ಬಸವಣ್ಣನ ವಿಚಾರಗಳು ಸಾರ್ವಕಾಲಿಕ: ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ

| Published : May 01 2025, 12:46 AM IST

ಸಾರಾಂಶ

ಬಸವಣ್ಣನವರು 12ನೇ ಶತಮಾನದಲ್ಲಿ ನುಡಿದ ವಿಚಾರಗಳು, ಚಿಂತನೆಗಳು ಮತ್ತು ವಚನಗಳು ನಮಗೆಲ್ಲ ಮಾರ್ಗದರ್ಶಿ ಸೂತ್ರಗಳಾಗಿವೆ.

ಹಳಿಯಾಳ: ಬಸವಣ್ಣನವರು 12ನೇ ಶತಮಾನದಲ್ಲಿ ನುಡಿದ ವಿಚಾರಗಳು, ಚಿಂತನೆಗಳು ಮತ್ತು ವಚನಗಳು ನಮಗೆಲ್ಲ ಮಾರ್ಗದರ್ಶಿ ಸೂತ್ರಗಳಾಗಿವೆ. ಬಸವಣ್ಣನವರು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದೇ ಮಾನವ ಕುಲದ ಆದರ್ಶ ಮಾರ್ಗದರ್ಶಿಯಾಗಿದ್ದಾರೆ ಎಂದು ಹಳಿಯಾಳ ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ ಹೇಳಿದರು.

ಬುಧವಾರ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಸವಣ್ಣನವರು ವಿಶ್ವ ಗುರುಗಳಾಗಿದ್ದು, ಅವರು ಸಮಾಜದ ಪರಿವರ್ತನೆಗೆ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಸುವಂತಹ, ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವ ಕೆಲಸವನ್ನು ಬಸವಣ್ಣನವರು ತಮ್ಮ ಜೀವಿತಾವಧಿಯಲ್ಲಿ ಮಾಡಿ ತೋರಿಸಿದ್ದಾರೆ. ಸರ್ವರಿಗೂ ಮಾದರಿ ಆಗಿದ್ದಾರೆ. ಕಾಯಕಯೋಗಿ ಬಸವಣ್ಣನವರನ್ನು ನಾವು ಸದಾ ಸ್ಮರಿಸೋಣ ಎಂದರು.

ಬಸವಣ್ಣನವರು ಸಾಮಾಜಿಕ ಜಾಗೃತಿ ಮಾಡುವುದರ ಜೊತೆಯಲ್ಲಿ ಅಂತರ ಜಾತೀಯ ವಿವಾಹ, ಸಹಭೋಜನ, ದಾಸೋಹದ ಮಹತ್ವವನ್ನು ಪರಿಚಯಿಸುವುದರ ಜೊತೆಯಲ್ಲಿ ಅಸ್ಪೃಶ್ಯತೆ ನಿವಾರಣೆ, ಸ್ತ್ರೀ ಸಮಾನತೆಯಂತಹ ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿದ್ದಾರೆ. ಈ ಮೂಲಕ ಸಮಾಜದಲ್ಲಿ ಬೇರೂರಿದ ಜಾತಿ ಭೇದ ಲಿಂಗ ತಾರತಮ್ಯವಿಲ್ಲದ ಸಮಾಜ ರೂಪಿಸುವ ಪವಿತ್ರ ಕಾಯಕವನ್ನು ಆರಂಭಿಸಿದರು ಎಂದರು.

ಜಿಲ್ಲಾ ಶರಣ ಸಾಹಿತ್ಯ ಅಧ್ಯಕ್ಷ ಶಿವದೇವ ದೇಸಾಯಸ್ವಾಮಿ, ತಾಲೂಕು ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ ಮಾತನಾಡಿ, ಬಸವಣ್ಣನವರು ನುಡಿದ ವಚನಗಳನ್ನು ಪಾಲಿಸಿದರೆ ಸಮಾಜ ಹಾಗೂ ನಮ್ಮ ಬದುಕು ಸನ್ಮಾರ್ಗದಲ್ಲಿ ನಡೆಯುವುದು ಎಂದರು.

ಶಿವರುದ್ರಗೌಡ ಪಾಟೀಲ ಬಸವಣ್ಣನವರ ಕುರಿತು ಉಪನ್ಯಾಸ ನೀಡಿ, ಜಗಜ್ಯೋತಿ ಬಸವಣ್ಣ ಸಾರಿದ ಮಾನವೀಯತೆಯ ಏಕತೆ, ಸಮಾನತೆ, ಸಹೋದರದ ತತ್ವಗಳನ್ನು ಪಾಲಿಸಿದರೆ ಇಡೀ ಮಾನವ ಕುಲ ಮತ್ತು ಜಗತ್ತು ಶಾಂತೀಯ ನೆಲೆಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಲಿಂಗಾಯತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಲಿಂಗರಾಜ್ ಹಿರೇಮಠ, ಶ್ರೀಕ್ಷೇತ್ರ ಉಳವಿ ಟ್ರಸ್ಟ್ ಉಪಾಧ್ಯಕ್ಷ ಪ್ರಕಾಶ ಕಿತ್ತೂರ, ಪೇಟೆ ಬಸವೇಶ್ವರ ದೇವಸ್ಥಾನ ಅಧ್ಯಕ್ಷ ಶಿವು ಶೆಟ್ಟರ, ಬಸವ ಕೇಂದ್ರದ ಅಧ್ಯಕ್ಷ ಬಸವರಾಜ ಗಾಣಿಗೇರ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಜಿ.ಡಿ.ಗಂಗಾಧರ, ಪುರಸಭೆ ನಾಮನಿರ್ದೇಶಿತ ಸದಸ್ಯ ರವಿ ತೋರಣಗಟ್ಟಿ, ಸತ್ಯಜಿತ ಗಿರಿ, ಬಿಇಒ ಪ್ರಮೋದ ಮಹಾಲೆ, ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಷ ನಾಯಕ, ಪ್ರಮುಖರಾದ ಪ್ರಕಾಶ ಅಂಗಡಿ, ಗ್ರೇಡ್-2 ತಹಸೀಲ್ದಾರ ಹನುಮಂತ ಪರೋಡಕರ, ಉಪ-ತಹಸೀಲ್ದಾರ ಅಶೋಕ ಚನ್ನಬಸವಣ್ಣನವರ ಇದ್ದರು. ಗಾಯಕಿ ಮಹಾನಂದ ಗೋಸಾಯಿ ವಚನಗಾಯನ ಮಾಡಿದರು, ರಮೇಶ ಪಾಟೀಲ ಹಾಗೂ ಪರಶುರಾಮ ಶಿಂಧೆ ಕಾರ್ಯಕ್ರಮ ನಿರ್ವಹಿಸಿದರು.