಾಜು, ಉಮೇಶ್, ಚಿಕ್ಕಮರಿಗೌಡ, ಶಾಂತರಾಜು, ಮಧು ಕುಮಾರ್ ಇದ್ದರು.

ಮಂಡ್ಯ ನಗರದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪಿಸದಿದ್ದರೆ ಹೋರಾಟ

ಮಂಡ್ಯ:ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದರಷ್ಟೇ ಸಾಲದು ಮಂಡ್ಯ ಜಿಲ್ಲೆಯ ಜನರ ಹಲವು ವರ್ಷಗಳ ಬೇಡಿಕೆಯಾದ ಬಸವಣ್ಣನವರ ಪುತ್ಥಳಿಯನ್ನು ನಗರದ ಡೀಸಿ ಕಚೇರಿ ಎದುರಿನ ಉದ್ಯಾನವನದಲ್ಲಿ ಸ್ಥಾಪಿಸಬೇಕು ಎಂದು ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ ಒತ್ತಾಯಿಸಿದರು.

ನಗರದ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳಿಗೆ ಪುತ್ಥಳಿ ಸ್ಥಾಪನೆಗಾಗಿ ಮನವಿ ಸಲ್ಲಿಸಿ ಈ ಹಿಂದೆ ಹತ್ತಾರು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬಸವಣ್ಣನವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಯಲ್ಲೂ ಅಳವಡಿಸಬೇಕೆಂದು ಸರ್ಕಾರ ಆದೇಶ ಮಾಡಿದ್ದರೂ ಜಿಪಂ ಕಾವೇರಿ ಸಭಾಂಗಣ ಸೇರಿದಂತೆ ಹಲವು ಪೊಲೀಸ್ ಠಾಣೆಗಳು, ಆಸ್ಪತ್ರೆಗಳು, ಗ್ರಾಪಂ, ತಾಪಂ, ಸರ್ಕಾರಿ ಶಾಲೆಗಳು ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರವನ್ನು ಅಳವಡಿಸಿಲ್ಲ ಎಂದರು.

ಬಸವ ಜಯಂತಿಯಂದು ಸಾರ್ವಜನಿಕರು ಮಾಲಾರ್ಪಣೆ ಮಾಡಲು, ಗೌರವ ಸಲ್ಲಿಸಲು ನಗರದಲ್ಲಿ ಪುತ್ಥಳಿ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸದಿದ್ದರೆ ಮುಂಬರುವ ದಿನಗಳಲ್ಲಿ ಹತ್ತುಹಲವು ಸಂಘಟನೆಗಳ ಜೊತೆಗೂಡಿ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಹೋರಾಟದ ಹಾದಿ ಬೇಡ ನಿಯಮಾವಳಿಗಳನ್ನು ಪರಿಶೀಲಿಸಿ ಬೇಡಿಕೆಗೆ ಸ್ಪಂದಿಸಲಾಗುವುದು ಎಂದರು.