ಜಾತಿರಹಿತ ಸಮಾಜಕ್ಕೆ ಮುನ್ನುಡಿ ಬರೆದಿದ್ದು ಬಸವಣ್ಣ

| Published : May 02 2025, 12:07 AM IST

ಸಾರಾಂಶ

ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಜಾತಿರಹಿತ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದು ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ್ದಾರೆ

ಕನ್ನಡಪ್ರಭ ವಾರ್ತೆ ವಿಜಯಪುರ

ಶಿವಶರಣ ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಜಾತಿರಹಿತ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದು ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ಪ್ರಾಚಾರ್ಯರಾದ ಆರ್.ಎಂ.ಮಿರ್ದೆ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿಯೇ ಸಮಾನತೆ ಬೀಜವನ್ನು ಬಿತ್ತಿ ಹೆಮ್ಮರವಾಗಿ ಬೆಳೆಯುವಂತೆ ಮಾಡಿದ ಮಹಾನ್ ವ್ಯಕ್ತಿ ಬಸವಣ್ಣ. ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸತ್ಯ ಮತ್ತು ಕಾಯಕ ನಿಷ್ಠೆ ಸಾರಿದರು. ಸಮಾನ ಮನಸ್ಕರನ್ನು ಒಂದುಗೂಡಿಸಿ ಮನುಕುಲ ಎಚ್ಚರಗೊಳ್ಳುವಂತೆ ಮಾಡಿದರು. ಅವರಿಂದ ಕೇವಲ ವಚನ ಸಾಹಿತ್ಯವಷ್ಟೇ ಅಲ್ಲ ಕನ್ನಡ ಸಾಹಿತ್ಯವೂ ಶ್ರೀಮಂತಗೊಂಡಿದೆ ಎಂದರು.

ಮನುಕುಲದ ಉದ್ಧಾರಕ ಜಗಜ್ಯೋತಿ ಬಸವಣ್ಣನವರು ಅನುಸರಿಸಿರುವ ತತ್ವ ಸಿದ್ಧಾಂತಗಳನ್ನು ಯುವಪೀಳಿಗೆ ಅರ್ಥೈಸಿಕೊಂಡು ನಡೆದರೆ ಸಮಸಮಾಜ ನಿರ್ಮಾಣ ಕಂಡಿತವಾಗಿಯೂ ಸಾಧ್ಯವಿದೆ. ವಿದ್ಯಾರ್ಥಿಗಳು ಸಾಮಾಜಿಕ ಬದಲಾವಣೆಯ ಹರಿಕಾರರು, ಸಾಮಾಜಿಕ ಚಿಂತಕರು, ಶರಣರು ಹಾಗೂ ಸಂತರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.

ಬಸವಣ್ಣ ಜಾತಿ ವ್ಯವಸ್ಥೆಯನ್ನು ಬಲವಾಗಿ ಖಂಡಿಸಿ ವಿದ್ವತ್ತ ಜ್ಞಾನದ ಮೂಲಕ ವಚನ ಸಾಹಿತ್ಯ ರಚಿಸಿ ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ಮಾಡಿದರು. ೧೨ನೇ ಶತಮಾನದಲ್ಲಿ ಸಾಮಾಜಿಕ ವ್ಯವಸ್ಥೆ ಬದಲಾವಣೆಗೆ ಮುನ್ನುಡಿ ಬರೆದ ಮಹಾಪುರುಷ. ಅಂದು ಅವರು ಬಿತ್ತಿರುವ ಜ್ಞಾನದ ಬೆಳಕಿನಲ್ಲಿ ನಾವು ನಡೆದರೇ ನಮ್ಮ ಬದುಕು ಹಸನಾಗುತ್ತದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ದೊಡ್ಡಮನಿ ಮಾತನಾಡಿ, ಹಿಂದೆ ಬಸವಣ್ಣ ಎಂದರೆ ಎಲ್ಲರೂ ಎತ್ತು ಎಂದು ಭಾವಿಸಿದ್ದರು. ಆದರೆ ಬಸವಣ್ಣ ಎಂದರೆ ಯಾರು ಎನ್ನುವುದನ್ನು ಪ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ವಚನ ಸಾಹಿತ್ಯ ಬೆಳಕಿಗೆ ತಂದಾಗಲೇ ಗೊತ್ತಾಗಿದ್ದು ಅವರೊಬ್ಬ ಸಾಂಸ್ಕೃತಿಕ ನಾಯಕ ಎನ್ನುವುದು ಎಂದರು. ಬಸವ ರತ್ನ ಪ್ರಶಸ್ತಿ ಪುರಸ್ಕೃತ ಪ್ರೊ.ಆರ್.ಡಿ.ಜೋಶಿ ಮಾತನಾಡಿದರು.

ಡಾ.ಉಷಾದೇವಿ ಹಿರೇಮಠ, ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಡಾ.ಅನಿಲ ನಾಯಕ, ಪಿಯುಸಿ ಪ್ರಾಚಾರ್ಯ ಪ್ರೊ.ಸಿ.ಬಿ.ಪಾಟೀಲ್, ಐಕ್ಯೂಎಸಿ ಡೈರೆಕ್ಟರ್ ಡಾ.ಪಿ.ಎಸ್.ಪಾಟೀಲ್, ಪ್ರೊ.ವಿದ್ಯಾ ಪಾಟೀಲ, ಡಾ.ಮಹೇಶ ಕುಮಾರ, ಡಾ.ತರನ್ನುಮ್ ಜಬೀನ್‌ಖಾನ್, ಪ್ರೊ.ಶ್ರೀಧರ ಜೋಶಿ, ಡಾ.ಶ್ರೀಶೈಲ ಉಂಕಿ, ಪ್ರೊ.ಎಂ.ಎಸ್.ಜೇವೂರ, ಡಾ.ಮಂಜುನಾಥ ಜ್ಯೋತಿ, ಡಾ.ಮಿಲನ ರಾಠೋಡ್, ಡಾ.ಅನೀಲ ಪಾಟೀಲ, ಪ್ರೊ.ಮಲಿಕ್ ಜಮಾದಾರ, ಡಾ.ಗಿರಿಜಾ ನಿಂಬಾಳ್, ಪ್ರೊ.ಶ್ರೀದೇವಿ ಬೈರವಾಡಗಿ, ಪ್ರೊ.ಭಾರತಿ ಕಾರಕಲ್, ಪ್ರೊ.ರೂಪಾ ಮೋಟಗಿ, ಪ್ರೊ.ಸಿ.ಎನ್.ಕುನ್ನೂರ, ಡಾ.ಕೃಷ್ಣಾ ಮಂಡ್ಲಾ ಸೇರಿ ಮುಂತಾದವರಿದ್ದರು.