ಸಾರಾಂಶ
ಹಾನಗಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾಲೂಕಿನಲ್ಲಿ ಬಿಜೆಪಿ ಅವಧಿಯಲ್ಲಿ ಸಿ.ಎಂ. ಉದಾಸಿ ಅವರು ಮಂಜೂರಿ ಮಾಡಿಸಿ ಕಾಮಗಾರಿ ಪೂರೈಸಿದ ಯೋಜನೆಗಳನ್ನು ಉದ್ಘಾಟಿಸಲು ಮೇ 4ರಂದು ಬರುತ್ತಿದ್ದಾರೆ ಎಂಬ ಸತ್ಯವನ್ನು ಯಾರೂ ಮರೆಮಾಚಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಹಾದಿಮನಿ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂರಾರು ಕೋಟಿ ರು. ವೆಚ್ಚದ ಬಾಳಂಬೀಡ ಏತ ನೀರಾವರಿ ಯೋಜನೆ, ಹಿರೇಕಾಂಸಿ ಏತ ನೀರಾವರಿ ಯೋಜನೆ, ಸಮ್ಮಸಗಿ ನೀರಾವರಿ ಯೋಜನೆ, ಪಟ್ಟಣದ ಕಚೇರಿ ಸಂಕೀರ್ಣಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿವೆ. ಇವು ಕಾಂಗ್ರೆಸ್ ಅವಧಿಯ ಕಾಮಗಾರಿಗಳಲ್ಲ. ಇದು ನಮ್ಮ ಬಿಜೆಪಿ ಸರ್ಕಾರದ ಹೆಮ್ಮೆ ಎಂದರು.ತಾಲೂಕಿನಲ್ಲಿ ತೀರ ಅಗತ್ಯವಾದ ಕೂಸನೂರು ಏತನೀರಾವರಿ, ನರೇಗಲ್ಲ ಏತ ನೀರಾವರಿ, ಮೂಡಿ ಏತನೀರಾವರಿ ಯೋಜನೆಗಳು, ಬೆಳಗಾಲಪೇಟೆ, ತಿಳವಳ್ಳಿ, ಚಿಕ್ಕಾಂಸಿಹೊಸೂರುಗಳನ್ನು ಹೋಬಳಿ ಕೇಂದ್ರಗಳನ್ನಾಗಿ ಮಾಡುವುದು, ತಿಳವಳ್ಳಿಗೆ ಪೊಲೀಸ್ ಸ್ಟೇಶನ್ ಮಂಜೂರಿ, ತಾಲೂಕಿನಲ್ಲಿನ ಎಲ್ಲ ರಸ್ತೆಗಳ ಮರು ಡಾಂಬರೀಕರಣ, ನನೆಗುದಿಗೆ ಬಿದ್ದ ಮಾವು ಸಂಸ್ಕರಣ ಘಟಕ ಕಾಮಗಾರಿ ಆರಂಭ, ರೈತರ ಹೊಲಕ್ಕೆ ಹೋಗುವ ರಸ್ತೆಗಳ ನಿರ್ಮಾಣ ತೀರ ಅವಶ್ಯವಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಶೀಘ್ರ ಈ ಕಾರ್ಯಗಳಿಗೆ ಆದ್ಯತೆ ನೀಡಬೇಕಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ತಾಲೂಕಿನಲ್ಲಿ ಸಾರಿಗೆ, ಕಾನೂನು ಸುವ್ಯವಸ್ಥೆಗಳು ದಾರಿ ತಪ್ಪಿವೆ. ವಿದ್ಯುತ್ ಆವಾಂತರಕ್ಕೆ ರೈತರೂ ಸೇರಿದಂತೆ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದರು.ನೀರಾವರಿಗೆ ಬಹುಮುಖ್ಯ ಪ್ರಾಮುಖ್ಯತೆ ನೀಡಿದ್ದ ಹಾಗೂ ಬಾಳಂಬೀಡ ಏತ ನೀರಾವರಿ ಯೋಜನೆಗೆ ಬದ್ಧರಾಗಿ ಕೆಲಸ ಮಾಡಿದ ಸಿ.ಎಂ. ಉದಾಸಿ ಅವರ ಹೆಸರನ್ನು ಬಾಳಂಬೀಡ ಏತ ನೀರಾವರಿ ಯೋಜನೆಗೆ ಇಡಬೇಕು. ಬಸಾಪುರ ಏತ ನೀರಾವರಿ ಯೋಜನೆಗೆ ಮನೋಹರ ತಹಶೀಲ್ದಾರ ಅವರ ಹೆಸರನ್ನು ಇಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಕೋಷ್ಟ ಸಹ ಸಂಯೋಜಕ ಭೋಜರಾಜ ಕರೂದಿ, ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಪ್ಪ ತಲ್ಲೂರ, ಜಿಲ್ಲಾ ಕಾನೂರು ಪ್ರಕೋಷ್ಟ ಸಂಚಾಲಕ ಎಸ್.ಎಂ. ಕೋತಂಬರಿ, ಬಿಜೆಪಿ ಮುಖಂಡ ಬಸು ಹಾದಿಮನಿ ಇದ್ದರು.ದೇವರಾಜ ಹಂಚಿನಮನಿಗೆ ಡಾಕ್ಟರೇಟ್
ರಾಣಿಬೆನ್ನೂರು: ನಗರದ ಬಿಎಜೆಎಸ್‌ಎಸ್ ಮಹಿಳಾ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ದೇವರಾಜ ಸೋಮಶೇಖರಪ್ಪ ಹಂಚಿನಮನಿ ಅವರಿಗೆ ಡಾಕ್ಟರೇಟ್ ಪದವಿ ದೊರೆತಿದೆ. ದೇವರಾಜ ಹಂಚಿನಮನಿ ಅವರು ಮಂಡಿಸಿದ ಸ್ವಾಮಿ ವಿವೇಕಾನಂದಾಸ್ ಇನ್‌ಪ್ಲುಯನ್ಸ್ ಆನ್ ರಾಜಾರಾವ್ಸ್ ವರ್ಕ್ಸ್ ಎಂಬ ಪ್ರಬಂಧವನ್ನು ಮನ್ನಿಸಿ ಕರ್ನಾಟಕ ವಿಶ್ವವಿದ್ಯಾಲಯವು ಅವರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ. ಅವರಿಗೆ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕಿ ಡಾ. ಕೃಷ್ಣಾಕುಮಾರಿ ಮನವಳ್ಳಿ ಮಾರ್ಗದರ್ಶನ ಮಾಡಿದ್ದರು.